ಶನಿವಾರ, ಸೆಪ್ಟೆಂಬರ್ 18, 2021
29 °C
ಹತ್ತು ವಾರ ಪೂರೈಸಿದ ಅಭಿಯಾನ; ಸಂಘ–ಸಂಸ್ಥೆಗಳು, ಸಾರ್ವಜನಿಕರ ಸಾಥ್

‘ಸ್ವಚ್ಛ ಶುಕ್ರವಾರ’: ಬದಲಾಯ್ತು ಸುತ್ತಲಿನ ಪರಿಸರ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಪರಿಸರ ಸ್ವಚ್ಛತೆಯ ಧ್ಯೇಯ ಹೊತ್ತು ಆರಂಭಗೊಂಡ ‘ಸ್ವಚ್ಛ ಶುಕ್ರವಾರ’ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈಗಾಗಲೇ ಹತ್ತು ವಾರ ಕಳೆದಿದ್ದು, ಇದರಿಂದಾಗಿ ಸುತ್ತಲಿನ ಪರಿಸರದಲ್ಲೂ ಬದಲಾವಣೆ ಕಾಣತೊಡಗಿದೆ.

ಪರಿಸರವನ್ನು ಸ್ವಚ್ಛವಾಗಿರಿಸುವ ಜೊತೆಗೆ ಜನರಲ್ಲಿ ಅದರ ಬಗೆಗಿನ ಅರಿವು ಮೂಡಿಸುವ ಸಲುವಾಗಿ ರಾಮನಗರ ತಾಲ್ಲೂಕು ಪಂಚಾಯಿತಿ ಕಳೆದ ನವೆಂಬರ್‌–ಡಿಸೆಂಬರ್‌ನಲ್ಲಿ ಈ ಅಭಿಯಾನ ಆರಂಭಿಸಿತು. ಮೊದಲಿಗೆ ತಾಲ್ಲೂಕಿನ ಎಲ್ಲ 20 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಅಧಿಕಾರಿಗಳು, ಸರ್ಕಾರಿ ಸಿಬ್ಬಂದಿ ಕೈಯಲ್ಲಿ ಪೊರಕೆ ಹಿಡಿದು ತಮ್ಮ ಕಚೇರಿಗಳಲ್ಲಿನ ಸ್ವಚ್ಛತೆಗೆ ನಿಂತರು. ನಂತರ ವಿದ್ಯಾರ್ಥಿಗಳು, ಸಾರ್ವಜನಿಕರ ಸಹಕಾರವೂ ದೊರೆಯಿತು. ಇದರಿಂದಾಗಿ ಊರಿನ ನೀರಿನ ಟ್ಯಾಂಕ್‌ಗಳು, ಅಂಗನವಾಡಿಗಳು, ಗ್ರಾ.ಪಂ. ಕಚೇರಿ, ಸರ್ಕಾರಿ ಶಾಲೆ ಅಂಗಳ, ವಿದ್ಯಾರ್ಥಿನಿಲಯ ಸರ್ಕಾರಿ ಆಸ್ಪತ್ರೆ.... ಹೀಗೆ ಪ್ರತಿ ಸರ್ಕಾರಿ ಆಸ್ತಿಯ ಆವರಣವೂ ಈ ಅಭಿಯಾನದಿಂದ ಸ್ವಚ್ಚವಾಗುತ್ತಿದೆ. ಊರ ಬೀದಿಗಳಲ್ಲಿನ ಕಸ ಕರಗಿದೆ. ದೇವಸ್ಥಾನದ ಅಂಗಳಗಳೂ ಈ ಅಭಿಯಾನದಿಂದ ಬದಲಾವಣೆ ಕಾಣುತ್ತಿವೆ.

ರಾಮನಗರ ತಾಲ್ಲೂಕು ಪಂಚಾಯಿತಿಯ ಈ ಕಾರ್ಯವನ್ನು ಮೆಚ್ಚಿದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇದನ್ನು ಇಡೀ ಜಿಲ್ಲೆಗೆ ವಿಸ್ತರಿಸಿ ಆದೇಶಿಸಿದ್ದರು. ಇದರಿಂದಾಗಿ ಅಭಿಯಾನದ ವ್ಯಾಪ್ತಿ ಹಿರಿದಾಗಿದೆ.
ವಿದ್ಯಾರ್ಥಿಗಳ ಸಾಥ್‌: ಜಿಲ್ಲೆಯ ನೂರಾರು ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಈವರೆಗೆ ಈ ಅಭಿಯಾನಕ್ಕೆ ಸಾಥ್‌ ನೀಡಿದ್ದಾರೆ. ವಿದ್ಯಾರ್ಥಿಗಳು ಶುಕ್ರವಾರ ಬಂತೆಂದರೆ ಒಂದಿಷ್ಟು ಹೊತ್ತು ಪಾಠದ ಜೊತೆಗೆ ಸ್ವಚ್ಛತೆಯಲ್ಲೂ ಪಾಲ್ಗೊಳ್ಳುವ ಮೂಲಕ ಪ್ರಾಯೋಗಿಕ ಜ್ಞಾನ ಗಳಿಸಿದ್ದಾರೆ. ತಮ್ಮೂರು, ಓಣಿಗಳ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಇದು ಈ ಅಭಿಯಾನದ ಸಿಕ್ಕ ಯಶಸ್ಸು ಎನ್ನುತ್ತಾರೆ ಯೋಜನೆಯ ರುವಾರಿಯಾದ ರಾಮನಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್‌ ನಟರಾಜು.

ಸ್ವಚ್ಛತೆಯನ್ನೂ ದಾಟಿ ಪರಿಸರ ಸ್ನೇಹಿ ಚಟುವಟಿಕೆಗಳತ್ತ ಅಭಿಯಾನ ಮುಂದುವರಿದಿದೆ. ಕಳೆದ ಮೂರು ವಾರಗಳ ಕಾಲ ಎಲ್ಲ ಆಸಕ್ತರು ನರೇಗಾ ಯೋಜನೆಯ ಅಡಿ ಬೀದಿ ಬದಿಯ, ಸರ್ಕಾರಿ ಜಮೀನುಗಳಲ್ಲಿ ನೆಟ್ಟಿದ್ದ ಸಸಿಗಳಿಗೆ ನೀರೆರೆದು ಪೋಷಿಸಿದ್ದಾರೆ. ಅಲ್ಲಿನ ಕಳೆ ತೆಗೆದು ಸಸಿಗಳನ್ನು ಆರೈಕೆ ಮಾಡಿದ್ದಾರೆ.

‘ಪ್ರತಿ ಶುಕ್ರವಾರ ಬಂತೆಂದರೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿನ ಸಿಬ್ಬಂದಿ ಕನಿಷ್ಠ ಅರ್ಧ ಗಂಟೆ ಶ್ರಮದಾನ ಮಾಡಿ ತಮ್ಮ ಕಚೇರಿಯನ್ನು ಸ್ವಚ್ಛಗೊಳಿಸಿಕೊಳ್ಳುತ್ತಿದ್ದಾರೆ. ಸರ್ಕಾರಿ ಶಾಲೆ, ಅಂಗನವಾಡಿಗಳಲ್ಲಿನ ಶೌಚಾಲಯಗಳು ಶುಚಿ ಆಗಿವೆ. ಊರು–ಕೇರಿಯಲ್ಲಿನ ಪ್ಲಾಸ್ಟಿಕ್‌ ತ್ಯಾಜ್ಯದ ಹೊರೆ ಕಡಿಮೆಯಾಗಿದೆ’ ಎಂದು ವಿವರಿಸುತ್ತಾರೆ ನಟರಾಜು.

ಅಭಿಯಾನವು ಜನರಲ್ಲಿ ಪರಿಸರದ ಬಗ್ಗೆ ಹಲವು ಬದಲಾವಣೆಗಳನ್ನು ತಂದಿದೆ. ಸದ್ಯ ಪ್ರತಿ ಶಾಲೆ, ವಿದ್ಯಾರ್ಥಿನಿಲಯದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಕಾಂಪೋಸ್ಟ್‌ ಗೊಬ್ಬರವಾಗಿ ಪರಿವರ್ತಿಸುವ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ರಾಮನಗರ ತಾಲ್ಲೂಕಿನ 9 ಗ್ರಾಮ ಪಂಚಾಯಿತಿಗಳು ಈಗಾಗಲೇ ತಮ್ಮಲ್ಲಿ ಘನ ತ್ಯಾಜ್ಯ ನಿರ್ವಹಣ ಘಟಕಗಳನ್ನು ತೆರೆದಿದ್ದು, ಇನ್ನೂ ಹಲವು ಕಡೆ ಆರಂಭಕ್ಕೆ ಸಿದ್ಧತೆ ನಡೆದಿದೆ.

‘ಇದೊಂದು ಯಾವುದೇ ಅನುದಾನವಿಲ್ಲದೇ, ಸ್ವ ಆಸಕ್ತಿಯಿಂದ ನಡೆದಿರುವ ಕಾರ್ಯಕ್ರಮ. ಸೇವಾ ಮನೋಭಾವದಿಂದ ಸಾವಿರಾರು ಮಂದಿ ಇದರಲ್ಲಿ ಕೈ ಜೋಡಿಸಿದ್ದಾರೆ. ಇದರಿಂದ ನಮ್ಮ ಸಮಾಜದಲ್ಲಿ ಆಗುತ್ತಿರುವ ಬದಲಾವಣೆ ಕಣ್ಣ ಮುಂದಿದೆ. ಕನಿಷ್ಠ ಒಂದು ವರ್ಷ ಕಾಲ ಈ ಅಭಿಯಾನ ನಿರಂತರವಾಗಿ ನಡೆದರೂ ಸಾಕು. ಸಾಕಷ್ಟು ಬದಲಾವಣೆ ಕಾಣಬಹುದಾಗಿದೆ’ ಎಂಬುದು ಯೋಜನೆಯ ರುವಾರಿಗಳ ಆಶಯ.

ಬಾಕ್ಸ್–1
ಮಹಿಳಾ ಸಂಘಗಳ ಸಾಥ್‌
ಕೈಗಾರಿಕಾ ಸಂಸ್ಥೆಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಈ ಅಭಿಯಾನದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿನ 104 ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ತಮ್ಮೂರಿನ ದೇಗುಲ, ಅಶ್ವತ್ಥ ಕಟ್ಟೆಗಳನ್ನು ಸ್ವಚ್ಛ ಮಾಡಿ ರಂಗೋಲಿ ಇಟ್ಟಿದ್ದಾರೆ.

ಬಾಕ್ಸ್‌–2
ಕಲ್ಯಾಣಿಗಳಿಗೆ ಹೊಸ ರೂಪ
ಅಭಿಯಾನದ ಮುಂದುವರಿದ ಭಾಗವಾಗಿ ಜಿಲ್ಲೆಯಲ್ಲಿನ ಪುರಾತನ ಕಲ್ಯಾಣಿಗಳಿಗೆ ಹೊಸ ರೂಪ ನೀಡುವ ಪ್ರಯತ್ನ ನಡೆದಿದೆ. ರಾಮನಗರ ತಾಲ್ಲೂಕಿನ ದೊಡ್ಡಗಂಗವಾಡಿ ಕಲ್ಯಾಣಿಯು ಭಾಗಶಃ ಮುಚ್ಚಿಹೋಗಿದ್ದು, ಅದನ್ನು ಪುನರುಜ್ಜೀವನಗೊಳಿಸಲಾಗಿದೆ. ಬಿಡದಿಯ ಟೊಯಾಟಾ ಕಂಪನಿಯ ಕಾರ್ಮಿಕರು ಸೇರಿದಂತೆ ಹಲವರು ಇದಕ್ಕೆ ಸಹಕರಿಸಿದ್ದಾರೆ. ನಂತರದಲ್ಲಿ ಅಧಿಕಾರಿಗಳ ನೆರವಿನಿಂದ ಇಡೀ ಕಲ್ಯಾಣಿಯ ಚಿತ್ರಣ ಬದಲಾಗಿದೆ. ಇದರೊಟ್ಟಿಗೆ ಬಿಳಗುಂಬ ಹಾಗೂ ಬ್ಯಾಲ್ಕೆರೆದೊಡ್ಡಿ ಕಲ್ಯಾಣಿಗಳೂ ಹೊಸ ರೂಪ ಕಾಣುತ್ತಿವೆ. ರಾಮನಗರ ತಾಲ್ಲೂಕಿನ 18 ಕಲ್ಯಾಣಿಗಳ ಪುನರುಜ್ಜೀವನಕ್ಕೆ ಯೋಜನೆ ಸಿದ್ಧವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.