ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ| ಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ

ತೊಂದರೆಯಾಗುವ ಮೊದಲು ತೆರವುಗೊಳಿಸಲು ಆಗ್ರಹ
Last Updated 6 ನವೆಂಬರ್ 2019, 19:45 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಹುಲಿಕೆರೆ-ಗುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮನಪುರದೊಡ್ಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇರುವ ಹಳೆಯ ಶಾಲಾ ಕಟ್ಟಡ ತೆರವು ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಒಟ್ಟು 15 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲಾವರಣದಲ್ಲಿ ಮೂರು ಕಟ್ಟಡಗಳಿದ್ದು, ಆ ಪೈಕಿ 2 ಆರ್‌ಸಿಸಿ ಕಟ್ಟಡ ಹಾಗೂ 1 ಮಂಗಳೂರು ಹೆಂಚಿನ ಕೊಠಡಿ ಇದೆ. ಮಂಗಳೂರು ಹೆಂಚಿನ ಕಟ್ಟಡ ಶಿಥಿಲವಾಗಿದ್ದು ಮೇಲ್ಛಾವಣಿಯ ಹೆಂಚುಗಳು, ಮರದ ರೀಪರ್‌ಗಳು ಕಳಚಿ ಬೀಳತೊಡಗಿವೆ. ಮಳೆ ನೀರಿನಿಂದ ಗೋಡೆಗಳು ತೋಯ್ದು ಶಿಥಿಲಗೊಂಡಿರುವುದರಿಂದ ಯಾವಾಗ ಬೇಕಾದರೂ ಅಪಾಯ ಸಂಭವಿಸಬಹುದಾದ ಸಂಭವವಿದೆ ಎಂದು ದೂರಿದ್ದಾರೆ.

ಇಂತಹ ಅಪಾಯ ಸ್ಥಿತಿಯಲ್ಲಿರುವ ಕಟ್ಟಡವನ್ನು ತೆರವುಗೊಳಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು. ಮಕ್ಕಳು ಶಾಲಾ ಆವರಣದಲ್ಲಿ ಆಟ ಆಟವಾಡುತ್ತಿರುತ್ತಾರೆ. ಕೂಡಲೇ ಶಿಥಿಲಗೊಂಡಿರುವ ಕಟ್ಟಡ ಕೆಡವಿ ಹೊಸ ಕಟ್ಟಡ ಕಟ್ಟಬೇಕು ಎಂದು ಗ್ರಾಮದ ಚಂದ್ರ ನಾಯಕರ್, ಲಿಂಗರಾಜು, ಸೂರ್ಯ ನಾಯಕ್, ಶಶಿಕುಮಾರ್ ಮನವಿ ಮಾಡಿದ್ದಾರೆ.

ಶಿಥಿಲಗೊಂಡಿರುವ ಕಟ್ಟಡದಲ್ಲಿ ಮಕ್ಕಳನ್ನು ಕೂರಿಸುತ್ತಿಲ್ಲ. ಆ ಕಟ್ಟಡಕ್ಕೆ ಬೀಗ ಹಾಕಿ ಮಕ್ಕಳನ್ನು ಕಟ್ಟಡದ ಕಡೆ ಹೋಗದಂತೆ ಎಚ್ಚರ ವಹಿಸಲಾಗಿದೆ. ಶಿಥಿಲಗೊಂಡಿರುವ ಕಟ್ಟಡದ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಶಿಕ್ಷಕ ಬಾಲಾಜಿ ತಿಳಿಸಿದರು.

ಕಟ್ಟಡ ಶಾಲಾ ಆವರಣದಲ್ಲಿದ್ದು ತುಂಬಾ ಹಳೆಯದಾಗಿ ಶಿಥಿಲಾವಸ್ಥೆ ತಲುಪಿದೆ. ಮಕ್ಕಳ ಹಿತದೃಷ್ಟಿಯಿಂದ ಕಟ್ಟಡ ತೆರವುಗೊಳಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ದೇವರದೊಡ್ಡಿ ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲ ನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT