ಶನಿವಾರ, ಜುಲೈ 31, 2021
22 °C

ರೇಷ್ಮೆ ಬೆಳೆಗಾರರ ನೆರವಿಗೆ ಧಾವಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ರೇಷ್ಮೆ ಕೃಷಿ ನಂಬಿ ನೆಮ್ಮದಿ ಜೀವನ ನಡೆಸುತ್ತಿದ್ದ ಲಕ್ಷಾಂತರ ಕುಟುಂಬಗಳು ಬೆಲೆ ಕುಸಿತದಿಂದ ಬೀದಿಗೆ ಬಿದ್ದಿವೆ. ಸರ್ಕಾರ ಮಧ್ಯ ಪ್ರವೇಶಿಸಿ ಬೆಂಬಲ ನೀಡುವ ಮೂಲಕ ರೇಷ್ಮೆ ಬೆಳೆಗಾರರನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಒತ್ತಾಯಿಸಿದರು.

ರೈತ ಸಂಘದ ಕಚೇರಿಯಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ಮಾತನಾಡಿದರು. ಕೃಷಿ ಉತ್ಪನ್ನಗಳ ಬೆಲೆ ಏರಿಳಿತದಿಂದ ಕಂಗೆಟ್ಟಿದ್ದ ರೈತರು ಹೈನುಗಾರಿಕೆ ಮತ್ತು ರೇಷ್ಮೆ ಕೃಷಿ ಹೆಚ್ಚಾಗಿ ಅವಲಂಬಿಸಿದ್ದರು. ರೇಷ್ಮೆ ಕೃಷಿಗೆ ಸಿಗುತ್ತಿದ್ದ ಉತ್ತಮ ಬೆಲೆ ಹಾಗೂ ಪ್ರೋತ್ಸಾಹದಿಂದ ಸಾವಿರಾರು ರೈತರು ಹೊಸದಾಗಿ ರೇಷ್ಮೆ ಕೃಷಿ ಮಾಡಲು ಪ್ರಾರಂಭಿಸಿದ್ದರು.

ಇಂತಹ ಸಂದರ್ಭದಲ್ಲಿ ಬೆಲೆ ತೀರಾ ಕುಸಿದಿರುವುದು ರೈತರ ಆತ್ಮಸ್ಥೈರ್ಯ ಕುಗ್ಗಿಸಿದೆ. ದೇಶದಲ್ಲಿನ ಎಲ್ಲ ಸಂಸದರು ಪ್ರಧಾನಮಂತ್ರಿ ಮೇಲೆ ಒತ್ತಡ ತಂದು ಚೀನಾದ ಆ್ಯಪ್‌ಗಳನ್ನು ನಿಷೇಧಿಸಿರುವಂತೆ, ಚೀನಾ ರೇಷ್ಮೆ ನಿಷೇಧಿಸಿ ಸ್ವದೇಶಿ ರೇಷ್ಮೆ ಉತ್ತೇಜಿಸಬೇಕೆಂದು ಆಗ್ರಹಿಸಿದರು.

ತಾಲ್ಲೂಕಿನಲ್ಲಿ ಕೋವಿಡ್‌ ಸೋಂಕು ಸಮುದಾಯಕ್ಕೂ ಹರಡಿದೆ. ಗ್ರಾಮ ಪಂಚಾಯಿತಿಗಳು ರೋಗ ತಡೆಗಟ್ಟಲು ಸೋಂಕು ನಿವಾರಣೆ ಮಾಡಬೇಕು. ಸೋಂಕಿನ ಬಗ್ಗೆ ಜಾಗೃತಿ ಮೂಡಿಸಬೇಕು. ಅದನ್ನು ಬಿಟ್ಟು ನರೇಗಾ ಕಾಮಗಾರಿಯಲ್ಲಿ ಮುಳುಗಿದ್ದಾರೆ. ಕಾಮಗಾರಿಯಲ್ಲಿ ಪಾರದರ್ಶಕತೆಯಿಲ್ಲವಾಗಿದೆ. ಸಾರ್ವಜನಿಕರ ಆರೋಗ್ಯದ ಕಡೆ ಹೆಚ್ಚು ಒತ್ತು ನೀಡಬೇಕೆಂದು ಒತ್ತಾಯಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಶಿಕುಮಾರ್‌, ಮರಳವಾಡಿ ಹೋಬಳಿ ಅಧ್ಯಕ್ಷ ಕುಮಾರ್‌, ಗ್ರಾಮ ಘಟಕದ ಅಧ್ಯಕ್ಷ ವಿಜೇಂದ್ರ, ರೈತ ಯುವ ಘಟಕದ ಅಧ್ಯಕ್ಷ ರವಿಕುಮಾರ್‌, ಕಾರ್ಯದರ್ಶಿ ಎಸ್‌.ಆರ್‌.ಹರೀಶ್‌ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.