ರಾಮನಗರ: ತಾಲ್ಲೂಕಿನ ಹರಿಸಂದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಿರುವ ಶೌಚಾಲಯವನ್ನು ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿ ಲಕ್ಷ್ಮಿಶ್ರೀ ಎಸ್. ಉದ್ಘಾಟಿಸಿದರು. ಶತಮಾನದ ಶಾಲೆಯಲ್ಲಿ ಗುರುವಾರ ನಡೆದ ಪ್ರತಿಭಾ ಪುರಸ್ಕಾರ ವಿತರಣೆ ಮತ್ತು ಶೌಚಾಲಯ ಉದ್ಘಾಟನೆ ಇಂತಹದ್ದೊಂದು ವಿಶೇಷತೆಗೆ ಸಾಕ್ಷಿಯಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ‘ಶಾಲೆಗೆ ಹೆಮ್ಮೆ ತಂದ ವಿದ್ಯಾರ್ಥಿನಿ ಶೌಚಾಲಯ ಉದ್ಘಾಟಿಸಿದ್ದು ನಮಗೆಲ್ಲರಿಗೂ ಸಂತಸ ತಂದಿದೆ. ಶೌಚಾಲಯ ಸಮಸ್ಯೆಯನ್ನು ವಿದ್ಯಾರ್ಥಿಗಳು ಗಮನ ತಂದಾಗ, ಪಂಚಾಯಿತಿ ಸದಸ್ಯರ ಸಹಕಾರದಿಂದ ನರೇಗಾದಡಿ ₹5.19 ಲಕ್ಷ ಮತ್ತು ಶಿಕ್ಷಣ ಇಲಾಖೆಯ ₹3.41 ಲಕ್ಷ ಅನುದಾನದಲ್ಲಿ ಶೌಚಾಲಯ ನಿರ್ಮಿಸಲಾಯಿತು’ ಎಂದರು.
‘ಶತಮಾನದ ಶಾಲೆಯು ಸಾವಿರಾರು ಮಂದಿಗೆ ವಿದ್ಯೆ ಕೊಟ್ಟಿದೆ. ಪ್ರತಿ ವರ್ಷ ಶಾಲೆಯಲ್ಲಿ ಮಕ್ಕಳು ಅತಿ ಹೆಚ್ಚು ಅಂಕ ಪಡೆದು ಕೀರ್ತಿ ತರುತ್ತಿದ್ದಾರೆ. ಅಕ್ಕಪಕ್ಕದ ಹಳ್ಳಿಗಳ ಮಕ್ಕಳಿಗೆ ಶಾಲೆ ಆಸರೆಯಾಗಿದೆ. ಪಂಚಾಯಿತಿ ವ್ಯಾಪ್ತಿಯ ಹರಿಸಂದ್ರ ಪಾದರಹಳ್ಳಿ, ತಿಬ್ಬೇಗೌಡನದೊಡ್ಡಿ ಮೂರು ಪ್ರೌಢಶಾಲೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ₹10 ಸಾವಿರ ನೀಡಿ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ಸಾವಿತ್ರಿ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮೂಲಸೌಕರ್ಯ ಅತಿ ಮುಖ್ಯ. ಶಾಲೆಯಲ್ಲಿ ಶೌಚಾಲಯ ಸಮಸ್ಯೆ ಬಗ್ಗೆ ಪಂಚಾಯಿತಿಗೆ ಪತ್ರ ಬರೆದಾಗ ಅಧ್ಯಕ್ಷರು ತಕ್ಷಣ ಸ್ಪಂದಿಸಿ, ಮಾದರಿಯಾದ ಶೌಚಾಲಯವನ್ನು ನಿರ್ಮಿಸಿ ಕೊಟ್ಟಿದ್ದಾರೆ’ ಎಂದು ತಿಳಿಸಿದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್, ಸಹ ಶಿಕ್ಷಕರಾದ ಗೋಪಾಲ್, ಗೀತಾಹೆಗ್ಡೆ, ಪ್ರದೀಪ್, ಶಂಕುಂತಲಾ, ಪೂರ್ಣಿಮಾ ಎನ್.ನಾಯ್ಕ್, ಭಾರತಿ, ಪ್ರಾಥಮಿಕ ಶಾಲಾ ಶಿಕ್ಷಕಿ ನಂದಿನಿ, ಹಿರಿಯ ವಿದ್ಯಾರ್ಥಿನಿ ಮಮತಾ, ಮುಖಂಡರಾದ ವೆಂಕಟೇಶ್, ಯೋಗಾನಂದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.