ಮಂಗಳವಾರ, ನವೆಂಬರ್ 24, 2020
19 °C
ಕೋವಿಡ್ ಪರೀಕ್ಷೆಗೆ ಹಿಂದೇಟು; ಪೋಷಕರಲ್ಲಿ ದೂರವಾಗದ ಆತಂಕ

ರಾಮನಗರ: ಕಾಲೇಜಿನತ್ತ ಮುಖ ಮಾಡದ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ರಾಮನಗರ: ಪದವಿ ಕಾಲೇಜುಗಳು ಆರಂಭವಾಗಿ ಮೂರು ದಿನ ಕಳೆದಿದ್ದರೂ ಇನ್ನೂ ವಿದ್ಯಾರ್ಥಿಗಳು ಇತ್ತ ಮುಖ ಮಾಡಿಲ್ಲ.

ಕೋವಿಡ್‌ ಹಿನ್ನೆಲೆಯಲ್ಲಿ ಎಂಟು ತಿಂಗಳ ಕಾಲ ಬಂದ್ ಆಗಿದ್ದ ಕಾಲೇಜುಗಳು ಇದೇ ತಿಂಗಳ 17ರಿಂದ ಬಾಗಿಲು ತೆರೆದಿದ್ದವು. ಮೊದಲ ದಿನದಿಂದಲೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ವಿದ್ಯಾರ್ಥಿ ಪೋಷಕರ ಲೆಕ್ಕಾಚಾರವೇ ಬೇರೆ ಆದಂತೆ ಇದೆ. ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬುಧವಾರ ವಾಣಿಜ್ಯ ವಿಭಾಗದಲ್ಲಿ ಇಬ್ಬರು ಹಾಗೂ ಗುರುವಾರ ಕಲಾ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ಮಾತ್ರವೇ ಪ್ರವೇಶ ಪಡೆದಿದ್ದಾರೆ.

ವಿಳಂಬ ಏಕೆ?: ಪ್ರತಿ ವಿದ್ಯಾರ್ಥಿಯು ಕಾಲೇಜಿಗೆ ಬರುವ ಮುನ್ನ ಕೋವಿಡ್‌ ಪರೀಕ್ಷೆ ಪ್ರಮಾಣಪತ್ರ ತರುವುದನ್ನು ಕಡ್ಡಾಯ ಮಾಡಲಾಗಿದೆ. ವರದಿ ನೆಗೆಟಿವ್‌ ಎಂದು ಖಾತ್ರಿಯಾದ ಮೇಲಷ್ಟೇ ಒಳಗೆ ಪ್ರವೇಶ ಸಿಗುತ್ತಿದೆ. ಸಾಕಷ್ಟು ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕತೊಡಗಿದ್ದಾರೆ. ಬಹುತೇಕ ಪೋಷಕರು ಈ ವಿಚಾರದಲ್ಲಿ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದು, ಪರಿಸ್ಥಿತಿ ನೋಡಿಕೊಂಡು ಮಕ್ಕಳನ್ನು ಕಾಲೇಜಿಗೆ ಕಳುಹಿಸುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡಿಲ್ಲ.

"ನಮ್ಮಲ್ಲಿ ಸದ್ಯ 326 ವಿದ್ಯಾರ್ಥಿಗಳಿದ್ದು, ಇವರಲ್ಲಿ ಈವರೆಗೆ ದಿನವೊಂದಕ್ಕೆ ಕೇವಲ ಇಬ್ಬರು ವಿದ್ಯಾರ್ಥಿಗಳು ಮಾತ್ರ ಬರುತ್ತಿದ್ದಾರೆ. ಹೀಗೆ ಬಂದವರಿಗೇ ಪಾಠ ಮಾಡಲಾಗುತ್ತಿದೆ. ಆರ್‌ಟಿಪಿಸಿಆರ್‌ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದ್ದು, ಇದರೊಟ್ಟಿಗೆ ಪೋಷಕರ ಒಪ್ಪಿಗೆ ಪತ್ರವನ್ನೂ ತರುವಂತೆ ಸೂಚಿಸಿದ್ದೇವೆ. ವಿದ್ಯಾರ್ಥಿಗಳು ಕೋವಿಡ್‌ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯಲ್ಲಿ ತಡವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಣೆ ಆಗಬಹುದು' ಎನ್ನುತ್ತಾರೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಕಿಶೋರ್‍.

"ವಿದ್ಯಾರ್ಥಿಗಳ ಜೊತೆಗೆ ಕಾಲೇಜಿನ ಎಲ್ಲ ಸಿಬ್ಬಂದಿಗೂ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ. ಬಹುತೇಕರ ಫಲಿತಾಂಶ ಬಂದಿದ್ದು, ಎಲ್ಲವೂ ನೆಗೆಟಿವ್‌ ಆಗಿವೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿದ್ದು, ಇಲ್ಲಿನ ನಿತ್ಯದ ಬೆಳವಣಿಗೆಗಳ ಕುರಿತು ಇಲಾಖೆಯ ಅಧಿಕಾರಿಗಳಿಗೆ ಗಮನ ನೀಡುತ್ತಿದ್ದೇವೆ' ಎನ್ನುತ್ತಾರೆ ಅವರು.

ಆನ್‌ಲೈನ್‌ ತರಗತಿ ನಿರಂತರ

ಕಾಲೇಜುಗಳು ಆರಂಭ ಆಗಿದ್ದರೂ ಆನ್‌ಲೈನ್ ತರಗತಿಗಳು ಮುಂದುವರಿದಿವೆ. ಆನ್‌ಲೈನ್-ಇಲ್ಲವೇ ಆಫ್‌ಲೈನ್‌ ತರಗತಿಗಳ ಆಯ್ಕೆಯನ್ನು ವಿದ್ಯಾರ್ಥಿಗಳಿಗೇ ನೀಡಲಾಗಿದೆ. ಬಹುತೇಕರು ಇನ್ನೂ ಆನ್‌ಲೈನ್‌ ಪಾಠಕ್ಕೆ ಗಮನ ನೀಡುತ್ತಿದ್ದಾರೆ. ಈ ತರಗತಿಗಳು ನಿರಂತರವಾಗಿ ನಡೆದಿವೆ ಎನ್ನುತ್ತಾರೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು.

* ‘ಕಾಲೇಜಿನ 326 ವಿದ್ಯಾರ್ಥಿಗಳ ಪೈಕಿ ಶುಕ್ರವಾರ ಇಬ್ಬರಷ್ಟೇ ಬಂದಿದ್ದರು. ಅವರಿಗೇ ತರಗತಿ ನಡೆಸಲಾಯಿತು'
–ಕಿಶೋರ್‌, ಪ್ರಾಚಾರ್ಯ, ಸ.ಪ್ರ.ದ.ಕಾಲೇಜು, ರಾಮನಗರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು