ಮಾಗಡಿ: ‘ಶಿಕ್ಷಕರು ಮಕ್ಕಳಲ್ಲಿರುವ ಅಂಧಕಾರ ಹೋಗಲಾಡಿಸಿ ಸುಜ್ಞಾನದ ಬೆಳಕು ನೀಡುವ ಸೂರ್ಯ ರಶ್ಮಿ ಇದ್ದಂತೆ’ ಎಂದು ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಮಹಂತೇಶ್ ತಿಳಿಸಿದರು.
ಟಿವಿಎಸ್ ಶೋ ರೂಂ ಸಭಾಂಗಣದಲ್ಲಿ ಶನಿವಾರ ರೋಟರಿ ಮಾಗಡಿ ಸೆಂಟ್ರಲ್ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕ, ಶಿಕ್ಷಕಿಯರಿಗೆ ರಾಷ್ಟ್ರ ನಿರ್ಮಾಣ ಪ್ರಶಸ್ತಿ ನೀಡಿ ಅವರು ಮಾತನಾಡಿದರು.
ಯೋಧರು, ರೈತ ಮತ್ತು ಶಿಕ್ಷಕರು ದೇಶದ ಬೆನ್ನೆಲುಬು. ಶಿಕ್ಷಕರು ಭಾವಿ ಪ್ರಜೆಗಳ ವ್ಯಕ್ತಿತ್ವವನ್ನು ತಿದ್ದಿ ತೀಡಿ ಬುದ್ಧಿ ಹೇಳಿ ಮಾನವೀಯ ಮೌಲ್ಯ ಬೆಳೆಸುವ ಉದಾರಚರಿತರಾಗಬೇಕು. ಶಿಕ್ಷಕರು ಪ್ರಸ್ತುತ ದಿನಮಾನಗಳ ಆಗುಹೋಗುಗಳಿಗೆ ಸ್ಪಂದಿಸುತ್ತಾ ಅಧ್ಯಾಪನ ವೃತ್ತಿ ನಿರ್ವಹಿಸಬೇಕು. ಸನ್ನಡತೆ, ಸಚ್ಚಾರಿತ್ರ್ಯ ಜ್ಞಾನಕ್ಕಿಂತಲೂ ಮಿಗಿಲಾದುದು ಎಂಬುದನ್ನು ಮಕ್ಕಳಲ್ಲಿ ಬಿತ್ತಿ ಬೆಳೆಸುವ ರೂವಾರಿಗಳಾಗಬೇಕು ಎಂದರು.
ರೋಟರಿ ಬೆಂಗಳೂರು ಹೈಗ್ರೌಂಡ್ಸ್ ಅಧ್ಯಕ್ಷ ಡಾ.ಪ್ರಕಾಶ್ ಕುಮಾರ್ ಎಂ. ಮಾತನಾಡಿ, ಬೋಧನೆ ಮತ್ತು ಕಲಿಕೆ ಎಂದರೆ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವೆ ಒಂದು ಅಂತರ್ಜನಿತ ವಿದ್ಯಮಾನ. ಮಕ್ಕಳ ಮನೋಭೂಮಿಕೆ ಅರಿತು ಪ್ರಶ್ನಿಸುವ ಮೂಲಕ ವೈಜ್ಞಾನಿಕ ಶಿಕ್ಷಣ ನೀಡಿ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಉತ್ತಮ ಪ್ರಜೆಗಳನ್ನು ರೂಪಿಸಲು ಅರ್ಪಣೆಯಿಂದ ದುಡಿಯಬೇಕು ಎಂದು ಸಲಹೆ ನೀಡಿದರು.
ರೋಟರಿ ಮಾಗಡಿ ಸೆಂಟ್ರಲ್ ಕಾರ್ಯದರ್ಶಿ ಪ್ರಭಾಕರ್ ಎಲ್. ಮಾತನಾಡಿ, ಶಿಕ್ಷಕರು ಪಾಠವನ್ನಷ್ಟೇ ಮಾಡುವುದಿಲ್ಲ. ಗುರುವಾಗಿ ಮುನ್ನಡೆಸುತ್ತಾರೆ. ಮನುಷ್ಯನ ಬದುಕಿನಲ್ಲಿ ಅರಿವಿನ ಮೊದಲ ಕಿಡಿಯನ್ನು ಹಚ್ಚಿ ಮುನ್ನಡೆಸುವ ಮಹಾನುಭಾವರೇ ನಿಜವಾದ ಶಿಕ್ಷಕರು ಎಂದು ಬಣ್ಣಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ಯತಿಕುಮಾರ್ ಮಾತನಾಡಿ, ಶಿಕ್ಷಕ ಎಂದರೆ ಬಹುವ್ಯಾಪಿ. ಇದನ್ನು ನಿರ್ದಿಷ್ಟ ಚೌಕಟ್ಟಿಗೆ ಒಳಪಡಿಸದೆ ಚೌಕಟ್ಟನ್ನು ಮೀರಿ ಚಿಂತಿಸಬೇಕಾಗುತ್ತದೆ. ಶಿಕ್ಷಕರು ರಾಜಕೀಯದಿಂದ ದೂರ ಉಳಿಯಬೇಕು. ಅಧ್ಯಯನ, ಚರ್ಚೆ, ಬರಹ, ಕ್ರೀಡೆ, ಉಪನ್ಯಾಸದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮಕ್ಕಳನ್ನು ಆಧುನಿಕ ಜಗತ್ತಿನ ಸವ್ಯಸಾಚಿಗಳನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ದೊಡ್ಡಸೋಮನಹಳ್ಳಿ ಸರ್ಕಾರಿ ಹಿರಿಯ ಶಾಲೆ ಶಿಕ್ಷಕ ರಘು ಜಿ.ಎನ್., ಬೆಂಗಳೂರಿನ ರೋಟರಿ ಬೆನೆವೆಲೆಂಟ್ಸ್ ಅಧ್ಯಕ್ಷ ಮಧುಕರ್ ಆರ್.ಎಚ್. ಮಾತನಾಡಿದರು.
ಶಿಕ್ಷಕರಾದ ಇಂದಿರಾಬಾಯಿ ವೈ., ರಂಗಶಾಮಯ್ಯ, ಬಸವರಾಜು ಎಚ್.ಆರ್., ಅನುರಾಧಾ, ಗಂಗಮ್ಮ, ಆಶಾ ಎಂ.ಆರ್., ರಘು ಜಿ.ಎನ್., ಲೋಕೇಶ್ ನಾಯಕ ಕೆ.ಎಸ್., ಜಿ. ಸಾಸಲು ತಿಮ್ಮಯ್ಯ, ಹನುಮಂತೇಗೌಡ ಎಲ್. ಅವರಿಗೆ ರಾಷ್ಟ್ರ ನಿರ್ಮಾಣ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ರೊಟೇರಿಯನ್‌ಗಳಾದ ಹಾರೋಹಳ್ಳಿ ಕುಮಾರ್, ಡಿ. ಶ್ರೀನಿವಾಸ್, ವೇಣುಗೋಪಾಲ್, ಯತೀಶ್, ಮಧುಗಿರಿ ಗೌಡ, ಲಕ್ಷ್ಮೀನಾರಾಯಣ, ಕುಮಾರ್ ಡಿ. ಅಂಗಡಿ ನಾಗರಾಜು, ಪುರುಷೋತ್ತಮ್, ರವಿಕಿರಣ್, ಗೋಪಿ, ಲೋಕೇಶ್ ಎಲ್., ದಕ್ಷಿಣಾಮೂರ್ತಿ, ಗಣೇಶ್, ಶಂಕರ್, ಲಕ್ಷ್ಮೀನಾರಾಯಣ, ಮನು, ಡಾ.ಲಕ್ಷ್ಮೀಕಾಂತ, ಮೋಹನ್, ರಂಗಪ್ರಕಾಶ್, ಸುಲ್ತಾನ ಬಾಬಾ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.