ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇಲಾಖೆ ಸಿದ್ಧತೆ

ಇದೇ 25ರಿಂದ ಪರೀಕ್ಷೆ: ರಾಮನಗರ ಜಿಲ್ಲೆಯಲ್ಲಿವೆ 57 ಕೇಂದ್ರಗಳು
Last Updated 14 ಜೂನ್ 2020, 8:09 IST
ಅಕ್ಷರ ಗಾತ್ರ

ರಾಮನಗರ: ಇದೇ 25ರಿಂದ ಜುಲೈ3ರವರೆಗೆ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಇದಕ್ಕಾಗಿ ಸಿದ್ಧತೆ ನಡೆಸಿದೆ.

ಶಿಕ್ಷಣ ಇಲಾಖೆ ನೀಡಿರುವ ನೂತನ ಮಾರ್ಗಸೂಚಿ ಪ್ರಕಾರ ಪರೀಕ್ಷೆ ನಡೆಯಲಿದೆ. ಪರಸ್ಪರ ಅಂತರ ಕಾಯ್ದುಕೊಳ್ಳುವ ಸಲುವಾಗಿ ಹೆಚ್ಚುವರಿ ಕೊಠಡಿಗಳನ್ನು ಗುರುತಿಸಲಾಗುತ್ತಿದೆ. ಜತೆಗೆ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ, ಸ್ಯಾನಿಟೈಸರ್‌ ಬಳಕೆ ಸೇರಿದಂತೆ ಅಗತ್ಯ ಸಿದ್ಧತೆ ಮಾಡುತ್ತಿದ್ದಾರೆ.

ಕಳೆದ ಮಾ‌ರ್ಚ್‌ ಅಂತ್ಯದಲ್ಲಿ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತಾದರೂ ಕೊರೊನಾ ವೈರಸ್ ಹಾವಳಿ ಕಾರಣಕ್ಕೆ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಈ ಬಾರಿ ವಿದ್ಯಾರ್ಥಿಗಳು ತಾವು ಇರುವ ಜಿಲ್ಲೆಗಳಲ್ಲಿಯೇ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ. 49 ಮಂದಿ ಪರೀಕ್ಷೆ ಬರೆಯಲು ಬೇರೆ ಜಿಲ್ಲೆಗೆ ತೆರಳಲು ಅವಕಾಶ ಕೋರಿದ್ದರೆ, ಅನ್ಯ ಜಿಲ್ಲೆಗಳಿಂದ ಇಲ್ಲಿ ಪರೀಕ್ಷೆ ಬರೆಯಲು 104 ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಈ ಹಿಂದೆ 57 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಶಿಕ್ಷಣ ಇಲಾಖೆ ಮಾರ್ಗ ಸೂಚಿಯಂತೆ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಸಲು ಇದೇ ಸಂಖ್ಯೆ ಕೊಠಡಿ ಮುಂದುವರೆಸಲಾಗಿದೆ. ದೊಡ್ಡ ಕೊಠಡಿಯಲ್ಲಿ 20ಮಂದಿ ವಿದ್ಯಾರ್ಥಿಗಳನ್ನು ಹಾಗೂ ಸಣ್ಣ ಕೊಠಡಿಯಲ್ಲಿ 15ರಿಂದ 18 ಮಂದಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಹೀಗಾಗಿ ಹೆಚ್ಚುವರಿ ಕೊಠಡಿ ಅವಶ್ಯ ಇಲ್ಲ ಎಂಬುದು ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳ ಮಾತು. ಇದರ ನಡುವೆಯೂ ಮುಂಜಾಗ್ರತ ಕ್ರಮವಾಗಿ ಪ್ರತಿ ತಾಲ್ಲೂಕಿನಲ್ಲಿಯೂ 3 ಹೆಚ್ಚುವರಿ ಕೊಠಡಿ ತೆರೆಯಲಾಗುತ್ತದೆ. ಇದಲ್ಲದೇ, ಜ್ವರ ಸೇರಿದಂತೆ ಕೋವಿಡ್ ಲಕ್ಷಣ ಕಂಡು ಬರುವ ವಿದ್ಯಾರ್ಥಿಗಳಿಗಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಎರಡು ಕೊಠಡಿಯನ್ನು ತೆರೆಯಲಾಗಿದೆ. ಇನ್ನು ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಅಧಿಕಾರಿಗಳು ಗುರುತಿಸಿಲ್ಲ.

ಪರೀಕ್ಷೆ ಬರೆಯಲು ಬರುವ ಪ್ರತಿ ವಿದ್ಯಾರ್ಥಿಗಳಿಗೆ ಕೇಂದ್ರದ ಹೊರಗಡೆ ಸ್ಯಾನಿಟೈಸ್ ಮಾಡಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ. ಇದರ ಜತೆಗೆ ಪ್ರತಿ ವಿದ್ಯಾರ್ಥಿಗಳಿಗೆ ತಲಾ ಎರಡು ಮಾಸ್ಕ್ ವಿತರಣೆ ಮಾಡಲಾಗುತ್ತಿದೆ. ಜ್ವರ ತಪಾಸಣೆ ಹಮ್ಮಿಕೊಳ್ಳಲಾಗುತ್ತಿದೆ. ಇನ್ನು ಪರೀಕ್ಷೆ ಬರೆಯುವ ಸಮಯದಲ್ಲಿ ಅಂತರ ಕಾಯ್ದುಕೊಳ್ಳಲಾಗುತ್ತಿದೆ.

ಎಲ್ಲ 57 ಪರೀಕ್ಷಾ ಕೇಂದ್ರಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಆ ಮೂಲಕ ಪರೀಕ್ಷಾ ಆಕ್ರಮಗಳನ್ನು ತಡೆಗಟ್ಟುವುದು ಶಿಕ್ಷಣ ಇಲಾಖೆಉದ್ದೇಶವಾಗಿದೆ. ಪರೀಕ್ಷಾ ಕೇಂದ್ರದ ಕಾರಿಡಾರ್, ಹಾಗೂ ಉತ್ತರ ಪತ್ರಿಕೆ ಇರಿಸುವ ಕೊಠಡಿಗಳಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT