ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಝಿ ಕಲೆ ಅಪರೂಪದ ಸಾಧಕ

ಕಲೆ ಒತ್ತಡ ಕಳೆಯುವ ಸಾಧನ ಎಂದು ನಂಬಿರುವ ಎಸ್.ಎಫ್.ಹುಸೇನಿ
Last Updated 2 ಆಗಸ್ಟ್ 2020, 7:53 IST
ಅಕ್ಷರ ಗಾತ್ರ

ಮಾಗಡಿ: ಸಾಂಝಿ ಕಲಾವಿದ ಎಸ್.ಎಫ್.ಹುಸೇನಿ ಕಲಾವಲಯದಲ್ಲಿ ’ಮೈಸೂರು ಹುಸೇನಿ‘ ಎಂದೇ ಚಿರಪರಿಚಿತರು. ತಂದೆ ಸಯ್ಯದ್ ಪೀರ್, ತಾಯಿ ಜೀನಾತ್‍ವುನ್ನಿಸಾ ಬೀ ಅವರ‍ ಪುತ್ರನಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ನಲ್ಲಿ ಜನಿಸಿದರು. ಬಾಲ್ಯದ ದಿನಗಳಲ್ಲಿ ಚಿತ್ರಕಲೆ ಬಗ್ಗೆ ಆಸಕ್ತರಾಗಿ ಕಲೆಯಲ್ಲಿಯೇ ಜೀವನ ರೂಪಿಸಿಕೊಂಡವರು.

ಮೈಸೂರಿನ ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಫೈನ್ ಆರ್ಟ್ ಡಿಪ್ಲೊಮಾ ಮತ್ತು ಆರ್ಟ್‍ಮಾಸ್ಟರ್ ಶಿಕ್ಷಣ ಪಡೆದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್.ಎ ಪದವಿ ಪಡೆದಿದ್ದಾರೆ.

ಹುಸೇನಿ ಸದಾ ಹೊಸತನಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಒಂದೇ ಬಗೆ ಕಲಾಕೃತಿಗಳಿಗೆ ಸೀಮಿತವಾಗದೆ ಹಲವು ಪ್ರಯೋಗಾತ್ಮಕ ಕೆಲಸಗಳಲ್ಲಿ ತೊಡಗಿದ್ದಾರೆ. ವಿಶಿಷ್ಟ ಬಗೆ ಕಾಗದ ಭಿತ್ತಿ ಶಿಲ್ಪಗಳು, ಏಕರೇಖಾ ಚಿತ್ರಗಳು, ಪ್ರಯೋಗಾತ್ಮಕ ಅಮೂರ್ತ ಛಾಯಾಚಿತ್ರಗಳು ಮತ್ತು ಸಾಂಝಿ ಜನಪದ ಕಾಗದ ಕತ್ತರಿ ಕಲೆ ಅವರ ಕಲಾಪ್ರತಿಭೆಗೆ ಸಾಕ್ಷಿಯಾಗಿದೆ.

ಇವರ ಚಿತ್ರಕಲೆಯನ್ನು ಮೈಸೂರು, ಬೆಂಗಳೂರು, ಧಾರವಾಡ, ಕಲ್ಬುರ್ಗಿ, ಉಡುಪಿ ಹೀಗೆ ಅನೇಕ ಕಡೆಗಳಲ್ಲಿ 15 ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಸುಮಾರು 110ಕ್ಕೂ ಹೆಚ್ಚು ಸಮೂಹ ಕಲಾಪ್ರದರ್ಶನ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ಮುಂಬೈ, ದೆಹಲಿ, ಚನ್ನೈ ನಗರಗಳಲ್ಲಿ ಚಿತ್ರಕಲಾ ಪ್ರದರ್ಶನ ನೀಡಿದ್ದಾರೆ.

ಗ್ರಾಮೀಣ ಭಾಗದ ಜನರಿಗೆ ಕಲೆ ತಲುಪುವ ಉದ್ದೇಶದಿಂದ ತಮ್ಮದೇ ‘ಸಾಂಝಿ ಕಲಾಲೋಕ ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹತ್ತು ವರ್ಷದಿಂದ ಚಿತ್ರಕಲಾ ಪ್ರದರ್ಶನ, ಕಾರ್ಯಾ ಗಾರ ನಡೆಸುತ್ತಾ ಬಂದಿದ್ದಾರೆ. ಅವರ ಅನೇಕ ಕಲಾಕೃತಿಗಳು ದೇಶ ಮತ್ತು ವಿದೇಶಗಳು (ಆಸ್ಟ್ರೇಲಿಯಾ, ಫಿನ್‍ಲ್ಯಾಂಡ್, ಜರ್ಮನ್, ದಕ್ಷಿಣ ಆಫ್ರಿಕಾ, ದೋಹ) ಖಾಸಗಿ ಸಂಗ್ರಹಕಾರರಲ್ಲಿ ಸಂಗ್ರಹಗೊಂಡಿವೆ.

ಇವರ ಕಲಾಪ್ರತಿಭೆಗೆ ಅನೇಕ ಪ್ರಶಸ್ತಿ ಸನ್ಮಾನಗಳು ಸಂದಿವೆ. ಅವುಗಳಲ್ಲಿ ಮುಖ್ಯವಾಗಿ 1999ರಲ್ಲಿ ಮೈಸೂರು ದಸರಾ ಕಲಾ ಪ್ರದರ್ಶನ ಪ್ರಶಸ್ತಿ, 2001ರಲ್ಲಿ ಮೈಸೂರಿನ ಕನ್ನಡ ಸಂಸ್ಕೃತಿ ಇಲಾಖೆಯಿಂದ ‘ಯುವ ಸಂಭ್ರಮ‘ ಪ್ರಶಸ್ತಿ, ಧಮಸ್ಥಳದ ಶಾಂತಿವನಟ್ರಸ್ಟ್ ವತಿಯಿಂದ ನಡೆಯುವ ರಾಜ್ಯ ಮಟ್ಟದ ಅಂಚೆ ಕುಂಚ ಸ್ಪರ್ಧೆಯಲ್ಲಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

’ಒತ್ತಡವೇ ತುಂಬಿರುವ ಈ ಜಗತ್ತಿನಲ್ಲಿ ಕಲೆಯೇ ಒತ್ತಡ ಕಳೆಯುವ ಸಾಧನ‘ ಎಂದೇ ನಂಬಿರುವ ಹುಸೇನಿ ಅವರು ಒಂದು ವಾರದ ಕಾಲ ಹೊಂಬಾಳಮ್ಮನಪೇಟೆ ಚಲುವರಾಯಸ್ವಾಮಿ ಕನ್ನಡ ಕಲಾಬಳಗದ ಸಹಯೋಗದಲ್ಲಿ ಮಕ್ಕಳಿಗೆ ಉಚಿತವಾಗಿ ಕಾಗದ ಕತ್ತರಿಸುವ ಮೂಲಕ ವಿವಿಧ ದೇವಾನುದೇವತೆಗಳ ಮತ್ತು ಪ್ರಾಣಿ ಪಕ್ಷಿಗಳ ಚಿತ್ರ ತಯಾರಿಕೆ ಕಲಿಸಿದರು. ಇದನ್ನು ಮೆಚ್ಚಿ ಗ್ರಾಮಸ್ಥರು ಅಭಿನಂದಿಸಿದರು.

ಹಿರಿಯ ಕವಿ ಡಿ.ರಾಮಚಂದ್ರಯ್ಯ, ಲೇಖಕ ಗಂಗನರಸಿಂಹಯ್ಯ, ರಂಗಕಲಾವಿದೆ ಶಂಕರ್‌ ತಂಡದವರು ಮಕ್ಕಳಿಗೆ ಉಚಿತ ತರಬೇತಿ ಶಿಬಿರಕ್ಕೆ ವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT