ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ರೈತರಿಂದ ಸತ್ಯಾಗ್ರಹ; ಮಸೂದೆ ವಾಪಸ್‌ಗೆ ಒತ್ತಾಯ

ಜಿಲ್ಲೆಯ ವಿವಿಧೆಡೆ ಗಾಂಧಿ ಜಯಂತಿ ಆಚರಣೆ: ಶಾಸ್ತ್ರೀಜಿ ಸ್ಮರಣೆ
Last Updated 2 ಅಕ್ಟೋಬರ್ 2020, 13:43 IST
ಅಕ್ಷರ ಗಾತ್ರ

ರಾಮನಗರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 152ನೇ ವರ್ಷದ ಹುಟ್ಟುಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಉಪವಾಸ ಸತ್ಯಾಗ್ರಹ, ರಥಯಾತ್ರೆ, ವನಮಹೋತ್ಸವದಂತಹ ಕಾರ್ಯಕ್ರಮಗಳ ಮೂಲಕ ಬಾಪುವನ್ನು ನೆನೆಯಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿರುವ ಎಪಿಸಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಾಣಾ ಕಾಯ್ದೆ ಹಾಗೂ ವಿದ್ಯುತ್‍ಚ್ಛಕ್ತಿ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ ರೈತಪರ, ಕನ್ನಡಪರ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಿದರು. ಕಿಸಾನ್ ಕಾಂಗ್ರೆಸ್‍ನ ಪದಾಧಿಕಾರಿಗಳು ಬೆಂಬಲ ಸೂಚಿಸಿದ್ದರು.

ಸತ್ಯಾಗ್ರಹದ ವೇಳೆ ರೈತ ಪರ ಸಂಘಟನೆಯ ವಿವಿಧ ಬಣದ ಮುಖಂಡರು ಪಾಲ್ಗೊಂಡು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಜನವಿರೋಧಿ ಆಗಿರುವ ಮಸೂದೆ ತಿದ್ದುಪಡಿ ಕಾಯ್ದೆಗಳನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

"ಕಳೆದ ಸೋಮವಾರ ಮಸೂದೆ ವಾಪಸಾತಿಗೆ ಆಗ್ರಹಿಸಿ, ರೈತಪರ ಸಂಘಟನೆಗಳ ನೇತೃತ್ವದಲ್ಲಿ ಕರ್ನಾಟಕ ಬಂದ್ ಮಾಡಿತ್ತು. ಇಷ್ಟೊಂದು ವಿರೋಧದ ನಡುವೆಯೂ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ತಾಳುತ್ತಿದೆ. ಹೀಗಾಗಿ ಗಾಂಧಿ ಜಯಂತಿಯಂದು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾರ್ಥ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಸತ್ಯಾಗ್ರಹಿಗಳು ತಿಳಿಸಿದರು. ಈ ವೇಳೆ ರೈತಪರ ಸಂಘಟನೆಯ ವಿವಿಧ ಬಣದ ಮುಖಂಡರಾದ ಬೈರೇಗೌಡ, ಮಲ್ಲಯ್ಯ, ತುಂಬೇನಹಳ್ಳಿ ಶಿವಕುಮಾರ್ ಮತ್ತಿತರರು ಇದ್ದರು.

ಕಾಂಗ್ರೆಸ್ ಬೆಂಬಲ:ರೈತರ ಐಕ್ಯ ಹೋರಾಟಕ್ಕೆ ಕಾಂಗ್ರೆಸ್ ಕಿಸಾನ್ ಜಿಲ್ಲಾ ಘಟಕ ಬೆಂಬಲ ಸೂಚಿಸಿತು. ಪಕ್ಷದ ಪದಾಧಿಕಾರಿಗಳು ಹೋರಾಟದಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಕಿಸಾನ್ ಜಿಲ್ಲಾ ಘಟಕ ಅಧ್ಯಕ್ಷ ಜಿ.ಮಹೇಂದ್ರ ನೇತೃತ್ವದಲ್ಲಿ ವಿಶೇಷ ತಹಶೀಲ್ದಾರ್ ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಸಲ್ಲಿಸಲಾಯಿತು. ಕೆಪಿಸಿಸಿ ಕಾರ್ಯದರ್ಶಿ ಸಯ್ಯದ್‌ ಜಿಯಾವುಲ್ಲಾ, ಮುಖಂಡರಾದ ಸಿ,ಎನ್.ಆರ್.ವೆಂಕಟೇಶ್, ಎ.ಬಿ.ಚೇತನ್ ಕುಮಾರ್, ಚೇತನ್‌, ನರಸಿಂಹಮೂರ್ತಿ ಇದ್ದರು.

ಜಿಲ್ಲಾಡಳಿತ: ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ಕಚೇರಿ, ನಗರಸಭೆ ಕಚೇರಿಯಲ್ಲಿ ಸಂಭ್ರಮದಿಂದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಮ್ಮ ಕಚೇರಿಯಲ್ಲಿ ಗಾಂಧೀ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಹಾಗೂ ಸಿಬ್ಬಂದಿ ಇದ್ದರು.

ಬಿಜೆಪಿ: ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ರಾಮನಗರ ನಗರ ಮಂಡಲದಿಂದ ಕೋರ್ಟ್ ಪಕ್ಕದಲ್ಲಿರುವ ಗಾಂಧಿ ಪಾರ್ಕಿನಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು.

ಜಿಲ್ಲಾ ಉಪಾಧ್ಯಕ್ಷ ಸುರೇಶ್, ಜಿಲ್ಲಾ ಮಾಧ್ಯಮ ಪ್ರಮುಖ ಚಂದ್ರಶೇಖರ್ ರೆಡ್ಡಿ, ನಗರ ಘಟಕದ ಅಧ್ಯಕ್ಷರಾದ ಪಿ ಶಿವಾನಂದ, ಪ್ರಧಾನ ಕಾರ್ಯದರ್ಶಿ ಡಿ ನರೇಂದ್ರ, ಬಿ ದೇವರಾಜ್, ಬಾಲರಾಜು, ದಾಸ್ ರಂಗಸ್ವಾಮಿ, ವಿನೋದ್ ಭಗತ್, ರಾಮಣ್ಣ, ಟೂರ್ ದೇವರಾಜ್, ಅಚ್ಚಲು ರಾಜೇಶ್, ಬಸವ, ಮಹಿಳಾ ಘಟಕದ ಹೇಮಾವತಿ, ಸುಶೀಲಾ, ರಂಜಿತಾ ಇದ್ದರು.

ಭಾರತ ಸೇವಾದಳ: ಭಾರತ ಸೇವಾದಳದ ಜಿಲ್ಲಾ ಶಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಮುಖಂಡರಾದ ಶಿವಣ್ಣ. ಅರಸು, ಸೋಮಶೇಖರ್, ರಾಜು ಇದ್ದರು.
ವನಮಹೋತ್ಸವ: ತಾಲೂಕು ಪಂಚಾಯಿತಿ ಸದಸ್ಯ ಗಾಣಕಲ್ ನಟರಾಜು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಗಿಡನೆಟ್ಟು, ಗಾಂಧೀಜಿ ಮತ್ತು ಲಾಲ್‍ಬಹುದ್ದೂರ್ ಶಾಸ್ತ್ರಿ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು.

ರಥಯಾತ್ರೆ
ರಾಮನಗರದಲ್ಲಿ ಗಾಂಧಿ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.ಅವರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಇರಿಸಿ ಪೂಜೆ ಮಾಡಲಾಯಿತು. ರಥಯಾತ್ರೆಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ವಾಟಾಳ್, ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿದರು. ಅಲ್ಲಿನ ಮುಖ್ಯಮಂತ್ರಿ ಹುಚ್ಚರಿದ್ದಾರೆ. ಖಾವಿ ತೊಟ್ಟು ರಾಜಕಾರಣ ಮಾಡಲು ಬಂದಿದ್ದಾರೆ ಎಂದು ಆರೋಪಿಸಿದರು. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರುನಾಡ ಸೇನೆಯ ರಾಜ್ಯಉಪಾಧ್ಯಕ್ಷ, ಜಗದೀಶ್, ಜಿಲ್ಲಾ ಅಧ್ಯಕ್ಷ ಜಯಕುಮಾರ್, ಮುಖಂಡರಾದ ಜಯರಾಮು, ತ್ಯಾಗರಾಜ್, ಚಂದ್ರಶೇಖರ್, ಪಿಸುರೇಶ್, ಹನುಂತರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT