ಸೋಮವಾರ, ಮೇ 16, 2022
30 °C
ಬಿ.ಜಿ. ಕುಸುಮಾ ಸಾಮಾಜಿಕ ಸೇವಾ ಟ್ರಸ್ಟ್‌, ಬಿವಿಟಿ ವತಿಯಿಂದ ಮಹಿಳೆಯರಿಗೆ ಉಪಕರಣ ವಿತರಣೆ

ಜನರಲ್ಲಿ ಸೇವಾ ಮನೋಭಾವ ಅಗತ್ಯ: ಸಮಾಜ ಸೇವಕಿ ಬಿ.ಜಿ. ಕುಸುಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಸಮಾಜದಿಂದ ನಾವು ಪಡೆದದ್ದನ್ನು ವಾಪಸ್‌ ಕೊಡುವ ಬಗ್ಗೆ ಪ್ರತಿಯೊಬ್ಬರು ಯೋಚನೆ ಮಾಡಬೇಕು. ಇನ್ನೊಬ್ಬರಿಗೆ ಕೈಲಾದಷ್ಟು ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಮಾಜ ಸೇವಕಿ ಬಿ.ಜಿ. ಕುಸುಮಾ ಕಿವಿಮಾತು ಹೇಳಿದರು.

ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆಯ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಬುಧವಾರ ಬಿ.ಜಿ. ಕುಸುಮಾ ಸಾಮಾಜಿಕ ಸೇವಾ ಟ್ರಸ್ಟ್‌ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಜನ್ಮದಿನದ ಅಂಗವಾಗಿ ಗ್ರಾಮೀಣ ಜನರಿಗೆ ಸೌರಚಾಲಿತ ಜೀವನೋಪಾಯ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ‘ಸೂರ್ಯ ಎಂದರೆ ಎಂದೂ ಮುಗಿಯದ ಶಕ್ತಿ. ಆದರೆ ಕೆಲ ದಶಕದ ಹಿಂದಿನವರೆಗೂ ನಮಗೆ ಬಿಸಿಲಿನಿಂದ ಹಪ್ಪಳ ಒಣಗಿಸಿಕೊಳ್ಳುವುದು ಬಿಟ್ಟರೆ ಬೇರೆ ಉಪಯೋಗದ ಕುರಿತು ಹೆಚ್ಚು ಗೊತ್ತಿರಲಿಲ್ಲ. ಇಂದು ಅದೇ ಶಕ್ತಿಯನ್ನು ಶೇಖರಿಸಿ ಇಂಧನ ರೂಪದಲ್ಲಿ ವಿದ್ಯುತ್‌ಗೆ ಪರ್ಯಾಯವಾಗಿ ಎಲ್ಲ ಕಾರ್ಯಗಳಿಗೆ ಬಳಸಬಹುದಾಗಿದೆ. ಇದರಿಂದ ಜೀವನ ಇನ್ನಷ್ಟು ಸುಲಭ ಆಗಲಿದೆ’ ಎಂದರು.

‘ಪ್ರತಿಯೊಬ್ಬರಿಗೂ ಕ್ರಮಬದ್ಧವಾದ ಶಿಕ್ಷಣ ದೊರೆಯಬೇಕು. ಇವತ್ತು ಬೆಂಗಳೂರಿನ ಬಹುತೇಕ ಪೋಷಕರಿಗೆ ಇಂಗ್ಲಿಷ್ ಮಾಧ್ಯಮ ಶ್ರೇಷ್ಠ ಎಂಬ ಮೌಢ್ಯ ಇದೆ. ಆ ಮನೋಭಾವ ಬದಲಾಗಬೇಕು. ಜೊತೆಗೆ ಸರ್ಕಾರಿ ಶಾಲೆಗಳಿಗೆ ಬೇಕಾದ ಸೌಲಭ್ಯ ಒದಗಿಸಲು ನಾವೆಲ್ಲರೂ ಸರ್ಕಾರದ ಜೊತೆಗೆ ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.

ಪತ್ರಕರ್ತೆ ಆರ್‌. ಪೂರ್ಣಿಮಾ ಮಾತನಾಡಿ ‘ಯಾರೋ ಒಬ್ಬರು ಇಡೀ ಜಗತ್ತನ್ನು ಬದಲಿಸಲು ಸಾಧ್ಯವಿಲ್ಲ. ಉಳ್ಳವರು ತಮ್ಮ ಸಂಪತ್ತಿನ ಒಂದು ಭಾಗವನ್ನು ಸಮಾಜದ ಒಳಿತಿಗೆ ಮೀಸಲಿಡಬೇಕು’ ಎಂದು ಸಲಹೆ ನೀಡಿದರು.

‘ಕುಸುಮಾ 1953ರಿಂದ ಶಿಕ್ಷಕಿ ಆಗಿ ಕಾರ್ಯ ನಿರ್ವಹಿಸಿದ್ದು ನಿವೃತ್ತರಾಗಿದ್ದಾರೆ. ಸಾಮಾಜಿಕ ಮತ್ತು ಪ್ರಗತಿಪರ ಚಿಂತನೆಗಳನ್ನು ಮುಂದಿಟ್ಟುಕೊಂಡು ಸೇವೆ ಮಾಡುತ್ತಿದ್ದಾರೆ. ತಮ್ಮ ಸ್ವಂತ ಮನೆ ಮಾರಿ ಆ ಹಣವನ್ನು ಟ್ರಸ್ಟ್‌ನ ಸೇವಾ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಇಂದು ಅವರ 89ನೇ ಜನ್ಮದಿನದ ಅಂಗವಾಗಿ ಜಿಲ್ಲೆಯ ಜನರಿಗೆ ಸೌರಶಕ್ತಿ ಆಧಾರಿತ ಉಪಕರಣವನ್ನು ನೀಡಲಾಗುತ್ತಿದೆ’ ಎಂದರು.

ಭಾರತೀಯ ವಿಕಾಸ್‌ ಟ್ರಸ್ಟ್‌ ಮುಖ್ಯ ವ್ಯವಸ್ಥಾಪಕ ಎಚ್‌.ಟಿ. ಮಂಜುನಾಥ್‌ ಮಾತನಾಡಿ ‘ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಟ್ರಸ್ಟ್ ವತಿಯಿಂದ ಸೌರಶಕ್ತಿ ಉಪಕರಣಗಳನ್ನು ನೀಡಲಾಗುತ್ತಿದೆ. ಇದರಿಂದ ಸ್ತ್ರೀಯರ ಜೀವನೋಪಾಯಕ್ಕೆ ನೆರವಾಗಲಿದೆ’ ಎಂದರು.

ಸೆಲ್ಕೊ ಸೋಲಾರ್ಸ್‌ ಕಂಪನಿಯ ವ್ಯವಸ್ಥಾಪಕ ಸುಕುಮಾರ್, ಮಹದೇಶ್ವರ ಬೆಟ್ಟದ ಬಳಿಯ ಕುಗ್ರಾಮಗಳಿಗೆ ಸೌರಶಕ್ತಿ ಸೇವೆ ಒದಗಿಸಿದ ಅನುಭವ ಹಂಚಿಕೊಂಡರು. ಶ್ರೀ ಮಾರುತಿ ಟ್ರಸ್ಟ್‌ನ ಟ್ರಸ್ಟಿ ಬೊಮ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ವಿಕಾಸ ಟ್ರಸ್ಟ್‌ನ ಭಾರತಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಹಲವರಿಗೆ ನೆರವು

ಚನ್ನಪಟ್ಟಣ, ರಾಮನಗರ ತಾಲ್ಲೂಕಿನ ವಿವಿಧ ಗ್ರಾಮಗಳ ಜನರಿಗೆ ಕಾರ್ಯಕ್ರಮದಲ್ಲಿ ವಿವಿಧ ಸೋಲಾರ್ ಆಧಾರಿತ ಉಪಕರಣಗಳನ್ನು ವಿತರಿಸಲಾಯಿತು. ನಾಗರತ್ನಮ್ಮ, ರಾಜಮ್ಮ, ನಳಿನಿ, ರೇಣುಕಾ, ಗೌರಮ್ಮ, ನಾಗಮ್ಮ ಮೊದಲಾದ ಮಹಿಳೆಯರು ಸೌರಶಕ್ತಿ ಕೇಂದ್ರಿತ ಹೊಲಿಗೆ ಯಂತ್ರ, ಝೆರಾಕ್ಸ್ ಯಂತ್ರಗಳನ್ನು ಪಡೆದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು