ಶುಕ್ರವಾರ, ಆಗಸ್ಟ್ 23, 2019
22 °C
ಕೆಂದ್ರ, ರಾಜ್ಯ ಸರ್ಕಾರಗಳ ಸಹಭಾಗಿತ್ವ; ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಅಭಿವೃದ್ಧಿಗೆ ಒತ್ತು

300 ಶಾಲೆಗಳಲ್ಲಿ ‘ಸ್ಟೂಡೆಂಟ್ ಪೊಲೀಸ್’ ಯೋಜನೆ

Published:
Updated:
Prajavani

ಚನ್ನಪಟ್ಟಣ: ‘ವಿದ್ಯಾರ್ಥಿ ದೆಸೆಯಿಂದಲೆ ಮಕ್ಕಳನ್ನು ಪ್ರಜ್ಞಾವಂತ ಪ್ರಜೆಗಳನ್ನಾಗಿ ರೂಪಿಸುವ ದೃಷ್ಟಿಯಿಂದ, ಶಾಲೆಗಳಲ್ಲಿ ‘ಸ್ಟೂಡೆಂಟ್ ಪೊಲೀಸ್’ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ’ ಎಂದು ಪೊಲೀಸ್ ಕಮಾಂಡೆಂಟ್ ಕುಲದೀಪ್ ಕುಮಾರ್ ಆರ್.ಜೈನ್ ತಿಳಿಸಿದರು.

ತಾಲ್ಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾಡಳಿತ ಮತ್ತು 9ನೇ ಪಡೆ ಕೆಎಸ್‌ಆರ್‌ಪಿ ಸಹಯೋಗದೊಂದಿಗೆ ಶನಿವಾರ ನಡೆದ ‘ಸ್ಟೂಡೆಂಟ್ ಪೊಲೀಸ್’ ಕೆಡೆಟ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳಲ್ಲಿ ನವ ಸಮಾಜ ಸುಧಾರಣೆಗಾಗಿ ನಾಯಕತ್ವ, ಕಾನೂನು, ಸ್ವಯಂ ಶಿಸ್ತು, ಧೈರ್ಯ, ಪರಾನುಭೂತಿ, ನೈತಿಕತೆ, ಮೌಲ್ಯಗಳನ್ನು ವೃದ್ಧಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಂದ ಆಯ್ದ 300 ಶಾಲೆಗಳಲ್ಲಿ, ಶನಿವಾರದಿಂದ ‘ಸ್ಟೂಡೆಂಟ್ ಪೊಲೀಸ್’ ಯೋಜನೆ ಜಾರಿಗೆ ತರಲಾಗಿದೆ. ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 20 ಶಾಲೆಗಳ ಮಕ್ಕಳಿಗೆ ಯಶಸ್ವಿ ತರಬೇತಿ ನೀಡಲು ಬೋಧಕ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ರೂಪುಗೊಂಡ ಕಾರ್ಯಕ್ರಮವಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಪೊಲೀಸ್ ಇಲಾಖೆ ಕಾರ್ಯಗತವಾಗಿದೆ. ಇದರ ಸದುಪಯೋಗವನ್ನು ಸಮಾಜದ ಮುಂದಿನ ಪೀಳಿಗೆ ಪಡೆದುಕೊಳ್ಳಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳ ಮುಂದಿನ ಶಿಕ್ಷಣ ಹಾಗೂ ವೃತ್ತಿ ಜೀವನಕ್ಕೆ ಪ್ರಯೋಜನವಾಗುವ ಅನೇಕ ವಿಷಯಗಳನ್ನು ಈ ಯೋಜನೆಯಡಿಯಲ್ಲಿ ಬೋಧಿಸಲಾಗುವುದು. ಪ್ರೌಢಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳ ದೈಹಿಕ ಸದೃಢತೆ, ಮಾನಸಿಕ ಅಭಿವೃದ್ಧಿ ಬೆಳೆಸುವುದು ಈ ಯೋಜನೆಯ ಮುಖ್ಯ ಉದ್ದೇಶ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಚನ್ನಪಟ್ಟಣ ಡಿವೈಎಸ್‌ಪಿ ಮಲ್ಲೇಶ್, ಸಹಾಯಕ ನೋಡಲ್ ಅಧಿಕಾರಿ ನವೀನ್ ಕುಮಾರ್, ಆದರ್ಶ ವಿದ್ಯಾಲಯದ ಪ್ರಾಂಶುಪಾಲರಾದ ಶಶಿಕಲಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Post Comments (+)