ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಪಾರಂಪರಿಕ ವಸ್ತು ಪ್ರದರ್ಶನ

Last Updated 31 ಜುಲೈ 2019, 14:30 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಹೋಲಿ ಕ್ರೆಸೆಂಟ್ ಇಂಗ್ಲಿಷ್ ಮಾಧ್ಯಮ ಶಾಲೆಯ ಸರ್.ಸಿ.ವಿ. ರಾಮನ್ ಸಭಾಂಗಣದಲ್ಲಿ ಕರ್ನಾಟಕ ಗತ ವೈಭವ ಕಾರ್ಯಕ್ರಮದಡಿಯಲ್ಲಿ ಬುಧವಾರ ಪಾರಂಪರಿಕ ವಸ್ತುಗಳ ಪ್ರದರ್ಶನ ನಡೆಯಿತು.

ಆಧುನಿಕ ಜೀವನ ಶೈಲಿಯಿಂದಾಗಿ ಗುಜರಿ ಅಂಗಡಿ ಸೇರುತ್ತಿರುವ ಪುರಾತನ ಗೃಹೋಪಯೋಗಿ ಮತ್ತು ಕೃಷಿ ಪರಿಕರಗಳು ಗಮನ ಸೆಳೆದವು. ಕಟ್ಟಿಗೆಯ ತೊಟ್ಟಿಲು, ಹಿರಿಯರು ಧಾನ್ಯ ಅಳೆಯಲು ಬಳಸುತ್ತಿದ್ದ ಸೇರು, ಪಾವು, ಚಟಾಕು, ತಾಂಬೂಲ ಡಬ್ಬಿ, ಪುರಾತನ ಪ್ರಸಾಧನ ಸಾಮಗ್ರಿಗಳು, ಹಳೆಯ ಕಾಲದ ಪಾತ್ರೆಗಳು, ಮಣ್ಣಿನ ಮಡಿಕೆಗಳ ಅಡಕಲ್ಲು, ಕತ್ತಿ ಗುರಾಣಿಗಳು, ಕೂರಿಗೆ- ಕೃಷಿ ಪರಿಕರಗಳು ವಸ್ತು ಪ್ರದರ್ಶನದಲ್ಲಿದ್ದವು.

‘ಇಂದಿನ ದಿನಗಳಲ್ಲಿ ಮನೆ ತುಂಬ ಪ್ಲಾಸ್ಟಿಕ್‌ ವಸ್ತುಗಳು, ಯಂತ್ರಗಳು ತುಂಬಿಕೊಂಡಿವೆ. ಹಿರಿಯರು ಬಳಸುತ್ತಿದ್ದ ರುಬ್ಬು ಕಲ್ಲಿನ ಸ್ಥಾನವನ್ನು ಗ್ರೈಂಡರ್ ಆಕ್ರಮಿಸಿಕೊಂಡಿದೆ. ಚಿಟ್ಟಿ, ನಿಟವಿಗಳು ಕಣ್ಮರೆಯಾಗಿವೆ. ಕೌದಿಗಳ ಜಾಗದಲ್ಲಿ ರಂಗುರಂಗಿನ ರಗ್ಗುಗಳು ಬಂದಿವೆ. ಇಂತಹ ಅಪರೂಪದ ಹಳೆಯ ವಸ್ತುಗಳನ್ನು ಸಮುದಾಯಕ್ಕೆ, ಅದರಲ್ಲೂ ವಿದ್ಯಾರ್ಥಿಗಳಿಗೆ ಪರಿಚಯಿಸುವ ಪ್ರಯತ್ನವೇ ಈ ವಸ್ತು ಪ್ರದರ್ಶನ’ ಎಂದು ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಅಲ್ತಾಫ್ ಅಹಮದ್ ತಿಳಿಸಿದರು.

‘ಇಂತಹ ವಸ್ತು ಪ್ರದರ್ಶನಗಳಿಂದ ನಮ್ಮ ಹಿರಿಯರು ಬಳಸುತ್ತಿದ್ದ ವಸ್ತುಗಳು ನೆನಪಾಗುತ್ತವೆ. ವಿದ್ಯಾರ್ಥಿಗಳು ಈ ವಸ್ತುಗಳ ಬಗ್ಗೆ ತಿಳಿದುಕೊಳ್ಳಲು ಈ ಪ್ರದರ್ಶನ ಸಹಕಾರಿಯಾಗುತ್ತದೆ. ಹಿರಿಯರು ಬಳಸುತ್ತಿದ್ದ ವಸ್ತುಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ನಗರೀಕರಣ, ಆಧುನೀಕರಣದ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ’ ಎಂದು ಜಿಲ್ಲಾ ಲೇಖಕರ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಹೊಸದೊಡ್ಡಿ ಸಿ. ರಮೇಶ್ ತಿಳಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ ‘ನಮ್ಮ ಹಿರಿಯರು ಬಳಸುತ್ತಿದ್ದ ವಸ್ತುಗಳನ್ನು ನೋಡುತ್ತಿದ್ದರೆ ಅವರೆಷ್ಟು ಶ್ರಮಜೀವಿಗಳು ಎಂದು ಅರ್ಥವಾಗುತ್ತದೆ. ಈಗ ಮನೆಕೆಲಸಗಳಿಗೆಲ್ಲಾ ಯಂತ್ರಗಳು ಬಂದಿವೆ. ಪರಿಸ್ಥಿತಿ ಹೀಗೆಯೆ ಮುಂದುವರೆದರೆ ಮುಂದಿನ ವರ್ಷಗಳಲ್ಲಿ ಮನೆಗಳಲ್ಲಿ ಅಡುಗೆ ಮಾಡುವುದು ಕೂಡ ಕಣ್ಮರೆಯಾಗುತ್ತದೆ. ಇದರೊಂದಿಗೆ ಈಗಾಗಲೆ ಹಾಳಾಗಿರುವ ಆರೋಗ್ಯವು ನಂತರದ ವರ್ಷಗಳಲ್ಲಿ ಸಂಪೂರ್ಣವಾಗಿ ಹಾಳಾಗಲಿದೆ’ ಎಂದರು.

ಶಾಲೆಯ ಪ್ರಾಚಾರ್ಯೆ ಅಲ್ಹಾಜ್ ಶಾಜಿಯಾ, ಮುಖ್ಯಶಿಕ್ಷಕಿ ಲತಾ ಆನಂದ್, ಗ್ರೇಸ್ ರೇಷ್ಮಾ, ಸಮ್ವನಯಾಧಿಕಾರಿ ಸ್ಟಾನ್ಲಿ ಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT