ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನವೀಯತೆಯ ಮೌಲ್ಯ ಬಿತ್ತಿ ಬೆಳೆಸಿ’

ಮಾಗಡಿ ರೋಟರಿ ಸೆಂಟ್ರಲ್‌ ನೂತನ ಪದಾಧಿಕಾರಿಗಳ ಪದಗ್ರಹಣ
Last Updated 6 ಜುಲೈ 2019, 13:29 IST
ಅಕ್ಷರ ಗಾತ್ರ

ಮಾಗಡಿ: ಅಡ್ಡದಾರಿ ಹಿಡಿಯುತ್ತಿರುವ ಯುವಜನತೆಯಲ್ಲಿ ಮಾನವೀಯತೆಯ ಮೌಲ್ಯಗಳನ್ನು ಬಿತ್ತಿ ಬೆಳೆಸಲು ಮಾಧ್ಯಮಗಳು ಮುಂದಾಗಬೇಕು ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಕರೆ ನೀಡಿದರು.

ಪಟ್ಟಣದ ಸಿದ್ದಾರೂಢಾಶ್ರಮದಲ್ಲಿ ನಡೆದ ರೋಟರಿ ಮಾಗಡಿ ಸೆಂಟ್ರಲ್ 2019–20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮಗಳಿಗೆ ವ್ಯಕ್ತಿಗಳನ್ನು ದೂಷಿಸಿ ಫಲವಿಲ್ಲ. ಸಮಾಜವೇ ಕಾರಣ. ಜೈಲಿಗೆ ಹೋಗಿ ಬಂದವರನ್ನು ಹಾರ ತುರಾಯಿ ಹಾಕಿ ಗೌರವಿಸುವುದನ್ನು ಬದಲಿಸಬೇಕು. ಕಳೆದು ಹೋಗುತ್ತಿರುವ ಪ್ರಾಮಾಣಿಕತೆಯ ಮೌಲ್ಯಗಳನ್ನು ಮರು ಅಳವಡಿಸದಿದ್ದರೆ ಮುಂದೆ ಕಷ್ಟವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

‘ನಮ್ಮಲ್ಲಿ ಇರುವ ಸಂಪತ್ತಿನಲ್ಲಿ ಸಂತಸ ಪಡುವುದನ್ನು ರೂಡಿಸಿಕೊಳ್ಳಬೇಕು. ಕಾಳಸಂತೆ, ತೂಕ ಅಳತೆಯಲ್ಲಿ ವಂಚನೆ, ತೆರಿಗೆ ಕಷ್ಟದೆ ಸುಳ್ಳು ಲೆಕ್ಕಕೊಡುವುದನ್ನು ಸ್ವಯಂಪ್ರೇರಣೆಯಿಂದ ನಿಲ್ಲಿಸಬೇಕು. ಬೈಬಲ್‌ನಲ್ಲಿ ಹೇಳಿರುವಂತೆ ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ಅಧಿಕಾರಿಗಳು, ಸರ್ಕಾರಿ ವೈದ್ಯರು, ವರ್ತಕರು ಮಾಡುವ ನಯವಂಚನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಹೋರಾಟದ ಮನೋಭಾವನೆ ಬೆಳೆಸಬೇಕು’ ಎಂದು ತಿಳಿಸಿದರು.

ಶೇ 10ರಷ್ಟು ಕದಿಸುವ ಪೋಸ್ಟ್ ಮನ್, ಅಭಿವೃದ್ಧಿ ಕಾಮಗಾರಿ ಮಾಡಿಸದೆ ಕಳ್ಳಬಿಲ್ ಮಾಡಿಸುವ ಜನಪ್ರತಿನಿಧಿ ಮತ್ತು ಅಧಿಕಾರಿಗಳ ದರ್ಪ ಮಟ್ಟ ಹಾಕದಿದ್ದರೆ ಬಡವರ ಸ್ಥಿತಿಗತಿ ಅಯೋಮಯವಾಗಲಿದೆ. ಮಾನವೀಯತೆ ಉಳಿಸಿಕೊಂಡು ಸಾಮಾಜಿಕ ಮೌಲ್ಯಗಳನ್ನು ಬೆಳೆಸಬೇಕಿದೆ ಎಂದರು.

ಜವಾನನ ತಪ್ಪಿನಿಂದ ದಿವಾನನಿಗೆ ದಂಡ ಬೀಳಲಿದೆ. ಮಕ್ಕಳಲ್ಲಿ ಮೌಲ್ಯಗಳನ್ನು ಅಳವಡಿಸುವುದು ಪೋಷಕರ ಕರ್ತವ್ಯ. ಮೌಲ್ಯ ಕುಸಿಯುತ್ತಾ ಹೋದರೆ ಶಾಂತಿ ಸೌಹಾರ್ಧ ಹೇಗೆ ಉಳಿದೀತು. ಸ್ವಾರ್ಥ ಕೈಬಿಟ್ಟು, ನಿಸ್ವಾರ್ಥ ಸೇವಾಭಾವನೆ ಬೆಳೆಸಿಕೊಳ್ಳುವುದು ರೋಟರಿ ಪದಾಧಿಕಾರಿಗಳ ಆದ್ಯತೆಯಾಗಿದೆ. ಲೋಕ ಕಂಟಕರಾದ ವ್ಯಕ್ತಿ, ವಿಚಾರಗಳ ವಿರುದ್ಧ ಶಾಂತಿಯುತ ಹೋರಾಟ ರೂಪಿಸಿ ಸಮಸಮಾಜ ನಿರ್ಮಿಸಲು ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.

ರೋಟರಿ ವಲಯ ಗವರ್ನರ್ ಆರ್.ಕುಮಾರಸ್ವಾಮಿ ಮಾತನಾಡಿ, ‘ವಿಶ್ವಮಾನವ ಪ್ರಜ್ಞೆ ಬೆಳೆಸಿಕೊಂಡು ಸೇವಾಭಾವದಿಂದ ಬದುಕುವುದು ನಮ್ಮೆಲ್ಲರ ಉದ್ದೇಶವಾಗಿದೆ. ರಾಜ್ಯದಲ್ಲಿ ಮನೆಗೊಬ್ಬರು ಎನ್‌.ಸಂತೋಷ್‌ ಹೆಗ್ಡೆ ಹುಟ್ಟಿಬರಬೇಕು’ ಎಂದರು.

ಅಧ್ಯಕ್ಷ ಪದವಿ ಸ್ವೀಕರಿಸಿ ಮಾತನಾಡಿದ ಸಿದ್ದಲಿಂಗಯ್ಯ.ಡಿ.ಎನ್, ನೇತ್ರಚಿಕಿತ್ಸೆ, ಶಾಲೆಗಳ ದತ್ತು ಸ್ವೀಕಾರ, ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು, ಪಶುಚಿಕಿತ್ಸಾ ಕೇಂದ್ರಗಳ ಆರಂಭ, ಕವಿಗೋಷ್ಠಿ, ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಮೂಲಕ ದೀನರ ಸೇವೆಯಲ್ಲಿ ದೇವರನ್ನು ಕಾಣುವ ಯೋಜನೆಗಳನ್ನು 2019–-20 ವರ್ಷದ ಅವಧಿಯಲ್ಲಿ ಮಾಡುವುದಾಗಿ ತಿಳಿಸಿದರು.

ವಲಯ ಉಪ ಗವರ್ನರ್ ಎಲ್.ಸಿದ್ದಪ್ಪಾಜಿ, ನಿಕಟಪೂರ್ವ ಅಧ್ಯಕ್ಷ ಡಿ.ಕುಮಾರ್, ಕಾರ್ಯದರ್ಶಿ ಎಲ್.ಲೋಕೇಶ್, ನೂತನ ಕಾರ್ಯದರ್ಶಿ ಶಂಕರ್, ರೋಟರಿ ಸದಸ್ಯರಾದ ಎಚ್.ಶಿವಕುಮಾರ್, ಪ್ರಭಾಕರ್, ಆರ್.ಎನ್, ರಂಗಪ್ರಕಾಶ್, ಚನ್ನಬಸಪ್ಪ, ಆರ್.ನಾಗೇಶ್,ಎಂ.ಎನ್.ಮಂಜುನಾಥ್, ಅಂಗಡಿ ನಾಗರಾಜು, ಎ.ವಿ.ಮಹೇಶ್, ಎಸ್.ಸುನಿಲ್, ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನ್ಯಾ. ಸಂತೋಷ್ ಹೆಗ್ಡೆ ಅವರಿಗೆ ಕೆಂಪೇಗೌಡ ಪ್ರತಿಮೆ ಮತ್ತು ರಾಷ್ಟ್ರಲಾಂಚನದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವರ್ತಕ ಜಯಕುಮಾರ್ ಕುಟುಂಬದವರು ಮಕ್ಕಳಿಗೆ ಆಂಗ್ಲಭಾಷೆಯ ಶಬ್ದಕೋಶ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT