ಸುರೇಶ್‌ಗೆ ಕನಕಪುರದಲ್ಲಿ 1 ಲಕ್ಷ ಮತ ಮುನ್ನಡೆ!

ಬುಧವಾರ, ಜೂನ್ 19, 2019
26 °C
ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಗೆ ಒಲವು; ರಾಮನಗರದಲ್ಲಿ ಕಾಂಗ್ರೆಸ್ ಹವಾ

ಸುರೇಶ್‌ಗೆ ಕನಕಪುರದಲ್ಲಿ 1 ಲಕ್ಷ ಮತ ಮುನ್ನಡೆ!

Published:
Updated:

ಕ್ಷೇತ್ರವಾರು ಮತ ಗಳಿಕೆ

ವಿಧಾನಸಭಾ ಕ್ಷೇತ್ರ ಅಶ್ವತ್ಥನಾರಾಯಣ ಡಿ.ಕೆ. ಸುರೇಶ್
ಕುಣಿಗಲ್ 49,886 91,170
ರಾಜರಾಜೇಶ್ವರಿನಗರ 1,30,352 1,02,632
ಬೆಂಗಳೂರು ದಕ್ಷಿಣ 1,83,388 1,34,310
ಆನೇಕಲ್ 1,01,288 1,03,106
ಮಾಗಡಿ 65,161 1,01,157
ರಾಮನಗರ 46,328 1,06,489
ಕನಕಪುರ 32,924 1,40,490
ಚನ್ನಪಟ್ಟಣ 61,156 98,350

ರಾಮನಗರ: ಡಿ.ಕೆ. ಸುರೇಶ್‌ ತವರು ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 1.07,566 ಮತಗಳ ಮುನ್ನಡೆ ದೊರೆತಿದ್ದು, ಅದೇ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿದೆ.

ಕನಕಪುರ ವಿಧಾನಸಭಾ ಕ್ಷೇತ್ರವನ್ನು ಸುರೇಶ್‌ರ ಸಹೋದರ ಡಿ.ಕೆ. ಶಿವಕುಮಾರ್‌ ಪ್ರತಿನಿಧಿಸುತ್ತಾ ಬಂದಿದ್ದಾರೆ. ಕ್ಷೇತ್ರದ ಜನತೆ ಅಣ್ಣನಿಗೆ ಅಕ್ಕರೆ ತೋರಿದಂತೆ ತಮ್ಮನಿಗೂ ಬೆನ್ನು ತಟ್ಟಿದ್ದಾರೆ. ಕ್ಷೇತ್ರದಾದ್ಯಂತ ಸುರೇಶ್‌ ತಮ್ಮದೇ ಆದ ಕಾರ್ಯಕರ್ತರ ಪಡೆಯನ್ನು ಹೊಂದಿದ್ದು, ಅಷ್ಟೇ ಮಟ್ಟಿಗಿನ ಪ್ರಚಾರವನ್ನೂ ನಡೆಸಿದ್ದರು. ಸಂಘಟಿತ ಕಾರ್ಯತಂತ್ರಗಳು ಫಲ ನೀಡಿದ್ದು, ಕನಕಪುರವು ಕಾಂಗ್ರೆಸ್ ಭದ್ರಕೋಟೆಯಾಗಿಯೇ ಉಳಿದುಕೊಂಡಿದೆ.

ಋಣ ಸಂದಾಯ: ರಾಮನಗರ ಕ್ಷೇತ್ರದ ಜನತೆಯೂ ಕಾಂಗ್ರೆಸ್‌ಗೆ ಉತ್ತಮ ಮುನ್ನಡೆಯನ್ನೇ ನೀಡಿದ್ದಾರೆ. ಇಲ್ಲಿ ಸುರೇಶ್‌ ಬಿಜೆಪಿಗಿಂತ 60,161 ಅಧಿಕ ಮತಗಳನ್ನು ಪಡೆದಿದ್ದಾರೆ.

ಆರು ತಿಂಗಳ ಹಿಂದಷ್ಟೇ ನಡೆದ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ಇದರಲ್ಲಿ ಡಿ.ಕೆ. ಸುರೇಶ್‌ರ ಪರಿಶ್ರಮವೂ ಇತ್ತು. ಅದಕ್ಕೆ ಋಣ ಸಂದಾಯ ಎಂಬಂತೆ ಜೆಡಿಎಸ್ ಕಾರ್ಯಕರ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿದ್ದಾರೆ.

ಕಾಂಗ್ರೆಸ್ ಮುನ್ನಡೆ ಪಟ್ಟಿಯಲ್ಲಿ ಮೂರನೇ ಸ್ಥಾನ ತುಮಕೂರು ಜಿಲ್ಲೆಯ ಕುಣಿಗಲ್‌ ವಿಧಾನಸಭಾ ಕ್ಷೇತ್ರದ್ದು. ಇಲ್ಲಿ ಕಾಂಗ್ರೆಸ್ ಶಾಸಕರೇ ಇದ್ದು, ಬರೋಬ್ಬರಿ 49,886 ಮತಗಳ ಮುನ್ನಡೆ ಸಿಕ್ಕಿದೆ. ಸ್ಥಳೀಯ ಮುಖಂಡರೊಂದಿನ ಮಾತುಕತೆ, ಪ್ರಚಾರ ತಂತ್ರಗಳು ಫಲ ನೀಡಿವೆ.

ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 35,996 ಮತಗಳ ಮುನ್ನಡೆ ದೊರೆತಿದ್ದರೂ ಇದರಿಂದ ಕಾಂಗ್ರೆಸ್‌ಗೆ ಸಮಾಧಾನ ಆದಂತೆ ಇಲ್ಲ. ಇಲ್ಲಿ ಜೆಡಿಎಸ್ ಶಾಸಕರಿದ್ದು, ಎದುರಾಳಿಯಾಗಿ ಕಾಂಗ್ರೆಸ್‌ ಇತ್ತು. ಎರಡೂ ಒಗ್ಗೂಡಿದ ಪರಿಣಾಮವಾಗಿ ಉತ್ತಮ ಮುನ್ನಡೆ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇಲ್ಲಿ ಬಿಜೆಪಿ ಗಣನೀಯ ಪ್ರಮಾಣದಲ್ಲಿ ಮತದಾರರನ್ನು ತನ್ನತ್ತ ಸೆಳೆದಿದೆ.

ನಗರದಲ್ಲಿ ಬಿಜೆಪಿ ಅಚ್ಚುಮೆಚ್ಚು: ಬೆಂಗಳೂರು ನಗರ ವ್ಯಾಪ್ತಿಗೆ ಒಳಪಡುವ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ಹಾಗೂ ಆನೇಕಲ್‌ ಕ್ಷೇತ್ರಗಳ ಮೇಲೆ ಬಿಜೆಪಿ ಅಪಾರ ನಿರೀಕ್ಷೆ ಹೊಂದಿತ್ತು. ಮತದಾರರು ಈ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ.

ಅತಿ ಹೆಚ್ಚು ಮತದಾರರು ಇರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದು, ಅಲ್ಲಿ ಪಕ್ಷಕ್ಕೆ ಉತ್ತಮ ಮುನ್ನಡೆ ಸಿಕ್ಕಿದೆ. ಅಲ್ಲಿ ಕಾಂಗ್ರೆಸ್‌ಗಿಂತ 49,078 ಹೆಚ್ಚುವರಿ ಮತಗಳು ಬಿಜೆಪಿಗೆ ದೊರೆತಿವೆ. ಇದರಿಂದ ಕಮಲ ಪಾಳಯದ ಅಭ್ಯರ್ಥಿಯ ಸೋಲಿನ ಅಂತರ ತಗ್ಗಿದೆ.
ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಪಡೆದಿದೆ. ಇಲ್ಲಿ 27,720 ಮತಗಳ ಮುನ್ನಡೆ ದೊರೆತಿದೆ. ಇದರಿಂದಾಗಿ ಅಶ್ವಥ್‌ ನಾರಾಯಣರ ಮತಗಳಿಕೆ ಪ್ರಮಾಣ ಹಿಗ್ಗಿದೆ. ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಆನೇಕಲ್‌ ಕ್ಷೇತ್ರದಲ್ಲಿ ಸಮಬಲದ ಹೋರಾಟ ನಡೆದಿದ್ದು, ಸುರೇಶ್‌ಗೆ 1,818 ಮತಗಳ ಅಲ್ಪ ಮುನ್ನಡೆ ಸಿಕ್ಕಿದೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ಗೆ ಬಲ
ತೀವ್ರ ಮಾತಿನ ಸಮರಕ್ಕೆ ಸಾಕ್ಷಿಯಾಗಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸುರೇಶ್‌ ಭಾರಿ ಮುನ್ನಡೆ ಪಡೆದು ಅಚ್ಚರಿ ಮೂಡಿಸಿದ್ದಾರೆ.

ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌ ತವರಿನಲ್ಲಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾಗಿ ಸೇರಿ ಸಾಕಷ್ಟು ಕಸರತ್ತು ನಡೆಸಿದ್ದವು. ಇಲ್ಲಿ ಕೈ ಪಾಳಯಕ್ಕೆ 37,194 ಮತಗಳ ಮುನ್ನಡೆಯೇ ದೊರೆತಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !