ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಬಲದಿಂದ ಅಭಿವೃದ್ಧಿ ಸಾಧ್ಯ: ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ

Last Updated 8 ಫೆಬ್ರುವರಿ 2021, 2:26 IST
ಅಕ್ಷರ ಗಾತ್ರ

ಮಾಗಡಿ: ಆತ್ಮಬಲದಿಂದ ಜೀವನದಲ್ಲಿ ಅಭಿವೃದ್ಧಿ ಮತ್ತು ಶಾಂತಿ ಸಾಧ್ಯ ಎಂಬುದನ್ನು ಸಿದ್ದಲಿಂಗೇಶ್ವರರು ಮತ್ತು ಶಿವಕುಮಾರ ಸ್ವಾಮೀಜಿ ಬದುಕಿನಲ್ಲಿ ಸಾಧಿಸಿದ್ದು, ನಮಗೆಲ್ಲರಿಗೂ ಮಾರ್ಗದರ್ಶಿಗಳಾಗಿದ್ದಾರೆ ಎಂದು ಶಿವಗಂಗೆ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಡ್ಯೂಮ್ ಲೈಟ್ಸರ್ಕಲ್‌ನಲ್ಲಿ ಭಾನುವಾರ ನಡೆದ ಸಿದ್ದಲಿಂಗೇಶ್ವರರ ಮೂರನೇ ಜಯಂತ್ಯುತ್ಸವ ಹಾಗೂ ಶಿವಕುಮಾರ ಸ್ವಾಮೀಜಿ ಅವರ ಎರಡನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಸಿದ್ದಲಿಂಗ ಯತಿಗಳು ಚರಜಂಗಮರಾಗಿದ್ದರು. ಹಳ್ಳಿ ಹಳ್ಳಿಗಳಿಗೆ ಪಾದಯಾತ್ರೆ ಮೂಲಕ ಸಂಚರಿಸಿ ಶಿವಶರಣರ ಸಂದೇಶಗಳನ್ನು ಜನಮಾನಸದಲ್ಲಿ ಬಿತ್ತಿದರು. ಹರಿಯುವ ನದಿಯ ನೀರು ಪರಿಶುದ್ಧವಾಗಿರುವಂತೆ ಜಂಗಮ ಚಲಿಸುತ್ತಿರಬೇಕು. ಸದಾಚಲನಶೀಲರಾಗಿರಬೇಕು ಎಂದ ಅವರು ಜಾತ್ಯತೀತ ಗುರುಗಳಾಗಿದ್ದರು ಎಂದರು.

ಅಕ್ಷರ ದಾಸೋಹದಿಂದ ಮನಸ್ಸಿನ ದಾಹ ತೀರಿಸಲು ಸಾಧ್ಯ ಎಂದು ನಂಬಿ ಬಸವಾದಿ ಶರಣರ ಸಂದೇಶದಂತೆ ಬದುಕಿದ್ದ ಶಿವಕುಮಾರ ಸ್ವಾಮೀಜಿ ಮಾತೃ ಹೃದಯರ ಸಂತರಾಗಿದ್ದರು. ಇಬ್ಬರು ಸಂತರ ಆದರ್ಶಗಳನ್ನು ನಾವೆಲ್ಲರೂ ಅನುಸರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ. ಎಲ್ಲಾ ಕಷ್ಟದಲ್ಲೂ ಮನೆ ದೇವರುಗಳೇ ನಮ್ಮನ್ನು ರಕ್ಷಿಸುವುದು. ಕಾಯಕ ನಿಷ್ಠೆ ಬೆಳೆಸಿ, ಸಮಸಮಾಜ ಕಟ್ಟಿ ಬಸವಾದಿ ಶರಣರು ಕಂಡಿದ್ದ ಕಲ್ಯಾಣ ರಾಜ್ಯ ಸ್ಥಾಪನೆಗೆ ಶ್ರಮಿಸೋಣ ಎಂದು ಆಶಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ವೀರಶೈವ ಲಿಂಗಾಯತರನ್ನು ‘2ಎ’ಗೆ ಸೇರಿಸಿ ಮೀಸಲಾತಿ ಸವಲತ್ತು ನೀಡುವಂತೆ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ತುಳಿತಕ್ಕೆ ಒಳಗಾದವರನ್ನು ಮುಖ್ಯವಾಹಿನಿಗೆ ತರಲು ಶಿವಕುಮಾರ ಸ್ವಾಮೀಜಿ ಶ್ರಮಿಸಿದರು. ಸಿದ್ದಲಿಂಗೇಶ್ವರರು ಮತ್ತು ಸಿದ್ದಗಂಗಾ ಶ್ರೀಗಳ ತೋರಿಸಿ ಕೊಟ್ಟಿರುವ ಕಾಯಕದ ಮಾರ್ಗದಲ್ಲಿ ನಡೆಯೋಣ ಎಂದರು.

ಶಾಸಕ ಎ. ಮಂಜುನಾಥ ಮಾತನಾಡಿ, ಪಟ್ಟಣದಲ್ಲಿ ₹ 6 ಕೋಟಿ ವೆಚ್ಚದಲ್ಲಿ ಶಿವಕುಮಾರ ಸ್ವಾಮೀಜಿ ಆಡಿಟೊರಿಯಂ ಕಟ್ಟಡದ ಕಾಮಗಾರಿ ನಡೆದಿದೆ. ಒಳಾಂಗಣ ವಿನ್ಯಾಸಕ್ಕೆ ಹಣದ ಕೊರತೆ ಬಂದರೆ ಹೆಚ್ಚಿನ ಅನುದಾನ ಕೊಡಿಸಲು ಬಿ.ವೈ. ವಿಜಯೇಂದ್ರ ಮುಂದಾಗಬೇಕು. ಬಿಡದಿ ಪುರಸಭೆ ಮುಖ್ಯರಸ್ತೆಗೆ ಶಿವಕುಮಾರ ಸ್ವಾಮೀಜಿ ಹೆಸರು ನಾಮಕರಣ ಮಾಡಿ, ಪುತ್ಥಳಿ ಸ್ಥಾಪಿಸಲಾಗುವುದು ಎಂದರು.

ಸಿದ್ಧಗಂಗಾ ಮಠಾಧೀಶ ಸಿದ್ದಲಿಂಗ ಸ್ವಾಮೀಜಿ ಮತ್ತು ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಿದ್ದಲಿಂಗೇಶ್ವರರು ಮತ್ತು ಶಿವಕುಮಾರ ಸ್ವಾಮೀಜಿ ಅವರ ಸಮಾಜೋ ಸುಧಾರಣೆಗಳನ್ನು ವಿವರಿಸಿದರು.

ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿಟ್ಟಸಂದ್ರ ಪರಮಶಿವಯ್ಯ, ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಿ. ಮರಿಸ್ವಾಮಿ, ಕೆಆರ್ಐಡಿಎಲ್ ಅಧ್ಯಕ್ಷ ಎಂ. ರುದ್ರೇಶ್, ಎಂಎಲ್‌ಸಿ ಅ. ದೇವೇಗೌಡ, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಕಾರ್ಯಕ್ರಮದ ರೂವಾರಿ ಕೆ.ಪಿ. ಮಹದೇವಶಾಸ್ತ್ರಿ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ, ತಾಲ್ಲೂಕು ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಪುರಸಭೆ ಸದಸ್ಯರಾದ ಅನಿಲ್ ಕುಮಾರ್, ರೇಖಾ ನವೀನ್, ಎಂ.ಎನ್. ಮಂಜುನಾಥ, ಕೆ.ವಿ. ಬಾಲು, ಶಿವರುದ್ರಮ್ಮ, ಪುರಸಭೆ ಮುಖ್ಯಾಧಿಕಾರಿ ಮಹೇಶ್, ತಾಲ್ಲೂಕು ವೀರಶೈವ ಮಂಡಳಿ ಅಧ್ಯಕ್ಷ ಶಿವರುದ್ರಪ್ಪ, ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಶಂಕರ್‌ ಬಿದರಿ, ವೀರಶೈವ ಕೋ ಆಪರೇಟಿವ್‌ ಸೊಸೈಟಿ ನಿರ್ದೇಶಕರಾದ ಎಂ.ಎಸ್. ಸಿದ್ದಲಿಂಗೇಶ್ವರ, ವೀರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT