ಮದ್ಯ ಮಾರಾಟದ ಮೇಲೆ ನಿಗಾ; ಅಬಕಾರಿ ಅಧಿಕಾರಿಗಳಿಂದ ಕಟ್ಟುನಿಟ್ಟಿನ ಕ್ರಮ

ಮಂಗಳವಾರ, ಏಪ್ರಿಲ್ 23, 2019
33 °C
ಉತ್ಪನ್ನದ ಅಕ್ರಮ ಸಾಗಣೆಗೂ ಕಡಿವಾಣ

ಮದ್ಯ ಮಾರಾಟದ ಮೇಲೆ ನಿಗಾ; ಅಬಕಾರಿ ಅಧಿಕಾರಿಗಳಿಂದ ಕಟ್ಟುನಿಟ್ಟಿನ ಕ್ರಮ

Published:
Updated:

ರಾಮನಗರ: ಚುನಾವಣೆ ಘೋಷಣೆಯಾದ ದಿನದಿಂದ ಮದ್ಯ ಪೂರೈಕೆ ಮೇಲೆ ಚುನಾವಣಾ ಆಯೋಗವು ಮಿತಿ ಹೇರಿದ್ದು, ಪಾನಪ್ರಿಯರ ನಶೆ ಇಳಿಸುತ್ತಿದೆ. ಮತ್ತೊಂದೆಡೆ ಅಬಕಾರಿ ಇಲಾಖೆಯು ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟದ ಮೇಲೆ ಕಣ್ಣಿಟ್ಟಿದೆ.

ಚುನಾವಣೆ ಸಂದರ್ಭ ಮದ್ಯದ ವಹಿವಾಟು ಕೊಂಚ ಜೋರಾಗಿಯೇ ಇರುತ್ತದೆ. ಅದರಲ್ಲಿಯೂ ದಿನವಿಡೀ ಪ್ರಚಾರ ಕಾರ್ಯದಲ್ಲಿ ದಣಿದ ಕೆಲವು ಕಾರ್ಯಕರ್ತರು ಸಂಜೆ ತಂಪಾಗಿ ಬಿಯರ್‌ ಹೀರುತ್ತಾ ಕೂರುವುದು ಸಾಮಾನ್ಯವಾಗಿದೆ. ಆದರೆ ಯದ್ವಾತದ್ವಾ ಮದ್ಯ ಪೂರೈಕೆ ಮತ್ತು ಮಾರಾಟದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ವೈನ್‌ ಸ್ಟೋರ್‌ಗಳು ಹಾಗೂ ಬಾರ್‌ ಅಂಡ್ ರೆಸ್ಟೋರೆಂಟುಗಳಿಗೆ ಬೇಡಿಕೆಯಷ್ಟು ಮದ್ಯ ಸರಬರಾಜು ಆಗುತ್ತಿಲ್ಲ ಎನ್ನುವ ದೂರಿದೆ.

ಜಿಲ್ಲೆಯಲ್ಲಿ ಸುಮಾರು 120 ಮದ್ಯ ಮಾರಾಟ ಅಂಗಡಿಗಳಿವೆ. ಅಬಕಾರಿ ಇಲಾಖೆಯು ಇವುಗಳ ಮಾರಾಟದ ಸಾಮರ್ಥ್ಯದ ಮೇಲೆ ಮದ್ಯ ಪೂರೈಕೆ ಮಾಡುತ್ತಿದೆ. ಅಂಗಡಿಯ ಕಳೆದ ಮೂರು ವರ್ಷಗಳ ಮದ್ಯ ಮಾರಾಟದ ಲೆಕ್ಕ ತೆಗೆದುಕೊಂಡು ಅಷ್ಟೇ ಪ್ರಮಾಣದ ಅಥವಾ ಅದಕ್ಕಿಂತ ಶೇ 10ರಷ್ಟು ಹೆಚ್ಚಿಗೆ ಮದ್ಯವನ್ನು ಮಾತ್ರ ಪೂರೈಕೆ ಮಾಡಲಾಗುತ್ತಿದೆ.

‘ ಚುನಾವಣೆಯ ಸಂದರ್ಭ ಅನಗತ್ಯವಾಗಿ ಮದ್ಯ ದಾಸ್ತಾನು ಮಾಡಬಾರದು ಎನ್ನುವ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯ ಪೂರೈಕೆಯ ಮೇಲೆ ಮಿತಿಯನ್ನು ವಿಧಿಸಲಾಗಿದೆ. ಬೇಡಿಕೆಗೆ ತಕ್ಕಷ್ಟು ಪ್ರಮಾಣದ ಉತ್ಪನ್ನವನ್ನು ಮಾತ್ರ ಸರಬರಾಜು ಮಾಡಲಾಗುತ್ತಿದೆ. ಪ್ರತಿ ಅಂಗಡಿಯಿಂದ ಆಯಾ ದಿನವೇ ಮಾರಾಟವಾದ ಹಾಗೂ ಉಳಿದ ಉತ್ಪನ್ನದ ಲೆಕ್ಕ ಪಡೆಯಲಾಗುತ್ತಿದೆ. ಇದರಿಂದ ಎಷ್ಟು ಬೇಡಿಕೆ ಇದೆ ಎಂಬುದು ತಿಳಿಯುತ್ತಿದೆ. ವಹಿವಾಟಿಗೆ ಯಾವುದೇ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎನ್ನುತ್ತಾರೆ ಅಬಕಾರಿ ಉಪ ಆಯುಕ್ತ ಮೋಹನ್‌ಕುಮಾರ್.

ಸಾಗಣೆ ಮೇಲೂ ಕಣ್ಣು: ಮದ್ಯ ಪೂರೈಕೆ ಮೇಲೆ ನಿರ್ಬಂಧ ಬಿದ್ದ ಕಾರಣ ಕೆಲವು ಕಡೆ ಅಕ್ರಮವಾಗಿ ಸಾಗಣೆ ನಡೆದಿದ್ದು, ಅಬಕಾರಿ ಅಧಿಕಾರಿಗಳು ಈಗಾಗಲೇ ಸಾಕಷ್ಟು ದಾಳಿ ನಡೆಸಿ ಅಪಾರ ಪ್ರಮಾಣದ ಉತ್ಪನ್ನಗಳನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಉಪ ಆಯುಕ್ತರು, ವಲಯ ಆಯುಕ್ತರು ಹಾಗೂ ತಾಲ್ಲೂಕು ಮಟ್ಟದಲ್ಲಿ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಈ ದಾಳಿಗಳು ನಡೆಯುತ್ತಿವೆ.

ಜಿಲ್ಲೆಯಲ್ಲಿ ಇಂತಹ ಆರು ತಂಡಗಳು ಸಕ್ರಿಯವಾಗಿವೆ. ಈಗಾಗಲೇ 9,160 ಲೀಟರ್‌ ಮದ್ಯ ಹಾಗೂ 7,905 ಲೀಟರ್‌ನಷ್ಟು ಬಿಯರ್‌ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದ್ವಿಚಕ್ರವಾಹನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಅಕ್ರಮವಾಗಿ ಮದ್ಯ ಸಾಗಿಸುವ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿವೆ. ಇದಲ್ಲದೆ ಚೆಕ್‌ಪೋಸ್ಟ್‌ಗಳಲ್ಲೂ ತಪಾಸಣೆ ನಡೆದಿದೆ.

* ಚುನಾವಣೆಯ ಹಿನ್ನೆಲೆಯಲ್ಲಿ ಮದ್ಯ ಮಾರಾಟದ ಮೇಲೆ ನಿಗಾ ವಹಿಸಲಾಗಿದೆ. ಬೇಡಿಕೆಯಷ್ಟು ಉತ್ಪನ್ನ ಮಾತ್ರ ಪೂರೈಕೆ ಮಾಡಲಾಗುತ್ತಿದ್ದು, ಅನಗತ್ಯ ದಾಸ್ತಾನು ಮಾಡಲು ಅವಕಾಶ ನೀಡುತ್ತಿಲ್ಲ
–ಮೋಹನ್‌ಕುಮಾರ್‌, ಅಬಕಾರಿ ಉಪ ಆಯುಕ್ತ

ಅಂಕಿ–ಅಂಶ

17,065 ಲೀಟರ್‌–ಅಬಕಾರಿ ಇಲಾಖೆಯು ಈವರೆಗೆ ವಶಪಡಿಸಿಕೊಂಡ ಒಟ್ಟು ಮದ್ಯ

₹ 68,00,653–ಈವರೆಗೆ ವಶಪಡಿಸಿಕೊಳ್ಳಲಾದ ಮದ್ಯದ ಮೌಲ್ಯ

27 –ದ್ವಿಚಕ್ರ ವಾಹನಗಳ ವಶ

₹ 6.75 ಲಕ್ಷ––ವಶಪಡಿಸಿಕೊಂಡ ವಾಹನಗಳ ಮಾರುಕಟ್ಟೆ ಮೌಲ್ಯ

274–ದಾಖಲಾದ ಒಟ್ಟು ಪ್ರಕರಣಗಳು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !