ಗುರುವಾರ , ಆಗಸ್ಟ್ 5, 2021
28 °C
ಹೆದ್ದಾರಿಯಲ್ಲಿ ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

ಚನ್ನಪಟ್ಟಣ: ಅವೈಜ್ಞಾನಿಕ ಸೇತುವೆ ಕಾಮಗಾರಿ ನಿಲ್ಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನ ಶೆಟ್ಟಿಹಳ್ಳಿ ಹಾಗೂ ಮತ್ತೀಕೆರೆ ಮಧ್ಯದಲ್ಲಿ ಹಾದು ಹೋಗುವ ಬೆಂಗಳೂರು –ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಳಸೇತುವೆ (ಅಂಡರ್ ಪಾಸ್) ನಿರ್ಮಿಸುವಂತೆ ಒತ್ತಾಯಿಸಿ ಎರಡು ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

ಈ ಎರಡು ಗ್ರಾಮಗಳು ಹೆದ್ದಾರಿ ಅಕ್ಕಪಕ್ಕದಲ್ಲೇ ಇದ್ದು, ಭಾವನಾತ್ಮಕ ಸಂಬಂಧ ಹೊಂದಿವೆ. ಈ ಗ್ರಾಮಗಳ ಮಧ್ಯೆ ಕೆಳಸೇತುವೆ ನಿರ್ಮಾಣ ಮಾಡುವ ಬದಲಾಗಿ ಗ್ರಾಮದಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರದಲ್ಲಿ ಅಂಡರ್ ಪಾಸ್ ಸೇತುವೆ ಮಾಡಲಾಗುತ್ತಿದೆ. ಇದು ಅವೈಜ್ಞಾನಿಕವಾಗಿದ್ದು, ಇದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಅವೈಜ್ಞಾನಿಕ ಸೇತುವೆ ನಿರ್ಮಾಣ ಮಾಡುವುದರಿಂದ ಶೆಟ್ಟಿಹಳ್ಳಿಯಲ್ಲಿ ಇರುವ ಆದರ್ಶ ಶಾಲೆ, ಕುವೆಂಪು ಪ್ರಾಥಮಿಕ ಪಾಠ ಶಾಲೆ, ಸಾರ್ವಜನಿಕ ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಶಾಲಾ ಕಾಲೇಜಿಗೆ ಹೋಗಿ ಬರಲು ಸುಮಾರು ಅರ್ಧ ಕಿಲೋ ಮೀಟರ್ ದೂರದವರೆಗೆ ಹೋಗಿ ಸುತ್ತಿಕೊಂಡು ಬರಬೇಕಾಗಿದೆ. ಹಾಗೆಯೇ ಮತ್ತೀಕೆರೆಯಲ್ಲಿ ಗ್ರಾಮ ಪಂಚಾಯಿತಿ ಇರುವುದರಿಂದ ಮತ್ತೀಕೆರೆ, ಶೆಟ್ಟಿಹಳ್ಳಿ, ಸಂಕಲಗೆರೆ, ವಳಗೆರೆದೊಡ್ಡಿ, ಹೊಸೂರುದೊಡ್ಡಿ, ದೇವರಹಳ್ಳಿ ಗ್ರಾಮದ ನಾಗರಿಕರು ಪ್ರತಿದಿನ ತಮ್ಮ ಕೆಲಸ ಕಾರ್ಯನಿಮಿತ್ತ ಪಂಚಾಯಿತಿಗೆ ಬರಬೇಕಾಗಿದ್ದು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು. 

ಮತ್ತೀಕೆರೆ ಗ್ರಾಮದಲ್ಲಿ ವ್ಯವಸಾಯ ಸೇವಾ ಸಹಕಾರಿ ಪತ್ತಿನ ಸಂಘ ಕೂಡ ಇದೆ. ಸುಮಾರು 15 ಗ್ರಾಮಕ್ಕೆ ಸೇರುವುದರಿಂದ ಈ ಗ್ರಾಮದ ನಾಗರಿಕರಿಗೂ ಬಹಳಷ್ಟು ತೊಂದರೆ ಎದುರಾಗಲಿದೆ. ಶೆಟ್ಟಿಹಳ್ಳಿಯಲ್ಲಿ ಹಾಲಿನ ಡೇರಿ ಇದ್ದು, ಬೆಳಿಗ್ಗೆ, ಸಂಜೆ ಹಾಲು ಹಾಕಲು, ಖರೀದಿಸಲು ಗ್ರಾಮಸ್ಥರು ಅರ್ಧ ಕಿ.ಮೀ. ಸುತ್ತಿಕೊಂಡು ಬರಬೇಕಾಗುತ್ತದೆ. ಇದೆಲ್ಲವನ್ನು ಹೆದ್ದಾರಿ ಪ್ರಾಧಿಕಾರ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪ್ರತಿಭಟನಾಕಾರರು ವಿವರಿಸಿದರು.

ಈ ಸಮಸ್ಯೆ ಬಗ್ಗೆ ಈಗಾಗಲೇ ಶಾಸಕ ಎಚ್. ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಲಾಗಿದೆ. ಹೊಸ ಸೇತುವೆ ಕಾಮಗಾರಿ ನಿರ್ಮಾಣ ನಿಲ್ಲಿಸಬೇಕು. ಎರಡು ಗ್ರಾಮಗಳ ಮಧ್ಯೆಯೇ ಕೆಳಸೇತುವೆ ನಿರ್ಮಾಣ ಮಾಡಬೇಕು. ಸಂಬಂಧಿಸಿದ ಸಚಿವರು, ಅಧಿಕಾರಿಗಳು ಈ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಹೆದ್ದಾರಿ ಕಾಮಗಾರಿ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.

ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮೇಹರೀಶ್, ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯ ಎಸ್.ಸಿ.ವಿಜೇಂದ್ರ, ತಾಲ್ಲೂಕು ಕಸಾಪ ಅಧ್ಯಕ್ಷ ಮತ್ತೀಕೆರೆ ಚಲುವರಾಜ್, ಕಾರ್ಯದರ್ಶಿ ಮಂಜೇಶ್ ಬಾಬು, ಮುಖಂಡರಾದ ಎಂ.ಕೆ.ಜಯರಾಜ್, ಭೀಮೇಶ್, ಧರ್ಮನಂದನ್, ಶ್ರೀನಿವಾಸ್, ಉಮೇಶ್, ವಕೀಲ ಮನು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು