ಕನಕಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದ ಆರೋಪದ ಮೇಲೆ ಜೈನ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಚೆನ್‌ರಾಜ್ ಜೈನ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳವಾರ ದಲಿತಪರ ಸಂಘಟನೆಗಳ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿ, ಪೊಲೀಸರಿಗೆ ದೂರು ಸಲ್ಲಿಸಿದರು.
ಬೆಂಗಳೂರು ಮುಖ್ಯರಸ್ತೆ ಜಕ್ಕಸಂದ್ರ ಬಳಿಯ ಜೈನ್ ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಸೇರಿದ್ದ ದಲಿತಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಜಕ್ಕಸಂದ್ರದಿಂದ ಜೈನ್ ವಿ.ವಿ ತೆರವುಗೊಳಿಸುವಂತೆ ಒತ್ತಾಯಿಸಿದರು.
ದಲಿತ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಜೈನ್ ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ‘ಇಂದು ಒಂದು ದಿನ ನೀವು ರಜೆ ಘೋಷಿಸಿರಬಹುದು. ಆದರೆ, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇವೆ. ಎಲ್ಲ ದಿನವೂ ನೀವು ರಜೆ ಘೋಷಿಸುತ್ತೀರಾ’ ಎಂದು ಪ್ರಶ್ನಿಸಿದರು.
ಜೈನ್ ವಿದ್ಯಾಸಂಸ್ಥೆ ಮುಖ್ಯಸ್ಥ ಚೆನ್‌ರಾಜ್ ಜೈನ್ ಮತ್ತು ಜೈನ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸಬೇಕು. ಜೈನ್ ವಿಶ್ವವಿದ್ಯಾಲಯ ಮತ್ತು ಕಾಲೇಜನ್ನು ಇಲ್ಲಿಂದ ತೆರವು ಮಾಡಿಸಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಜಿ. ಗೋವಿಂದಯ್ಯ ಒತ್ತಾಯಿಸಿದರು.
‘ನೀವು ಹಣ ಬಲ ಮತ್ತು ರಾಜಕೀಯ ಬಲದಿಂದ ಏನು ಮಾಡಲು ಆಗಲ್ಲ. ನಾವು ಇಲ್ಲಿ ಯಾವುದೇ ಲಾಭಕ್ಕಾಗಿ ಬಂದಿಲ್ಲ. ಬದಲಿಗೆ ಬಾಬಾ ಸಾಹೇಬರಿಗೆ ನೀವು ಮಾಡಿರುವ ಅಪಮಾನ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ನಿಮ್ಮ ಆಟ ಇಲ್ಲಿ ಏನು ನಡೆಯದು’ ಎಂದು ಎಚ್ಚರಿಸಿದರು.
ಬೆಂಗಳೂರಿನ ಜೈನ್ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ್ದ ಕಿರು ನಾಟಕದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಿ ಅವರಿಗೆ ಅಪಮಾನ ಎಸಗಲಾಗಿದೆ. ಮೇಲ್ಜಾತಿ ಮತ್ತು ಕೀಳು ಜಾತಿ ಎನ್ನುವ ಮೂಲಕ ಜಾತಿ ನಿಂದನೆ ಮಾಡಲಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಸರ್ಕಲ್ ಇನ್‌ಸ್ಪೆಕ್ಟರ್ ರವಿ ದೂರನ್ನು ಸ್ವೀಕರಿಸಿದರು. ತುಂಗಣಿ ಉಮೇಶ್, ಬನಶಂಕರಿ ನಾಗು, ಶಿವಕುಮಾರ್ ಸ್ವಾಮಿ, ನೀಲಿ ರಮೇಶ್, ಚೀಲೂರು, ಭಾಸ್ಕರ್, ಮುನಿರಾಜು, ಮರಳವಾಡಿ ಮಂಜು, ಬೆಣಚುಕಲ್ ದೊಡ್ಡಿ ರುದ್ರೇಶ್, ಯಡುವನಹಳ್ಳಿ ಚಂದ್ರ, ಕುಮಾರ್, ಪ್ರಶಾಂತ್, ಗುಡ್ಡೆ ವೆಂಕಟೇಶ್, ಹರೀಶ್ ಬಾಲು, ನಿಖಿಲ್ ಸಜ್ಜೆ ನಿಂಗಯ್ಯ, ರುದ್ರೇಶ್ ಕಹಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮಕ್ಕಳ ತಲೆಗೆ ಮನುವಾದಿ ಸಂಸ್ಕೃತಿ
ಡಾ.ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನ ಜೈನ್ ಕಾಲೇಜಿನ ಕೀಳು ಮನಸ್ಥಿತಿ ಬಿಂಬಿಸುತ್ತದೆ ಎಂದು ಕರ್ನಾಟಕ ಸ್ವಾಭಿಮಾನಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ರಾಂಪು ನಾಗೇಶ್ ತರಾಟೆಗೆ ತೆಗೆದುಕೊಂಡರು.
ಉಚಿತ ಶಿಕ್ಷಣ ನೀಡುವುದಾಗಿ ಭರವಸೆ ನೀಡಿ ವಿಶ್ವ ವಿದ್ಯಾಲಯ ಸ್ಥಾಪನೆಗೆ ಬಡವರು ಮತ್ತು ದಲಿತರ ಭೂಮಿ ಪಡೆದಿರುವ ಚೆನ್‌ರಾಜ್ ಜೈನ್ ಅವರು ತಮ್ಮ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಮೂಲಕ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬದಲು ಮನುವಾದಿ ಸಂಸ್ಕೃತಿ ತುಂಬುತ್ತಿದ್ದಾರೆ ಎಂದು ಆರೋಪ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.