ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಕಲಾವಿದರಿಗೆ ಬೇಕಿದೆ ಸರ್ಕಾರದ ನೆರವು

ಸೋಬಾನೆ, ನಗಾರಿ, ತಮಟೆ ಕಲಾವಿದರನ್ನು ಒಳಗೊಂಡ ಅಪರೂಪದ ಕುಟುಂಬ
Last Updated 8 ಜೂನ್ 2019, 19:31 IST
ಅಕ್ಷರ ಗಾತ್ರ

ರಾಮನಗರ: ಸೋಬಾನೆಯಂತಹ ಜಾನಪದ ಸಂಗೀತ ಪ್ರಕಾರಗಳು ಇಂದು ನಶಿಸುತ್ತಿವೆ. ಆ ಕಲೆಗೆ ಜೀವ ನೀಡಿದವರಲ್ಲಿ ಇಲ್ಲಿನ ಬಾನಂದೂರು ಬೋರಮ್ಮ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರು ಹಾಡುವ ಸೋಬಾನೆ ಪದಗಳಿಗೆ ತಲೆದೂಗದೆ ಇರುವವರು ವಿರಳ.

ಬೋರಮ್ಮ ಅವಿದ್ಯಾವಂತರಾಗಿದ್ದರೂ ತಾಯಿಯಿಂದ ಕಲಿತ ಸೋಬಾನೆ ಪದಗಳನ್ನು ಮೈಗೂಡಿಸಿಕೊಂಡವರು. ಸೋಬಾನೆ ಎಂದರೆ ಬೋರಮ್ಮ ಎನ್ನುವ ಹಂತಕ್ಕೆ ಅವರು ಬೆಳೆದಿದ್ದಾರೆ. ಸೋಬಾನೆ ಪದಗಳಿಗೆ ಸಂಬಂಧಿಸಿದಂತೆ ಯಾವುದೇ ಸ್ಪರ್ಧೆಯಿರಲಿ ಅಲ್ಲಿ ಮೊದಲ ಬಹುಮಾನ ಬೋರಮ್ಮನವರಿಗೆ ಖಚಿತ ಎನ್ನುವಷ್ಟರ ಮಟ್ಟಿಗೆ ಅವರು ಪ್ರಬುದ್ಧತೆ ಸಾಧಿಸಿದ್ದಾರೆ. ಆಕಾಶವಾಣಿಯಲ್ಲಿಯೂ ಬೋರಮ್ಮನವರ ಕಾರ್ಯಕ್ರಮ ಸಾವಿರಾರು ಶ್ರೋತೃಗಳ ಮೆಚ್ಚುಗೆ ಪಡೆದಿವೆ.

ಬೋರಮ್ಮ ಅವರದು ಕಲಾವಿದರ ಕುಟುಂಬ. ಪತಿ ಸಿದ್ದಯ್ಯ ನಗಾರಿ ಬಾರಿಸುವ ಕಲೆಯಲ್ಲಿ ನಿಷ್ಣಾತರು. ತಾಯಿ ಹುಚ್ಚಮ್ಮ ಸೋಬಾನೆ ಕಲೆಯಲ್ಲಿ ಯಶಸ್ಸು ಸಾಧಿಸಿದವರು. ಮಗ ಕುಮಾರ್ ತಮಟೆ ಕಲಾವಿದ, ಮಗಳು ಕವಿತಾ ಸೋಬಾನೆ ಗಾಯಕಿಯಾಗಿದ್ದು ಇಡೀ ಕುಟುಂಬವೇ ಕಲಾವಿದರ ಕುಟುಂಬ ಎನಿಸಿದೆ.

ಶಿಕ್ಷಣದಿಂದ ವಂಚಿತಳಾಗಿದ್ದೇನೆ ಎಂಬುದಕ್ಕೆ ತೀವ್ರ ಬೇಸರಗೊಳ್ಳುವ ಬೋರಮ್ಮ, ಸೋಬಾನೆ ಕಲಿಯುವ ಮಂದಿಗೆ ಶಿಕ್ಷಕಿಯಾಗಿದ್ದಾರೆ. ಯಾವುದೇ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿಗೆ ವಿರುದ್ಧವಾಗಿ ಬೋರಮ್ಮನವರ ಸಾಧನೆಯ ಹಿಂದೆ ಅವರ ಪತಿ ಸಿದ್ದಯ್ಯ ಇದ್ದಾರೆ ಎಂಬುದು ಗಮನಾರ್ಹ.

ಹಿಂದಿನಿಂದಲೂ ಕಷ್ಟವನ್ನೇ ಉಂಡು ಬೆಳೆದಿರುವ ಬೋರಮ್ಮನವರಿಗೆ ಕಲೆಯ ಜತೆ ಕಷ್ಟವೂ ಮೈಗೂಡಿಕೊಂಡಿದೆ. ಇದರಿಂದ ಹೊರಬರುವ ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗಿಲ್ಲ. ನಾಲ್ಕು ನಗಾರಿಗಳನ್ನು ಏಕ ಕಾಲದಲ್ಲಿ ಇತರೆ ವಾದ್ಯಗಳೊಂದಿಗೆ ಒಟ್ಟಿಗೆ ಬಾರಿಸುವ ಪ್ರಾವೀಣ್ಯತೆ ಹೊಂದಿರುವ ಸಿದ್ದಯ್ಯ ಕೂಡ ಹತ್ತು ವರ್ಷಗಳಿಂದ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ನಗಾರಿ ಬಾರಿಸುವುದನ್ನು ನಿಲ್ಲಿಸಿದ್ದಾರೆ.

‘35 ವರ್ಷಗಳಿಂದ ಸೋಬಾನೆ ಪದ, ತತ್ವಪದ, ಜೋಗುಳ, ಉತ್ತರ ದೇವಿ, ಬೀಸೊ ಪದ, ಜನಪದ ಗೀತೆಗಳನ್ನು ಹಾಡುತ್ತಿದ್ದೇನೆ. 25 ವರ್ಷಗಳ ಕಾಲ ಆಕಾಶವಾಣಿಯಲ್ಲಿ ಹಾಡಿದ್ದೇನೆ. ಹಾಡುವ ಕಾರ್ಯಕ್ರಮ ಇಲ್ಲದಿದ್ದರೆ ಕೂಲಿ ಕೆಲಸಕ್ಕೆ ಹೋಗುತ್ತೇನೆ’ ಎಂದು 60 ವರ್ಷದ ಬೋರಮ್ಮ ಹೇಳಿದರು.

‘ನಮಗೆ ವಾಸವಿರಲು ಮುರುಕಲು ಮನೆ ಬಿಟ್ಟರೆ ಬೇರೆ ಏನೂ ಇಲ್ಲ. ಕಾರ್ಯಕ್ರಮಳಿಗೆ ಕರೆದರೆ ಹೋಗುತ್ತೇನೆ, ಹಾಡುತ್ತೇನೆ, ಕೆಲವರು ಹಣ ಕೊಡುತ್ತಾರೆ, ಇನ್ನು ಕೆಲವರು ಬಸ್ ಚಾರ್ಜ್ ಮಾತ್ರ ಕೊಡುತ್ತಾರೆ. ನಾಲ್ಕು ಜನರ ತಂಡವನ್ನು ಕಟ್ಟಿಕೊಂಡು ಹಾಡುತ್ತೇನೆ. ಮಗನೂ ತಮಟೆ ಬಾರಿಸುತ್ತಾನೆ. ಈಗ ಅವನೇ ನಮ್ಮನ್ನು ನೋಡಿಕೊಳ್ಳುತ್ತಿದ್ದಾನೆ’ ಎಂದು ತಿಳಿಸಿದರು.

‘ಮದುವೆಗಳಲ್ಲಿ ಸೋಬಾನೆ ಹಾಡಲು ಈಗೀಗ ಹೆಚ್ಚಿಗೆ ಕರೆಯುತ್ತಿದ್ದಾರೆ. ನನ್ನ ಪತಿ ಸಿದ್ದಯ್ಯ ನಗಾರಿ ಸಿದ್ದಯ್ಯ ಎಂದೇ ಖ್ಯಾತರಾಗಿದ್ದಾರೆ. ಆದರೆ ಈಗ ಅವರಿಗೆ ನಗಾರಿ ಬಾರಿಸಲು ಆಗುವುದಿಲ್ಲ. ಸರ್ಕಾರದವರು ನಮ್ಮ ಕುಟುಂಬಕ್ಕೆ ಜಮೀನನ್ನು ಅಥವಾ ಇನ್ನಿತರೆ ಯಾವುದೇ ರೂಪದಲ್ಲಿ ಸಹಾಯವನ್ನು ಮಾಡಬೇಕು’ ಎಂದು ಮನವಿ ಮಾಡಿದರು.

‘15ನೇ ವಯಸ್ಸಿನಲ್ಲಿಯೇ ನಗಾರಿ ಬಾರಿಸುವುದನ್ನು ಕಲಿತುಕೊಂಡೆ. ನಾಲ್ಕು ನಗಾರಿಗಳನ್ನು ಏಕ ಕಾಲಕ್ಕೆ ಬಾರಿಸುತ್ತಿದ್ದೆ. ಆದರೆ 10 ವರ್ಷಗಳಿಂದ ನಗಾರಿಯನ್ನು ಬಾರಿಸಲು ಆಗುತ್ತಿಲ್ಲ. ಮಂಡಿ ನೋವು ಹೆಚ್ಚಾಗಿದೆ. ಹಲವು ಆಸ್ಪತ್ರೆಗಳಿಗೆ ಹೋಗಿ ಬಂದರು ಮಂಡಿ ನೋವು ವಾಸಿಯಾಗಿಲ್ಲ’ ಎಂದು 72 ವರ್ಷದ ನಗಾರಿಸಿದ್ದಯ್ಯ ಬೇಸರ ವ್ಯಕ್ತಪಡಿಸಿದರು.

‘ಈವರೆಗೆ ನನಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಮಾಸಾಶನ ಬರುತ್ತಿದೆ. ಅದನ್ನೇ ನಂಬಿಕೊಂಡು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಕೂಲಿ ಕೆಲಸ ಮಾಡಲು ದೇಹ ಸ್ಪಂದಿಸುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸರ್ಕಾರ, ಸಂಘಸಂಸ್ಥೆಗಳು ನೆರವು ನೀಡಲಿ
‘ಬೋರಮ್ಮ, ನಗಾರಿ ಸಿದ್ದಯ್ಯ ಅವರದು ಕಲಾವಿದರ ಕುಟುಂಬವಾಗಿದೆ. ಕಲೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಅವರುಗಳಿಗೆ ಈಗ ಜೀವನ ನಡೆಸುವುದೇ ಕಷ್ಟವಾಗಿದೆ. ಆದ್ದರಿಂದ ಸರ್ಕಾರದ ಜತೆಗೆ ಸಂಘಸಂಸ್ಥೆಗಳು ಅವರ ನೆರವಿಗೆ ನಿಲ್ಲಬೇಕು’ ಎಂದು ಸಂಘಟಕ ನಂಜುಂಡಿ ಬಾನಂದೂರು ತಿಳಿಸಿದರು.

‘ಬೋರಮ್ಮ ನೂರಾರು ಜನಪದ ಗೀತೆಗಳನ್ನು ಹಾಡುತ್ತಾರೆ. ಇವರು ಹಾಡುವ ಗೀತೆಗಳನ್ನು ಸಂಗ್ರಹಿಸಬೇಕಿದೆ. ಸಿದ್ದಯ್ಯ ಅವರನ್ನು ಸಂಪನ್ಮೂಲ ವ್ಯಕ್ತಿಯಾಗಿ ಬಳಸಿಕೊಂಡು ತಮಟೆ ಕಲೆಯ ತರಬೇತಿಯನ್ನು ರೂಪಿಸುವ ಅವಶ್ಯಕತೆ ಇದೆ. ಕಲಾವಿದರಿಗೆ ವಯಸ್ಸಾದ ಮೇಲೆ ಉತ್ತಮವಾಗಿ ಜೀವನ ನಡೆಸಲು ಸರ್ಕಾರ ಸೂಕ್ತ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT