ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರ ಓಡಾಟಕ್ಕೆ ವಿಶೇಷ ಬಸ್‌

ಕಾರ್ಮಿಕರ ಉತ್ತೇಜನಕ್ಕೆ ಮುಂದಾದ ನಗರಸಭೆ; ನಿತ್ಯ ಯೋಗ ತರಬೇತಿ
Last Updated 16 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ರಾಮನಗರ: ಲಾಕ್‌ಡೌನ್‌ ನಡುವೆಯೂ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಪೌರ ಕಾರ್ಮಿಕರ ಓಡಾಟಕ್ಕೆ ನಗರಸಭೆಯು ಬಸ್‌ ಸೌಲಭ್ಯ ಕಲ್ಪಿಸಿದ್ದು, ಅವರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ.

ಲಾಕ್‌ಡೌನ್ ಕಾರಣಕ್ಕೆ ಸದ್ಯ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಆಟೊ ಮೊದಲಾದ ವಾಹನಗಳ ಸಂಚಾರವೂ ಇಲ್ಲ. ಏನೆಲ್ಲ ಸೇವೆಗಳು ಬಂದ್‌ ಆಗಿದ್ದರೂ ಈ ಕಾರ್ಮಿಕರು ಮಾತ್ರ ಸ್ವಚ್ಛತಾ ಸೇವೆಯನ್ನು ತಪ್ಪಿಸುವ ಹಾಗಿಲ್ಲ. ಹೀಗಾಗಿ ಇವರಿಗೆಂದೇ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಿದೆ.

ರಾಮನಗರ ನಗರಸಭೆಯಲ್ಲಿ130 ಕಾಯಂ ಹಾಗೂ ನೇರ ವೇತನ ಪಾವತಿಗೆ ಒಳಪಟ್ಟ ಪೌರ ಕಾರ್ಮಿಕರು ಇದ್ದಾರೆ. ಮುಂಜಾನೆ ನಗರಸಭೆ ಕಚೇರಿ ಮುಂಭಾಗ ಸೇರುವ ಕಾರ್ಮಿಕರನ್ನು ಈ ಬಸ್ ಅವರು ಕಾರ್ಯ ನಿರ್ವಹಿಸುವ ಸ್ಥಳಗಳಿಗೆ ಬಿಡುತ್ತದೆ. ಕೆಲಸದ ಅವಧಿ ಮುಗಿದ ಬಳಿಕ ಅವರನ್ನು ಅಲ್ಲಿಂದ ವಾಪಸ್ ಕರೆತರುತ್ತಿದೆ. ಇಲ್ಲಿಯೂ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳುವಂತೆ ತಿಳಿಹೇಳಲಾಗಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಯೋಗ ಕಡ್ಡಾಯ: ಪೌರ ಕಾರ್ಮಿಕರು ಈಗ ಯೋಗ ಮಾಡುವುದು ಕಡ್ಡಾಯವಾಗಿದೆ. ನಗರಸಭೆಯಲ್ಲಿ ನಿತ್ಯ ಮುಂಜಾನೆ ಅವರಿಗೆಂದೇ ಯೋಗಾಭ್ಯಾಸದ ತರಗತಿಗಳು ನಡೆದಿವೆ. ಮುಂಜಾನೆ ನಗರಸಭೆ ಕಚೇರಿಯ ಮುಂದೆ ಸೇರುವ ಕಾರ್ಮಿಕರಿಗೆಲ್ಲ ಯೋಗ ಹೇಳಿಕೊಡಲಾಗುತ್ತದೆ. ಅದರಲ್ಲೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಸನಗಳನ್ನು ಮಾಡಿಸಲಾಗುತ್ತಿದೆ ಎನ್ನುತ್ತಾರೆ ನಗರಸಭೆ ಆಯುಕ್ತೆ ಶುಭಾ.

ಅಧಿಕಾರಿಗಳಿಂದ ಉತ್ತೇಜನ: ಪೌರ ಕಾರ್ಮಿಕರು ತಮ್ಮ ಕೆಲಸದಿಂದ ವಿಮುಖರಾಗದಂತೆ ಅವರನ್ನು ಉತ್ತೇಜಿಸುವ ಕೆಲಸವನ್ನು ಗ್ರೂಪ್‌ ‘ಬಿ‘ ಮತ್ತು ‘ಸಿ‘ ಸಿಬ್ಬಂದಿಗೆ ವಹಿಸಲಾಗಿದೆ. ಈ ಅಧಿಕಾರಿ ಮತ್ತು ಸಿಬ್ಬಂದಿಯು ತಮ್ಮ ಕೆಲಸ ಮುಗಿದ ಬಳಿಕ ಪೌರ ಕಾರ್ಮಿಕರು ಇರುವಲ್ಲಿಗೆ ತೆರಳಿ ಅವರಿಗೆ ಹಣ್ಣು, ಜ್ಯೂಸ್ ಇಲ್ಲವೇ ಎಳನೀರು ಕೊಡಿಸಬೇಕು. ಜೊತೆಗೆ ಆಗಾಗ್ಗೆ ಹ್ಯಾಂಡ್ ಸ್ಯಾನಿಟೈಸರ್ ನೀಡಬೇಕು ಎಂದು ಸೂಚಿಸಲಾಗಿದೆ. ಇಂದಿರಾ ಕ್ಯಾಂಟೀನ್‌ನ ಊಟೋಪಚಾರ ಕೆಲವೊಮ್ಮೆ ಪೌರ ಕಾರ್ಮಿಕರಿಗೆ ರುಚಿಸುವುದಿಲ್ಲ. ಹೀಗಾಗಿ ಇವರಿಗೆಂದೇ ಅದೇ ಕ್ಯಾಂಟೀನ್‌ನಲ್ಲಿ ದೋಸೆ, ಇಡ್ಲಿ ಮೊದಲಾದ ಉಪಾಹಾರ ಸಿದ್ಧಪಡಿಸಿ ಕೊಡಲಾಗುತ್ತಿದೆ.

ಪೌರ ಕಾರ್ಮಿಕರು ಈ ಸಂದರ್ಭದಲ್ಲಿ ತಾವು ಒಂಟಿ ಎನ್ನಿಸಬಾರದು ಎಂಬ ಕಾರಣಕ್ಕೆ ಅವರೊಡನೆ ಇತರ ಅಧಿಕಾರಿಗಳೂ ಬೆರೆಯುತ್ತಿದ್ದಾರೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಹ್ಯಾಂಡ್ ಸ್ಯಾನಿಟೈಸರ್‍ ಮತ್ತು ಮತ್ತು ಮಾಸ್ಕ್‌ ವಿತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT