ಗುರುವಾರ , ಜೂನ್ 24, 2021
30 °C
ಘನತ್ಯಾಜ್ಯ ವಿಲೇವಾರಿ ಕ್ರಮಕ್ಕೆ ಶ್ಲಾಘನೆ: ಪ್ರಧಾನಿ ಮೋದಿಯಿಂದ ಪ್ರಶಸ್ತಿ ವಿತರಣೆ

ರಾಮನಗರಕ್ಕೆ ‘ಸ್ವಚ್ಛ ಸರ್ವೇಕ್ಷಣೆ’ ಪ್ರಶಸ್ತಿ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಘನ ತ್ಯಾಜ್ಯವನ್ನು ಉತ್ತಮವಾಗಿ ವಿಲೇವಾರಿ ಮಾಡಿದ ಸಲುವಾಗಿ ರಾಮನಗರ ನಗರಸಭೆಯು ಕೇಂದ್ರ ಸರ್ಕಾರದ "ಸ್ವಚ್ಛ ಸರ್ವೇಕ್ಷಣೆ-2020’ ಪ್ರಶಸ್ತಿಗೆ ಪಾತ್ರವಾಗಿದೆ. ಈ ಸಾಲಿನಲ್ಲಿ ಈ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ನಗರಸಭೆ ಎನ್ನುವ ಹಿರಿಮೆ ರಾಮನಗರದ್ದು.

ಸ್ವಚ್ಛ ಪರಿಸರ ನಿರ್ಮಾಣವನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರವು ಪ್ರತಿ ವರ್ಷ "ಸ್ವಚ್ಛ ಸರ್ವೇಕ್ಷಣೆ’ ಎಂಬ ಸಮೀಕ್ಷೆಯನ್ನು ದೇಶದಾದ್ಯಂತ ಪ್ರತಿ ಪಟ್ಟಣ ಪ್ರದೇಶಗಳಲ್ಲಿ ನಡೆಸುತ್ತಾ ಬಂದಿದೆ. ಕೇಂದ್ರದ ಅಧಿಕಾರಿಗಳ ತಂಡವು ಪ್ರತಿ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ಕೊಟ್ಟು ಅಲ್ಲಿನ ಕಸ ವಿಲೇವಾರಿ ವಿಧಾನಗಳ ಮೌಲ್ಯಮಾಪನ ಮಾಡುತ್ತದೆ. ಜೊತೆಗೆ ಸಾರ್ವಜನಿಕರ ಅಭಿಪ್ರಾಯಗಳನ್ನೂ ಕ್ರೂಢೀಕರಿಸಲಾಗುತ್ತದೆ. ಎಲ್ಲವನ್ನೂ ಸೇರಿಸಿ ಅಂಕಗಳ ಆಧಾರದ ಮೇಲೆ ಪ್ರತಿ ವರ್ಷ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಈ ಸಾಲಿನಲ್ಲಿ ರಾಜ್ಯದ ಒಟ್ಟು 11 ನಗರ ಸ್ಥಳೀಯ ಸಂಸ್ಥೆಗಳು ಈ ಗೌರವಕ್ಕೆ ಪಾತ್ರವಾಗಿದೆ.

"ನಗರಸಭೆ ವ್ಯಾಪ್ತಿಯಲ್ಲಿ ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಆದ್ಯತೆ ನೀಡಲಾಗಿದ್ದು, ಮನೆ ಮನೆಯಿಂದ ಕಸ ಸಂಗ್ರಹ ಕಾರ್ಯ ನಿರಂತರವಾಗಿ ನಡೆದಿದೆ. ಹೀಗೆ ಸಂಗ್ರಹಿಸಲಾದ ಕಸವನ್ನು ವಿಂಗಡಿಸಿ ಸೂಕ್ತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದೆಲ್ಲವನ್ನೂ ಗಮನಿಸಿ ಸರ್ಕಾರವು ರಾಮನಗರವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ’ ಎನ್ನುತ್ತಾರೆ ಇಲ್ಲಿನ ನಗರಸಭೆ ಆಯುಕ್ತೆ ಶುಭಾ.

"ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡುಗಳಿಂದ ನಿತ್ಯ 40ರಿಂದ 45 ಟನ್‌ನಷ್ಟು ಕಸ ಸಂಗ್ರಹಿಸಲಾಗುತ್ತಿದೆ. ಜೊತೆಗೆ ವಾಣಿಜ್ಯ ಪ್ರದೇಶಗಳಲ್ಲಿ ಸಂಜೆ ಹೊತ್ತಿನಲ್ಲೂ ಕಸ ಸಂಗ್ರಹ ನಡೆದಿದೆ. ಈ ಪೈಕಿ ವಾರ್ಡ್‌ ವ್ಯಾಪ್ತಿಯಲ್ಲೇ ನಾಲ್ಕು ಕಸ ವಿಲೇವಾರಿ ಘಟಕಗಳನ್ನು ಮಾಡಲಾಗಿದ್ದು, ಇವುಗಳಲ್ಲಿ ಹಸಿ ಕಸವನ್ನು ಗೊಬ್ಬರವನ್ನಾಗಿ ಮಾರ್ಪಡಿಸುವ ಕೆಲಸ ನಡೆದಿದೆ. ಒಂದನೇ ವಾರ್ಡಿನ ದೇವರಸೇಗೌಡನ ದೊಡ್ಡಿಯಲ್ಲಿ ಮೀಥೆನ್‌ ಘಟಕದ ಮೂಲಕ ಹಸಿ ಕಸದಿಂದ ವಿದ್ಯುತ್‌ ಉತ್ಪಾದನೆ ಸಹ ಸಾಧ್ಯವಾಗಿದೆ. ಈ ಎಲ್ಲ ಅಂಶಗಳನ್ನು ಕೇಂದ್ರದ ತಂಡವು ಪರಿಗಣಿಸಿದೆ’ ಎನ್ನುತ್ತಾರೆ ಅವರು. "ಈ ಸಾಲಿನಲ್ಲಿನ ಸಮೀಕ್ಷೆ ಸಂದರ್ಭ ಸಾರ್ವಜನಿಕ ಸಹಭಾಗಿತ್ವವು ಉತ್ತಮವಾಗಿತ್ತು. ಜಿಲ್ಲೆಯಲ್ಲಿ ನಮ್ಮ ನಗರಸಭೆಯಲ್ಲೇ ಅತಿ ಹೆಚ್ಚು ಸಾರ್ವಜನಿಕರು ಸಮೀಕ್ಷೆಯಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು’ ಎಂದು ಅವರು ಹೇಳುತ್ತಾರೆ.

ಪ್ಲಾಸ್ಟಿಕ್‌ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಅದನ್ನು ಸಂಸ್ಕರಿಸುವ ವ್ಯವಸ್ಥೆಯನ್ನೂ ನಗರಸಭೆ ಹೊಂದಿದೆ. ಸದ್ಯ ಇಂತಹ 10 ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಆಗಿದ್ದು, ಅದನ್ನು ಸಿಮೆಂಟ್ ಕಾರ್ಖಾನೆ ಒಂದಕ್ಕೆ ಮಾರಲು ಒಪ್ಪಂದವಾಗಿದೆ. ಸದ್ಯ ಕೋವಿಡ್‌ ಭೀತಿಯಿಂದಾಗಿ ಕಾರ್ಖಾನೆಯು ಈ ಕಸವನ್ನು ಒಯ್ಯಲು ಬಂದಿಲ್ಲ.

ಪೌರ ಕಾರ್ಮಿಕರ ಶ್ರಮ: ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿ ಪಡೆಯುವಲ್ಲಿ ಪೌರಕಾರ್ಮಿಕರ ಶ್ರಮವನ್ನು ಮರೆಯುವಂತೆ ಇಲ್ಲ. ನಗರಸಭೆಯಲ್ಲಿ 152 ಪೌರ ಕಾರ್ಮಿಕ ಹುದ್ದೆಗಳಿದ್ದು, ಇದರಲ್ಲಿ ಸದ್ಯ 130 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 20 ಹುದ್ದೆ ಖಾಲಿ ಇವೆ. ಒಟ್ಟು 28 ವಾಹನಗಳನ್ನು ಕಸದ ವಿಲೇವಾರಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ 15 ಹಳೆಯ ಆಟೊ ಟಿಪ್ಪರ್‌. 7 ಹೊಸ ಟಿಪ್ಪರ್‌. 2 ಜೆಸಿಬಿ ಹಾಗೂ 3 ದೊಡ್ಡ ಟಿಪ್ಪರ್‌ ಹಾಗೂ 1 ಮಿನಿ ಟಿಪ್ಪರ್‌ ಸೇರಿದೆ.

ಬಾಕ್ಸ್‌-1
ಪ್ರಶಸ್ತಿ ಪ್ರದಾನ ನಾಳೆ
ಸ್ವಚ್ಛ ಸರ್ವೇಕ್ಷಣೆ-2020 ಪ್ರಶಸ್ತಿಗೆ ಆಯ್ಕೆಯಾದ ನಗರ ಸ್ಥಳೀಯ ಸಂಸ್ಥೆಗಳಿಗೆ ಇದೇ 20ರಂದು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕೋವಿಡ್‌ ಕಾರಣಕ್ಕೆ ಈ ಬಾರಿ ಈ ಕಾರ್ಯಕ್ರಮವು ಆನ್‌ಲೈನ್‌ ಮೂಲಕವೇ ಪ್ರಸಾರ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಪ್ರಶಸ್ತಿಗಳನ್ನು ನೀಡಲಿದ್ದಾರೆ. ರಾಮನಗರ ನಗರಸಭೆ ಅಧಿಕಾರಿಗಳು ಜಿಲ್ಲೆಯಲ್ಲಿನ ಎನ್‌ಐಸಿ ಸ್ಟುಡಿಯೊ ಮೂಲಕ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ

ಒಳಚರಂಡಿಯದ್ದೇ ಚಿಂತೆ
ನಗರಸಭೆ ವ್ಯಾಪ್ತಿಯಲ್ಲಿ ಈವರೆಗೆ ಕೇವಲ ಶೇ 55ರಷ್ಟು ಪ್ರದೇಶ ಮಾತ್ರ ಒಳಚರಂಡಿ ವ್ಯವಸ್ಥೆ ಹೊಂದಿದ್ದು, ಉಳಿದ ಪ್ರದೇಶದಲ್ಲಿನ ಕೊಳಕು ನೀರು ನೇರವಾಗಿ ಅರ್ಕಾವತಿ ನದಿಗೆ ಹರಿಯುತ್ತಿದೆ. ದ್ರವ ತ್ಯಾಜ್ಯದ ನಿರ್ವಹಣೆಯೇ ನಗರಸಭೆಗೆ ಸವಾಲಾಗಿದೆ. ಒಟ್ಟು 4 ವೆಟ್‌ವೆಲ್‌ಗಳು ಇವೆ. ಇವುಗಳ ಸಂಪರ್ಕ ಅಲ್ಲಲ್ಲಿ ತುಂಡರಿಸಿದೆ. ಸದ್ಯ ರಾಮನಗರ ವ್ಯಾಪ್ತಿಯಲ್ಲಿ ನಿತ್ಯ 8 ಎಂಎಲ್‌ಡಿಯಷ್ಟು ನೀರು ಬಳಕೆ ಆಗುತ್ತಿದ್ದು, ಇದರಲ್ಲಿ 4 ಎಂಎಲ್‌ಡಿಯಷ್ಟು ನೀರನ್ನು ಜಿಲ್ಲಾಧಿಕಾರಿ ನಿವಾಸದ ಬಳಿ ಇರುವ ದ್ರವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಲಾಗುತ್ತಿದೆ. ಹೀಗೆ ಶುದ್ಧೀಕರಿಸಿದ ನೀರನ್ನು ಕೈಗಾರಿಕಾ ಉದ್ದೇಶಕ್ಕೆ ಸೇನಾಪತಿ ವೈಟ್ಲೆ ಕಾರ್ಖಾನೆಗೆ ಪೂರೈಸುವ ಒಪ್ಪಂದವೂ ಆಗಿದೆ.

ನಗರದಲ್ಲಿ ಒಳಚರಂಡಿ ವ್ಯವಸ್ಥೆ ಸುಧಾರಿಸುವಂತೆ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ಅದರಂತೆ ಸರ್ಕಾರ ಹೊಸ ಯೋಜನೆಯನ್ನು ರೂಪಿಸಬೇಕಿದೆ. ಅರ್ಕಾವತಿ ಶುದ್ಧೀಕರಣ ಹಾಗೂ ಒಳಚರಂಡಿ ವ್ಯವಸ್ಥೆ ಸುಧಾರಣೆ ಸಂಬಂಧ ₹200 ಕೋಟಿ ಮೊತ್ತದ ಯೋಜನೆಯು ಸರ್ಕಾರದ ಮುಂದೆ ಪ್ರಸ್ತಾವದ ಹಂತದಲ್ಲಿದೆ.

****
ಘನ ತ್ಯಾಜ್ಯ ವಿಲೇವಾರಿಯಲ್ಲಿನ ಸುಧಾರಣೆಗಾಗಿ ಸರ್ಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಎಲ್ಲರ ಶ್ರಮದಿಂದ ಇದು ಸಾಧ್ಯವಾಗಿದೆ

– ಶುಭಾ, ಆಯುಕ್ತೆ, ರಾಮನಗರ ನಗರಸಭೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು