ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಗಮಿತ ಜಿಲ್ಲಾಧಿಕಾರಿ ಅರ್ಚನಾಗೆ ಬೀಳ್ಕೊಡುಗೆ

ಅಧಿಕಾರಿ ಜೊತೆಗಿನ ಒಡನಾಟ ನೆನೆದ ಸಹೋದ್ಯೋಗಿಗಳು
Last Updated 6 ಮಾರ್ಚ್ 2021, 15:46 IST
ಅಕ್ಷರ ಗಾತ್ರ

ರಾಮನಗರ: ನಿರ್ಗಮಿತ ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರಿಗೆ ಸ್ವಾಗತ ಕಾರ್ಯಕ್ರಮವು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆಯಿತು.

‘ನಿರ್ಗಮಿತ ಜಿಲ್ಲಾಧಿಕಾರಿ ಅರ್ಚನಾ ಸರಳತೆಗೆ ಇನ್ನೊಂದು ಹೆಸರು. ಒಂದೂವರೆ ವರ್ಷದಿಂದ ಅವರು ಸಲ್ಲಿಸಿರುವ ಸೇವೆ ಜಿಲ್ಲೆಯ ಜನರ ಮನದಲ್ಲಿ ಉಳಿಯಲಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಉಮೇಶ್ ತಿಳಿಸಿದರು.

‘ಜಲಾಮೃತ ಯೋಜನೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಯೋಜನೆಯನ್ನು‌ ಅನುಷ್ಠಾನಗೊಳಿಸಲು ಅನುದಾನ ತಂದುಕೊಡಲು ಶ್ರಮಿಸಿದ್ದಾರೆ. ಗ್ರಾಮ ಮಟ್ಟದಲ್ಲಿ ಘನ ತ್ಯಾಜ್ಯ ವಸ್ತುಗಳ ವಿಲೇವರಿಗಾಗಿ ಸ್ಥಳವನ್ನು ತಹಶೀಲ್ದಾರ್ ಗಳೊಂದಿಗೆ ಸಭೆ ನಡೆಸಿ‌ ಗುರುತಿಸಿ ನೀಡಿರುತ್ತಾರೆ. ಗ್ರಾಮೀಣ ಮಟ್ಟದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ’ ಎಂದರು.

ಉತ್ತಮ ಮಾರ್ಗದರ್ಶಿ: ‘ಜಿಲ್ಲೆಯ ಕಿರಿಯ ಅಧಿಕಾರಿಗಳಿಗೆ ಸದಾ ಉತ್ತಮ ಮಾರ್ಗದರ್ಶಿಯಾಗಿದ್ದರು, ತಪ್ಪುಗಳು ಆಗದಂತೆ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸುತ್ತಿದ್ದರು. ಕೆಲಸದಲ್ಲಿ ತಪ್ಪುಗಳಿದ್ದಲ್ಲಿ ತಿದ್ದುತ್ತಿದ್ದರು. ಅವರಲ್ಲಿರುವ ತಾಳ್ಮೆ ಹಾಗೂ ಸಜ್ಜನಿಕೆ ನಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ’ ಎಂದು ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಗಳು ಹಾಗೂ ಆಹಾರ ಇಲಾಖೆ ಉಪನಿರ್ದೇಶಕರು ತಿಳಿಸಿದರು.

‘ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ‌ ಯಾವುದೇ ಸಮಸ್ಯೆಯಿಲ್ಲದೆ ಕಾರ್ಯ ನಿರ್ವಹಿಸಲು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದ್ದಾರೆ. ಟೊಯೊಟಾ ಕಾರ್ಮಿಕ ಸಮಸ್ಯೆ ಪರಿಹಾರಕ್ಕೆ ಶ್ರಮಿಸಿದ್ದಾರೆ. ಅವರ ಸಮಯೋಚಿತ ನಿರ್ಧಾರಗಳಿಂದ ದೊಡ್ಡ ಸಮಸ್ಯೆಗಳು ಪರಿಹಾರ ಕಂಡಿವೆ’ ಎಂದು ಬಣ್ಣಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


ಕೋವಿಡ್ ಪರಿಸ್ಥಿತಿ ನಿರ್ವಹಣೆ

ನೂತನ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಾತನಾಡಿ ‘ಆಯಾ ಜಿಲ್ಲೆಗಳಿಗೆ ಅದರದ್ದೇ ಆದ ಭೌಗೊಳಿಕ, ರಾಜಕೀಯ ವೈಶಿಷ್ಟತೆ ಹಾಗೂ ಸಮಸ್ಯೆಗಳಿರುತ್ತದೆ. ಅವುಗಳನ್ನು ಅರಿತು ಅರ್ಚನಾ ಉತ್ತಮ ಕೆಲಸ ಮಾಡಿದ್ದಾರೆ’ ಎಂದರು. ‘ಕೋವಿಡ್ ಸಂದರ್ಭದಲ್ಲಿ, ಲಾಕ್ ಡೌನ್ ನಂತರ ಕೋವಿಡ್ ನಿಯಂತ್ರಿಸುವ ಸವಾಲನ್ನು ಸ್ವೀಕರಿಸಿ ಉತ್ತಮವಾಗಿ, ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇತರ ಸೇವೆಗಳನ್ನೂ ಸಾರ್ವಜನಿಕರಿಗೆ ಒದಗಿಸಿ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

***
ಜಿಲ್ಲಾಧಿಕಾರಿ ಅರ್ಚನಾ ಅವರ ಸಮಯೋಚಿತ ನಿರ್ಧಾರಗಳಿಂದಾಗಿ ಹಲವು ಗಂಭೀರ ಸಮಸ್ಯೆಗಳು ಬಗೆಹರಿದಿವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸಹಕಾರ ನೀಡಿದ್ದಾರೆ

- ಗಿರೀಶ್‌, ಎಸ್ಪಿ, ರಾಮನಗರ

***

ಕೆಲವೊಮ್ಮೆ ಉತ್ತಮ ಕೆಲಸವಾಗಲಿ ಎಂದು ಕಟುವಾಗಿ ಮಾತನಾಡಿದ್ದೇನೆ. ಒಂದೂವರೆ ವರ್ಷದ ಸೇವೆ ಸಂತೋಷ ತಂದಿದ್ದು, ಇಲ್ಲಿನ ನೆನಪುಗಳನ್ನು ಹೊತ್ತು ನಿರ್ಗಮಿಸುತ್ತಿದ್ದೇನೆ

- ಎಂ.ಎಸ್‌. ಅರ್ಚನಾ, ನಿರ್ಗಮಿತ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT