ಮಂಗಳವಾರ, ಫೆಬ್ರವರಿ 25, 2020
19 °C

ಸೋಮೇಶ್ವರಸ್ವಾಮಿ ಸಂಭ್ರಮದ ರಥೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಎ.ಮಂಜುನಾಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಪಟ್ಟಣದ ಐಸಿರಿ ಸೋಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು.

ಬಿ.ಆರ್.ರಂಗನಾಥ ಸಹೋದರರು ರುದ್ರಹೋಮ, ಅಷ್ಟಾವದಾನ ಸೇವೆ, ಸಂಗೀತ ಉತ್ಸವ,ಕಲಾ ಸೇವೆ ನೆರವೇರಿಸಿದರು. ಶಾಸಕ ಎ.ಮಂಜುನಾಥ, ಪತ್ನಿ ಲಕ್ಷ್ಮೀಮಂಜುನಾಥ ಅವರೊಂದಿಗೆ ಸೋಮೇಶ್ವರ ಸ್ವಾಮಿ ಮತ್ತು ಭ್ರಮರಾಂಬಿಕೆ ದೇವಿಗೆ ಮದುವೆ ಕಾರ್ಯ ನೆರವೇರಿಸಿದರು.

ಆಗಮಿಕ ವಿದ್ವಾನ್ ಕೆ.ಎನ್. ಗೋಪಾಲ್ ದೀಕ್ಷಿತ ಮತ್ತು ಮಕ್ಕಳು ಹಾಗೂ ತಂಡದ ಅರ್ಚಕರು ಪೂಜಾದಿಗಳನ್ನು ನೆರವೇರಿಸಿದರು. ಸೋಮೇಶ್ವರಸ್ವಾಮಿ ಉಭಯ ಅಮ್ಮನವರ ಸಹಿತ ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ಶಾಸಕ ಎ.ಮಂಜುನಾಥ ರಾಜದಂಡ ಹಿಡಿದು ಮುನ್ನೆಡೆಸಿದರು.

ತಹಶೀಲ್ದಾರ್ ಎನ್.ರಮೇಶ್, ವಿಧಾನ ಪರಿಷತ್ ಪರಿಷತ್ ಸದಸ್ಯ ಎಚ್,ಎಂ,ರೇವಣ್ಣ, ಪತ್ನಿ ವತ್ಸಲಾ ರೇವಣ್ಣ, ಕಾಂಗ್ರೆಸ್ ಮುಖಂಡ ಎಚ್.ಸಿ.ಬಾಲಕೃಷ್ಣ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ, ತಾಲ್ಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡ ಬಿ.ವಿ.ಜಯರಾಮು, ಶುಭೋದಯ ಮಹೇಶ್, ಡಿವೈಎಸ್ಪಿ ಲಕ್ಷ್ಮೀನಾರಾಯಣ ದೇವರ ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ಹೆಗಲ ಮೇಲೆ ಹೊತ್ತು ನಡೆದರು.

ವಿವಿಧ ಅರವಟಿಗೆಗಳು ಮತ್ತು ಸಾರ್ವಜನಿಕ ಸೋಮೇಶ್ವರಸ್ವಾಮಿ ಅನ್ನದಾನ ಸಮಿತಿ ಟ್ರಸ್ಟಿನಲ್ಲಿ ಪೂಜೆ ಸ್ವೀಕರಿಸಲಾಯಿತು. ಹೂವಿನಿಂದ ಅಲಂಕೃತವಾಗಿದ್ದ ರಥದಲ್ಲಿ ಉತ್ಸವ ಮೂರ್ತಿಯನ್ನು ಇಟ್ಟು ಪೂಜಿಸಲಾಯಿತು.

ಶಾಸಕ ಎ.ಮಂಜುನಾಥ ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಾಲಯದ ಸುತ್ತಲಿನ ರಥಬೀದಿಯಲ್ಲಿ ಭಕ್ತರು ರಥವನ್ನು ಎಳೆದರು. ಹರಹರ ಮಹಾದೇವ್, ಗೋವಿಂದಾ ಗೋವಿಂದಾ ನಾಮಸ್ಮರಣೆ ಮಾಡಿ ರಥವನ್ನು ಎಳೆದರು. ಸಹಸ್ರಾರು ಭಕ್ತರು ಇದ್ದರು.

ಎ.ಮಂಜುನಾಥ ಸುದ್ದಿಗಾರರೊಂದಿಗೆ ಮಾತನಾಡಿ, ‘ಶಿಥಿಲವಾಗಿದ್ದ ಕಲ್ಯಾಣಿಯನ್ನು ದುರಸ್ತಿ ಮಾಡಿಸಿದ್ದೇನೆ. ತಾಲ್ಲೂಕಿನಲ್ಲಿ ಉಳಿದಿರುವ ದೇವಾಲಯ, ಕಲ್ಯಾಣಿಗಳನ್ನು ದುರಸ್ತಿಗೆ ಕ್ರಮ ಕೈಗೊಳ್ಳುತ್ತೇನೆ. ಸ್ಮಾರಕಗಳ ದುರಸ್ತಿಗೆ ಯೋಜನಾ ಪ್ರಾಧಿಕಾರದಲ್ಲಿ ಹಣವನ್ನು ಮೀಸಲಿಟ್ಟಿದ್ದೇವೆ. ತಾಲ್ಲೂಕಿನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಕ್ತಿಮೀರಿ ದುಡಿಯುತ್ತೇನೆ’ ಎಂದರು.

ಕಳಸ ಸ್ಥಾಪನೆ: ಕಾಂಗ್ರೆಸ್ ಮುಖಂಡ ಎಚ್.ಸಿ.ಬಾಲಕೃಷ್ಣ ಮಾತನಾಡಿ, ‘ನನ್ನ ಅಧಿಕಾರದ ಅವಧಿಯಲ್ಲಿ ದಕ್ಷಿಣ ದ್ವಾರದ ಮೇಲಿನ ರಾಜಗೋಪುರವನ್ನು ಸಂಸದೆ ತೇಜಸ್ವಿನಿ ರಮೇಶ್ ಅವರೊಂದಿಗೆ ಸೇರಿ ಅಭಿವೃದ್ಧಿ ಮಾಡಿಸಿದ್ದೇನೆ. ರಾಜಗೋಪುರಕ್ಕೆ ಕಳಸ ಸ್ಥಾಪನೆ ಮಾಡಿಸಿಕೊಡುವೆ’ ಎಂದರು.

ಜಯಲಕ್ಷ್ಮೀರಾಜ್ ವುಡ್ ಕಾರ್ಖಾನೆ ಮಾಲೀಕ ಪುರುಷೋತ್ತಮ್ ಪಟೇಲ್ ಮತ್ತು ಸಹೋದರರು ನೀರು ಮಜ್ಜಿಗೆ ಪಾನಕ, ಕೋಸಂಬರಿ ವಿತರಿಸಿದರು. ಸೋಮೇಶ್ವರ ಸ್ವಾಮಿ ಅರವಟಿಕೆ ಟ್ರಸ್ಟಿನ ವತಿಯಿಂದ ದೇವಾಲಯದ ಪೌಳಿಯ ಹೊರಗೆ ಸಾರ್ವಜನಿಕರಿಗೆ ಅನ್ನದಾನ ನಡೆಯಿತು.

ಪೌಳಿಯ ಒಳಗೆ ಬ್ರಾಹ್ಮಣ, ಆರ್ಯವೈಶ್ಯ, ವೀರಶೈವರ ಅರವಟಿಗೆಗಳಿದ್ದವು. ಸಹಸ್ರಾರು ಭಕ್ತರು ಸಾಲಾಗಿ ನಿಂತು ಮೂಲದೇವರ ದರ್ಶನ ಪಡೆದರು.

ತಾಲ್ಲೂಕು ಪಂಚಾಯಿತಿ ಇಒ , ಟಿ.ಪ್ರದೀಪ್‌, ಮುಖ್ಯಾಧಿಕಾರಿ ಮಹೇಶ್‌ ಇದ್ದರು. ಸೋಮೇಶ್ವರ ಬಡಾವಣೆಯ ಸಿ.ಜಯರಾಮು, ಕೆ.ವಿ.ರವಿಕುಮಾರ್, ಶಶಿಧರ್, ನಾಗರಾಜು, ವೆಂಕಟೇಶ್, ಪುರಸಭೆ ಸದಸ್ಯೆ ಹೇಮಲತಾ, ಎಂ.ಎನ್.ಮಂಜುನಾಥ, ಕೆ.ವಿ.ಬಾಲು, ಅನಿಲ್‌ ಕುಮಾರ್‌, ಎಚ್.ಜೆ.ಪುರುಷೋತ್ತಮ್, ತಾಲ್ಲೂಕು ಯುವ ಜೆಡಿಎಸ್ ಘಟಕದ ಗಿರಿಗೌಡ, ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಕಾರ್ಯದರ್ಶಿ ಮಂಜುನಾಥ, ಕಾಂಗ್ರೆಸ್ ಮುಖಂಡ ಎಂ.ಕೆ.ಧನಂಜಯ, ಬ್ರಾಹ್ಮಣ ಸಭಾ, ವಿಪ್ರಮಹಿಳಾ ಮಂಡಳಿ ಪದಾಧಿಕಾರಿಗಳು ಮತ್ತು ಭಕ್ತರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)