ಭಾನುವಾರ, ಮಾರ್ಚ್ 7, 2021
30 °C

ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಿ: ಕಾಂಗ್ರೆಸ್‌ ಮುಖಂಡ ಎಚ್.ಸಿ ಬಾಲಕೃಷ್ಣ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಸ್ಮಾರ್ಟ್ ಸಿಟಿ ಯೋಜನೆಗೆ ಕಂಚುಗಾರನಹಳ್ಳಿ ಮತ್ತು ಬೈರಮಂಗಲ ಪಂಚಾಯಿತಿ ವ್ಯಾಪ್ತಿಯ ಸಾವಿರಾರು ಎಕರೆ ಭೂಮಿ ಪ್ರಶಸ್ತವಾಗಿದೆ. ತಾರತಮ್ಯದ ಭೂಸ್ವಾಧೀನ ಪ್ರಕ್ರಿಯೆಗೆ ತಡೆ ಹಿಡಿಯಬೇಕು. ರೈತರ ಸಂಕಷ್ಟಕ್ಕೆ ನೆರವಾಗಬೇಕು ಎಂದು ಕಾಂಗ್ರೆಸ್‌ ಮುಖಂಡ ಎಚ್.ಸಿ ಬಾಲಕೃಷ್ಣ ಆಗ್ರಹಿಸಿದ್ದಾರೆ. 

ಬೈರಮಂಗಲ ಪಂಚಾಯಿತಿಯ ಹೊಸೂರು ಗ್ರಾಮದಲ್ಲಿ ಮಾತನಾಡಿದ ಅವರು, ಕೇವಲ 800 ಎಕರೆ ಡಿನೋಟಿಫಿಕೇಶನ್‌ ಮಾಡುವ ಬದಲು ಗುರುತಿಸಲಾಗಿರುವ ಎಲ್ಲ ಭೂಮಿಯನ್ನು ಡಿನೋಟಿಫಿಕೇಶನ್‌ ಮಾಡಬೇಕು. 2006ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕನಸಾಗಿದ್ದ ಬೆಂಗಳೂರು ಟೌನ್ ಶಿಪ್ ಯೋಜನೆ ಪೂರ್ಣಗೊಂಡಿಲ್ಲ. ರೈತರ ಪರಿಸ್ಥಿತಿ ಹದಗೆಟ್ಟಿದೆ.  ಜನರಿಗಾಗುತ್ತಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು. 

ಎಚ್‌ಡಿಕೆ ಅಧಿಕಾರದ ಅವಧಿಯಲ್ಲಿ 2006ರಲ್ಲಿ ಬಿಡದಿ ಬಳಿಯ ಕಂಚುಗಾರನಹಳ್ಳಿ ಮತ್ತು ಬೈರಮಂಗಲ ಪಂಚಾಯಿತಿ ವ್ಯಾಪ್ತಿಯ 10 ಕಂದಾಯ ಗ್ರಾಮಗಳು ಸೇರಿದಂತೆ ಸುಮಾರು 30 ಗ್ರಾಮಗಳ 9,178 ಎಕರೆ ಭೂಮಿಯನ್ನು ಟೌನ್ ಶಿಪ್ ನಿರ್ಮಾಣಕ್ಕೆಂದು ಗುರುತಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಭಾಗದ ಭೂಮಿಯನ್ನು ‘ಕೆಂಪು ವಲಯ’ ಎಂದು ಗುರುತಿಸಲಾಗಿದೆ. ಭೂಮಿಯನ್ನು ಯಾವುದೇ ರೀತಿ ಅಭಿವೃದ್ಧಿ ಮಾಡುವಂತಿಲ್ಲ. ಭೂ ಪರಿವರ್ತನೆ ಮಾಡಲು ಅನುಮತಿ ಇಲ್ಲ. ಮನೆ ಕಟ್ಟಿಕೊಳ್ಳಲು ಸಹ ಖಾತೆ ನೀಡುತ್ತಿಲ್ಲ. ಹಾಲಿನ ಡೇರಿ ನಿರ್ಮಿಸಲು ಅನುಮತಿ ಸಿಗದಾಗಿದೆ ಎಂದು ಹೇಳಿದರು.  

ಬಡ ರೈತರು ಮಕ್ಕಳ ಮದುವೆ ಮತ್ತಿತರ ಸಂಕಷ್ಟದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಜಮೀನು ಮಾರಾಟ ಮಾಡಲು ಮುಂದಾದರೂ ಸೂಕ್ತ ಬೆಲೆ ಸಿಗುತ್ತಿಲ್ಲ. ಅಭಿವೃದ್ಧಿಗೆ ಅವಕಾಶವೇ ಇಲ್ಲದ ಭೂಮಿಯನ್ನು ಬೆಂಗಳೂರಿನವರೂ ತೀರಾ ಕಡಿಮೆ ಬೆಲೆಗೆ ಖರೀದಿ‌ಸುತ್ತಿದ್ದಾರೆ. ಇದರಿಂದ ಇಲ್ಲಿನ ಜನರು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ ಎಂದು ತಿಳಿಸಿದರು. 

ಸಾತನೂರು, ಹೊಸಕೋಟೆ, ರಾಮನಗರ ಕಸಬಾ ಸೇರಿದಂತೆ ಐದು ಕಡೆ ಇದೇ ರೀತಿಯ ಟೌನ್ ಶಿಪ್ ನಿರ್ಮಾಣಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ಯೋಜನೆ ನೆಲಕಚ್ಚಿದೆ. ಆನಂತರ ಸದಾನಂದಗೌಡ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಿಡದಿ ಟೌನ್‌ಶಿಪ್‌ ಅಧಿಸೂಚನೆಯನ್ನು ಹೊರತುಪಡಿಸಿ, ಉಳಿದ ಅಧಿಸೂಚನೆಗಳನ್ನು ರದ್ದು ಮಾಡಿದ್ದರು. ಇಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ 500 ಕೋಟಿಗೆ ಡಿ.ಎಲ್.ಎಫ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕಾರಣಾಂತರಗಳಿಂದ ಇದು ಸಹ ರದ್ದಾಯಿತು ಎಂದು ಹೇಳಿದರು.  

ಸರ್ಕಾರ ಕೂಡಲೇ ಟೌನ್‌ಶಿಪ್ ಅಧಿಸೂಚನೆಯಲ್ಲಿರುವ ಎಲ್ಲಾ 9,178 ಎಕರೆ ಜಮೀನನ್ನು ನಿಯಮಾವಳಿಯಂತೆ ಸ್ವಾಧೀನಕ್ಕೆ ಮುಂದಾಗಬೇಕು. ಪ್ರಭಾವಿಗಳು ಬೆಲೆ ಹೆಚ್ಚಿಗೆ ಮಾಡಿ ಸ್ವಾಧೀನ ಪಡಿಸಿಕೊಂಡು ತಾರತಮ್ಯ ಮಾಡಬಾರದು. ಟೌನ್‌ಶಿಪ್‌ಗೆ ಗುರುತಿಸಿರುವ ಎಲ್ಲಾ ಭೂಮಿಗೆ ಕೆಂಪು ವಲಯದಿಂದ ಮುಕ್ತಿ ನೀಡಿ ಹಳದಿ ವಲಯಕ್ಕೆ ಸೇರಿಸಬೇಕು. ಭೂ ಪರಿವರ್ತನೆ ಮತ್ತಿತರ ಅಭಿವೃದ್ಧಿಗೆ ಅವಕಾಶ ನೀಡಬೇಕು ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. 

ಈ ವೇಳೆ ವಿಧಾನಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್ ನಟರಾಜ್, ತಾ.ಪಂ ಸದಸ್ಯ ಪ್ರಕಾಶ್ ಹಾಗೂ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು