ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ವ್ಯಾಪಾರಿಗಳ ಅಭಿವೃದ್ಧಿಗೆ ಹಲವಾರು ಯೋಜನೆ

Last Updated 25 ಸೆಪ್ಟೆಂಬರ್ 2019, 13:14 IST
ಅಕ್ಷರ ಗಾತ್ರ

ಚನ್ನಪಟ್ಟಣ: ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ವ್ಯಾಪಾರಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ಮಾಯಣ್ಣಗೌಡ ಕಿವಿಮಾತು ಹೇಳಿದರು.

ಪಟ್ಟಣದ ಶತಮಾನೋತ್ಸವ ಭವನದಲ್ಲಿ ಈಚೆಗೆ ರಾಮನಗರ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾ ಕೌಶಲ ಅಭಿವೃದ್ಧಿ ಉದ್ಯಮಶೀಲತಾ ಇಲಾಖೆ ಮತ್ತು ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ನಗರ ಬೀದಿ ವ್ಯಾಪಾರಸ್ಥರಿಗೆ ತರಬೇತಿ, ಗುರುತಿನ ಕಾರ್ಡ್, ಮಾರಾಟ ಪ್ರಮಾಣ ಪತ್ರ ವಿತರಣೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

‘ರಾಜ್ಯ ಸರ್ಕಾರ ವಿಶೇಷವಾಗಿ ಡೇ-ನಲ್ಮ್ ಯೋಜನೆಯಡಿ ಬೀದಿ ಬದಿ ಹಾಗೂ ತಳ್ಳುಗಾಡಿ ವ್ಯಾಪಾರಿಗಳಿಗೆ ಅನೇಕ ಸೌಕರ್ಯಗಳನ್ನು ಮಾಡಿಕೊಡುತ್ತಿದೆ. ಈ ದಿಕ್ಕಿನಲ್ಲಿ ಸಣ್ಣ ವ್ಯಾಪಾರಸ್ಥರು ಜಾಗೃತರಾಗಿ ಸರ್ಕಾರದ ಯೋಜನೆಗಳನ್ನು ಉಪಯೋಗ ಮಾಡಿಕೊಂಡು ತಮ್ಮ ಬದುಕನ್ನು ಹಸನು ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಂಜುನಾಥ್ ಮಾತನಾಡಿ, ‘ಸರ್ಕಾರದ ಇಲಾಖೆಗಳು ಅಥವಾ ಸಂಘಟನೆಗಳು ತರಬೇತಿ ಅಥವಾ ಕಾರ್ಯಾಗಾರಗಳನ್ನು ಹಮ್ಮಿಕೊಂಡಾಗ ಯಾವುದೇ ಸಮುದಾಯವಿರಲಿ. ಅದರಲ್ಲಿ ಪಾಲ್ಗೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ತಮಗೆ ತಿಳಿದ ವಿಚಾರವನ್ನು ತಮ್ಮ ಆಪ್ತೇಷ್ಚರಿಗೆ ತಿಳಿಸಬೇಕು’ ಎಂದು ವ್ಯಾಪಾರಸ್ಥರಿಗೆ ತಿಳಿ ಹೇಳಿದರು.

ಜಿಲ್ಲಾ ಕೌಶಲಾಭಿವೃದ್ಧಿ ವ್ಯವಸ್ಥಾಪಕ ಸಿ.ರಾಮಕೃಷ್ಣ ಮಾತನಾಡಿ, ‘ಈ ತರಬೇತಿ ಕಾರ್ಯಾಗಾರದಲ್ಲಿ ದೀನ ದಯಾಳು ಅಂತ್ಯೋದಯ ಯೋಜನೆಯಡಿ ನಗರ ಬೀದಿ ಬದಿ ವ್ಯಾಪಾರಸ್ಥರಿಗೆ ಆರೋಗ್ಯ, ಶುಚಿತ್ವ ಹಾಗೂ ಸಂಚಾರಿ ನಿಯಮಗಳ ಬಗ್ಗೆ ವಿವರವಾಗಿ ತಿಳಿಸಲಾಗುವುದು’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣೆ ಮತ್ತು ಕಾಯ್ದೆ ಹಾಗೂ ಕಾನೂನಿನ ಅಡಿಯಲ್ಲಿ ನಗರ ಬೀದಿ ವ್ಯಾಪಾರಿಗಳು ವ್ಯಾಪಾರ ಸಮಿತಿಯನ್ನು ಹೊಸದಾಗಿ ರಚಿಸಬೇಕಾಗಿರುವುದರಿಂದ ಎಲ್ಲ ಬೀದಿ ಬದಿ ವ್ಯಾಪಾರಿಗಳು ಗುರುತಿನ ಚೀಟಿ ಹಾಗೂ ವ್ಯಾಪಾರ ಮಾರಾಟ ಪತ್ರವನ್ನು ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಎಲ್ಲಾ ದಾಖಲಾತಿಗಳನ್ನು ನಗರಸಭೆಗೆ ನೀಡಿ ಸರ್ಕಾರಿ ಸವಲತ್ತುಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕು’ ಎಂದು ಮಾಹಿತಿ ನೀಡಿದರು.

ಸಮುದಾಯ ಸಂಘಟನಾಧಿಕಾರಿ ಲತಾ ಮಾತನಾಡಿ, ‘ಚನ್ನಪಟ್ಟಣವು ಪ್ಲಾಸ್ಟಿಕ್ ಮುಕ್ತ ಸ್ವಚ್ಛ ನಗರ ಎಂದು ಹೆಸರು ಗಳಿಸುವಲ್ಲಿ ಬೀದಿ ಬದಿ ವ್ಯಾಪಾರಿಗಳ ಪಾತ್ರ ಪ್ರಮುಖವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಪೆಡಂಭೂತವನ್ನು ಸಂಹಾರ ಮಾಡುವ ಕಾರ್ಯ ವ್ಯಾಪಾರಸ್ಥರಿಂದಲೇ ಪ್ರಾರಂಭವಾಗಬೇಕು’ ಎಂದರು.

ಸಬ್ ಇನ್ ಸ್ಪೆಕ್ಟರ್ ಸುರೇಶ್, ಸಂಪನ್ಮೂಲ ವ್ಯಕ್ತಿಗಳಾದ ರವಿಕುಮಾರ್, ಗೋವಿಂದ್, ಹೇಮಂತ್ ಗೌಡ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಶೋಕ್ ವೆಂಕೋಬರಾವ್, ಹಿರಿಯ ಫಾರ್ಮಸಿಸ್ಟ್ ವೇದಮೂರ್ತಿ, ಹಿರಿಯ ಆರೋಗ್ಯಾಧಿಕಾರಿ ಶಿವಕುಮಾರ್, ನಗರಸಭೆ ಲೆಕ್ಕಾಧಿಕಾರಿ ಚಂದ್ರು, ಜಿಲ್ಲಾ ತಂಬಾಕು ನಿಯಂತ್ರಣ ಮಂಡಳಿ ಹಾಗೂ ಕ್ಷಯರೋಗ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳಾದ ನಾಗೇಶ್, ಕೃಷ್ಣೇಗೌಡ, ಮಾದೇಶ್, ಲಿಂಗಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT