‘ಚುನಾವಣಾ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ’

ಗುರುವಾರ , ಮಾರ್ಚ್ 21, 2019
27 °C

‘ಚುನಾವಣಾ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ’

Published:
Updated:
Prajavani

ಚನ್ನಪಟ್ಟಣ: ಚುನಾವಣೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಎಚ್.ಸಿ.ಉಳ್ಳಾಲ್ ಕರೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕೇಂದ್ರ ಚುನಾವಣಾ ಆಯೋಗದ ನೀತಿ ಸಂಹಿತೆ ಕಾರ್ಯಕ್ರಮದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ‘ಚುನಾವಣಾ ಕರ್ತವ್ಯದಲ್ಲಿ ನಿರತರಾಗುವ ಅಧಿಕಾರಿಗಳು ಚುನಾವಣೆಯ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದರು.

‘ಚುನಾವಣೆಯ ದಿನಾಂಕ ನಿಗದಿಯಾಗುತ್ತಿದ್ದಂತೆ ನೀತಿಸಂಹಿತೆ ಜಾರಿಗೆ ಬಂದಿದೆ. ಅದರ ಉಲ್ಲಂಘನೆ ಆಗದಂತೆ ನಿಗಾ ವಹಿಸಲು ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ತಲಾ ಎಂಟು ತಂಡಗಳನ್ನು ರಚನೆ ಮಾಡಲಾಗಿದೆ. ಚುನಾವಣೆಯ ಫಲಿತಾಂಶ ಬರುವರೆಗೂ ದಿನದ 24 ಗಂಟೆಗಳು ಈ ತಂಡ ಕಾರ್ಯೋನ್ಮುಖವಾಗಿರಬೇಕು. ಪ್ರತಿದಿನದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಜಾಗ್ರತೆ ವಹಿಸಬೇಕು’ ಎಂದರು.

ತಹಶೀಲ್ದಾರ್ ಶಿವಕುಮಾರ್ ಮಾತನಾಡಿ, ಚುನಾವಣೆ ವಿಚಾರದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಮೃದು ಧೋರಣೆ ತೋರದೆ ಕಟ್ಟುನಿಟ್ಟಾಗಿರಬೇಕು. ಯಾವುದೇ ಲೋಪಗಳು ಕಂಡುಬಂದಾಗ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ಸಂಹಿತೆ ಉಲ್ಲಂಘನೆಯಾದರೆ ತಕ್ಷಣ ಕ್ರಮಕ್ಕೆ ಮುಂದಾಗಬೇಕು ಎಂದರು.

ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ರಾಮಕೃಷ್ಣ ಮಾತನಾಡಿ, ಚುನಾವಣೆಯಲ್ಲಿ ನೀತಿಸಂಹಿತೆ ಕಠಿಣವಾಗಿದ್ದು, ಕರ್ತವ್ಯ ನಿರ್ವಹಿಸುವ ಅಧಿಕಾರಿ ವರ್ಗ ಜಾಗ್ರತೆ ವಹಿಸಬೇಕು. ಸದಾ ಚಟುವಟಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು, ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಕಾರ್ಯದರ್ಶಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !