ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ| ಕಂಚಿನ ಪ್ರತಿಮೆಗಳು ಉದ್ಘಾಟನೆಗೆ ಸಜ್ಜು

ಜಿಲ್ಲಾ ಕಚೇರಿ ಸಂಕೀರ್ಣದ ಮುಂಭಾಗ ಸ್ಥಾಪನೆ: ಶೀಘ್ರ ದಿನಾಂಕ ನಿಗದಿ
Last Updated 9 ನವೆಂಬರ್ 2019, 10:42 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಗಳು ಶೀಘ್ರದಲ್ಲಿಯೇ ಅನಾವರಣಗೊಳ್ಳಲಿವೆ.

14 ಅಡಿ ಎತ್ತರದ ಈ ಎರಡು ಪ್ರತಿಮೆಗಳು ಈಗಾಗಲೇ ಜಿಲ್ಲಾ ಕಚೇರಿ ಸಂಕೀರ್ಣಕ್ಕೆ ಬಂದಿವೆ. ಮುಂದಿನ ದಿನಗಳಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಆಕರ್ಷಣೆ ಆಗಲಿವೆ. ಬಿಡದಿಯ ವಿಜಯಕುಮಾರ್ ಎಂಬುವವರು 14 ಅಡಿ ಎತ್ತರ ಹಾಗು 3.5 ಅಡಿ ಅಗಲದ ಅಂಬೇಡ್ಕರ್ ಪ್ರತಿಮೆಯನ್ನು ಕಂಚಿನಲ್ಲಿ ತಯಾರಿಸಿದ್ದಾರೆ. ಇದಕ್ಕಾಗಿ ಅವರು ಏಳು ತಿಂಗಳು ವ್ಯಯಿಸಿದ್ದಾರೆ. ₨40 ಲಕ್ಷ ವೆಚ್ಚ ಅಂದಾಜಿಸಲಾಗಿದೆ. ಇದರಲ್ಲಿ ₨25 ಲಕ್ಷವನ್ನು ಸಮಾಜ ಕಲ್ಯಾಣ ಇಲಾಖೆ ನೀಡಿದೆ. ಉಳಿದ ₨15 ಲಕ್ಷ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.

ಕುದುರೆ ಮೇಲೆ ಕತ್ತಿ ಹಿಡಿದು ಕುಳಿತ ಕೆಂಪೇಗೌಡರ ಪ್ರತಿಮೆಯನ್ನು ಬೆಂಗಳೂರಿನ ರಾಮೋಹಳ್ಳಿಯ ಕಲಾವಿದ ಶಿವಕುಮಾರ್ ತಯಾರಿಸಿದ್ದಾರೆ. ಒಂದು ವರ್ಷವನ್ನು ಇದಕ್ಕಾಗಿ ಮೀಸಲಿಟ್ಟಿದ್ದಾರೆ. ಜಿಲ್ಲಾ ಪಂಚಾಯಿತಿಯು ₨60 ಲಕ್ಷ ಅನುದಾನ ವ್ಯಯಿಸುತ್ತಿದೆ.

ಜಿಲ್ಲಾ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ವಿವಿಧ ಸಂಘಟನೆಗಳು ಬಹು ದಿನಗಳಿಂದ ಒತ್ತಾಯಿಸುತ್ತಲೇ ಬಂದಿದ್ದವು. ಕಳೆದ ಮೂರು ವರ್ಷಗಳ ಹಿಂದೆಯೇ ಸರ್ಕಾರವು ಇದಕ್ಕೆ ಅನುಮೋದನೆ ನೀಡಿತ್ತು. ಆದರೆ ಎಲ್ಲಿ ಸ್ಥಾಪಿಸಬೇಕು ಎಂಬುದು ಅಂತಿಮಗೊಂಡಿರಲಿಲ್ಲ. ನಗರಸಭೆ ಮುಂಭಾಗ, ಕಂದಾಯ ಭವನದ ಮುಂಭಾಗದಲ್ಲಿ ಸ್ಥಾಪನೆಗೆ ಚರ್ಚೆ ನಡೆದು ಅಂತಿಮವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸ್ಥಳ ನಿರ್ಣಯವಾಯಿತು.

ಇದರೊಟ್ಟಿಗೆ ಕೆಂಪೇಗೌಡ ಹಾಗೂ ಕೆಂಗಲ್‌ ಹನುಮಂತಯ್ಯ ಅವರ ಪ್ರತಿಮೆಯನ್ನೂ ನಿರ್ಮಾಣ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿತು. ಅಂತಿಮವಾಗಿ ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೂ ಅನುಮೋದನೆ ದೊರೆತು ಇದರ ಮೇಲುಸ್ತುವಾರಿಗಾಗಿ ಸಮಿತಿಯೊಂದನ್ನು ರಚಿಸಲಾಗಿತ್ತು.

ನಿರ್ವಹಣೆ ಹೊಣೆ: ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿರುವ ಮಹಾತ್ಮರ ಪ್ರತಿಮೆಗಳಿಗೆ ಕಿಡಿಕೇಡಿಗಳು ಹಾನಿ, ಅವಮಾನ ಮಾಡುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ಹೀಗಾಗಿಯೇ ಸುಪ್ರೀಂ ಕೋರ್ಟ್‌ ಮಹಾತ್ಮರ ಪ್ರತಿಮೆ ಸ್ಥಾಪನೆಗೆ ನಿರ್ಬಂಧ ವಿಧಿಸಿದೆ. ಸಂಬಂಧಿಸಿದ ಸಂಸ್ಥೆಗಳೇ ಅದರ ನಿರ್ವಹಣೆಯ ಹೊಣೆ ಹೊರಬೇಕು ಎಂಬ ಷರತ್ತು ಹಾಕಿದೆ.

ಜಿಲ್ಲಾಧಿಕಾರಿಗಳ ಕಚೇರಿ ಸಂಕಿರ್ಣದ ಸುತ್ತಲೂ ಕಂಪೌಂಡ್ ಹಾಗೂ ರಾತ್ರಿ ವೇಳೆ ಭದ್ರತೆ ಇರುವ ಕಾರಣ ಇಲ್ಲಿಯೇ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗ ಸಭೆ ಕರೆದು ಚರ್ಚೆ ನಡೆಸಿ ದಿನಾಂಕ ನಿಗದಿಪಡಿಸಲು ಸಭೆ ನಿರ್ಧರಿಸಿದೆ.

***

ಅಂಬೇಡ್ಕರ್, ಕೆಂಪೇಗೌಡರ ಕಂಚಿನ ಪ್ರತಿಮೆಗಳೆರಡು 14 ಅಡಿ ಎತ್ತರದ್ದಾಗಿವೆ. ಇಬ್ಬರು ಕಲಾವಿದರು ವರ್ಷ ಕಾಲ ಶ್ರಮಿಸಿ ಇವುಗಳನ್ನು ನಿರ್ಮಿಸಿದ್ದಾರೆ
–ಗೋವಿಂದ್ ರಾಜ್, ನಿರ್ಮಿತಿ ಕೇಂದ್ರದ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT