ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ಈಜಿನ ಮೋಜು; ಜಿಲ್ಲಾ ಕೇಂದ್ರದಲ್ಲಿನ ಈಜುಕೊಳಕ್ಕೆ ಸಾರ್ವಜನಿಕರ ಲಗ್ಗೆ

ಮಕ್ಕಳ ಕಲಿಕೆಗೂ ಅವಕಾಶ
Last Updated 14 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ರಾಮನಗರ: ಈ ಬಾರಿಯ ಬೇಸಿಗೆಗೆ ಈಜುಕೊಳವು ಜನಸಾಮಾನ್ಯರ ಬಳಕೆಗೆ ಲಭ್ಯವಾಗಿದ್ದು, ಮಕ್ಕಳು ಈಜಿನ ಮೋಜು ಅನುಭವಿಸುತ್ತಿದ್ದಾರೆ.

ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಿರ್ಮಾಣ ಮಾಡಿರುವ ಈಜುಕೊಳವು ಕಳೆದ ತಿಂಗಳಿನಿಂದಲೇ ಬಳಕೆಗೆ ಮುಕ್ತವಾಗಿದೆ. ಇದರ ನಿರ್ವಹಣೆಯ ಹೊರ ಗುತ್ತಿಗೆಯನ್ನು ಸ್ವಿಮ್‌ಲೈಫ್‌ ಸಿಮ್ಮಿಂಗ್‌ ಅಕಾಡೆಮಿಯು ಪಡೆದುಕೊಂಡಿದ್ದು, ಆಸಕ್ತರಿಗೆ ಈಜಿನ ತರಬೇತಿಯನ್ನೂ ನೀಡತೊಡಗಿದೆ.

ಸದ್ಯ ಬಿರುಬೇಸಿಗೆಯಾದ್ದರಿಂದ ಇಲ್ಲಿಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ರತಿ ಗಂಟೆಗೆ ಒಂದು ಬ್ಯಾಚ್‌ನಂತೆ ಅವಕಾಶ ನೀಡಲಾಗುತ್ತಿದೆ. ಬೆಳಿಗ್ಗೆ 6.30ರಿಂದ ಆರಂಭಗೊಂಡು ಸಂಜೆ 6.30ರವರೆಗೆ ಈಜಲು ಅವಕಾಶ ಇದೆ. ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಮಕ್ಕಳ ಅವಕಾಶ ಇದ್ದು, ಅಕಾಡೆಮಿಯ ಸಿಬ್ಬಂದಿಯ ಕಣ್ಗಾವಲು ಇರಲಿದೆ.

ತರಬೇತಿಯೂ ಉಂಟು: ಅಕಾಡೆಮಿಯು ಮಕ್ಕಳು ಹಾಗೂ ವಯಸ್ಕರಿಗೆ ಈಜಿನ ತರಬೇತಿಯನ್ನೂ ಹಮ್ಮಿಕೊಂಡಿದೆ. ಒಟ್ಟು 25 ದಿನಗಳ ಕಾಲ ಈ ತರಬೇತಿ ನಡೆಯಲಿದ್ದು, ಇದಕ್ಕಾಗಿ ₹ 2 ಸಾವಿರ ಶುಲ್ಕ ವಿಧಿಸಲಾಗುತ್ತಿದೆ.

‘ರಾಮನಗರದಲ್ಲಿ ಈಜುಕೊಳ ಆಗಬೇಕು ಎನ್ನುವುದು ದಶಕಗಳ ಕನಸು. ಜಿಲ್ಲಾ ಕೇಂದ್ರದಲ್ಲಿ ಇಂತಹ ಚಟುವಟಿಕೆಗಳು ಆರಂಭವಾಗಿರುವುದು ಕ್ರೀಡಾಪ್ರಿಯರಿಗೆ ಖುಷಿಯ ವಿಚಾರ. ಕೊಳವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಹೋಗಬೇಕು. ಬರುವವರ ಸುರಕ್ಷತೆಗೂ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಇದು ನಿಲ್ಲಬಾರದು’ ಎನ್ನುತ್ತಾರೆ ಐಜೂರು ನಿವಾಸಿ ಶ್ರೀನಿವಾಸ್‌.

ಮಹಿಳೆಯರು ದೂರ: ಈಜುಕೊಳ ಪ್ರವೇಶಕ್ಕೆ ಮಹಿಳೆಯರಿಗೂ ಪ್ರತ್ಯೇಕ ಸಮಯ ನಿಗದಿಯಾಗಿದೆ. ಆದರೆ ಇಲ್ಲಿ ಅವರಿಗೆ ಪೂರಕ ವಾತಾವರಣ ಇಲ್ಲದ ಕಾರಣ ಸ್ತ್ರೀಯರು ಇತ್ತ ಮುಖ ಮಾಡುತ್ತಿಲ್ಲ. ಕೆಲವರು ಮಕ್ಕಳನ್ನಷ್ಟೇ ಕರೆ ತರುತ್ತಿದ್ದಾರೆ.
ಈಜುಕೊಳದ ಸುತ್ತಮುತ್ತ ಸಾಕಷ್ಟು ಮನೆಗಳಿದ್ದು, ಅಲ್ಲಿಂದ ನಿಂತು ನೋಡಿದರೆ ಎಲ್ಲವೂ ಕಾಣುತ್ತದೆ. ಹೀಗಾಗಿ ಸ್ತ್ರೀಯರು ಸ್ವಚ್ಛಂದವಾಗಿ ಈಜುವಂತಹ ಪರಿಸರ ಇಲ್ಲವಾಗಿದೆ.

ಈಜುಕೊಳದ ಅರ್ಧ ಭಾಗವನ್ನಷ್ಟೇ ಸದ್ಯ ಬಳಕೆ ಮಾಡಲಾಗುತ್ತಿದೆ. ನೀರು ಶುದ್ಧೀಕರಣ ಪ್ರಕ್ರಿಯೆ ಇನ್ನಷ್ಟು ಉತ್ತಮವಾಗಬೇಕಿದೆ. ಮಕ್ಕಳನ್ನು ಕರೆದುಕೊಂಡು ಬರುವ ಹಿರಿಯರು ಕೂರಲು ನೆರಳಿನ ವ್ಯವಸ್ಥೆ ಬೇಕಿದೆ. ಸುತ್ತ ಗಿಡಮರಗಳನ್ನು ಬೆಳೆಸಬೇಕಿದೆ. ಇಲ್ಲಿಗೆ ಬರುವ ರಸ್ತೆ ಸಂಪೂರ್ಣ ದೂಳುಮಯವಾಗಿದ್ದು, ಅದಕ್ಕೆ ಡಾಂಬರು ಹಾಕುವ ಕಾರ್ಯವೂ ಆಗಬೇಕು ಎನ್ನುವುದು ಸ್ಥಳೀಯ ನಿವಾಸಿಗಳು ಹಾಗೂ ಕ್ರೀಡಾ ಪ್ರಿಯರ ಆಗ್ರಹವಾಗಿದೆ.

ದುಬಾರಿ ಶುಲ್ಕ ಇಳಿಸಿ
ಕೊಳದ ಪ್ರವೇಶ ಶುಲ್ಕ ದುಬಾರಿ ಆಗಿರುವುದು ಈಜುಪ್ರಿಯರ ಹುಬ್ಬೇರುವಂತೆ ಮಾಡಿದೆ. ಪ್ರತಿ ಬ್ಯಾಚ್‌ನಲ್ಲಿ ಈಜಲು 45 ನಿಮಿಷ ಕಾಲ ಅವಕಾಶ ನೀಡಲಾಗುತ್ತದೆ. ಇದಕ್ಕಾಗಿ ಒಬ್ಬರಿಗೆ ₹ 50 ಶುಲ್ಕ ವಿಧಿಸಲಾಗುತ್ತಿದೆ.

‘ಕ್ರೀಡಾ ಇಲಾಖೆಯು ಸಾರ್ವಜನಿಕರ ತೆರಿಗೆಯ ಹಣ ವಿನಿಯೋಗಿಸಿ ಈ ಕೊಳವನ್ನು ನಿರ್ಮಾಣ ಮಾಡಿದೆ. ಹೀಗಿರುವಾಗ ಇಷ್ಟು ಶುಲ್ಕ ವಿಧಿಸುವುದು ಸರಿಯಲ್ಲ. ಇದರಿಂದ ಕಲಿಯಲು ಆಸಕ್ತಿಯುಳ್ಳ ಬಡ ಮಕ್ಕಳಿಗೆ ಬೇಸರವಾಗುತ್ತದೆ’ ಎನ್ನುವುದು ಸಾರ್ವಜನಿಕರ ದೂರು. ಈಗಿರುವ ಶುಲ್ಕವನ್ನು ಅರ್ಧದಷ್ಟು ಕಡಿಮೆ ಮಾಡಿ, ₹ 20–25 ಶುಲ್ಕ ನಿಗದಿ ಮಾಡಬೇಕು ಎನ್ನುವುದು ಜನರ ಒತ್ತಾಯವಾಗಿದೆ.

*ಗಂಟೆಗೆ ₹ 50 ಶುಲ್ಕ ದುಬಾರಿಯಾಗಿದ್ದು, ಇದನ್ನು ಅರ್ಧಕ್ಕೆ ಇಳಿಸಬೇಕು. ಇಲ್ಲಿನ ನೀರು ಶುದ್ಧೀಕರಣ ವ್ಯವಸ್ಥೆಯು ಇನ್ನಷ್ಟು ಸುಧಾರಿಸಬೇಕು
–ಧರ್ಮೇಂದ್ರ,ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT