ಚನ್ನಪಟ್ಟಣ: ತೀವ್ರವಾಯ್ತು ಮಾತಿನ ಭರಾಟೆ; ಏಕವಚನ, ವೈಯಕ್ತಿಕ ನಿಂದನೆಗೆ ವೇದಿಕೆ

ಮಂಗಳವಾರ, ಏಪ್ರಿಲ್ 23, 2019
31 °C
ಚುನಾವಣಾ ಪ್ರಚಾರ

ಚನ್ನಪಟ್ಟಣ: ತೀವ್ರವಾಯ್ತು ಮಾತಿನ ಭರಾಟೆ; ಏಕವಚನ, ವೈಯಕ್ತಿಕ ನಿಂದನೆಗೆ ವೇದಿಕೆ

Published:
Updated:

ರಾಮನಗರ: ಚುನಾವಣೆಯ ಕಾವು ಹೆಚ್ಚಾದಂತೆಲ್ಲ ಮಾತಿನ ಭರಾಟೆಯೂ ಹೆಚ್ಚುತ್ತಿದೆ. ಪ್ರಚಾರದ ವೇಳೆ ನಾಯಕರು ಆಡುತ್ತಿರುವ ಮಾತುಗಳನ್ನು ಕೇಳಿ ಮತದಾರರು ಕಿವಿಯ ಮೇಲೆ ಕೈ ಇಟ್ಟು ಕೊಳ್ಳುವಂತೆ ಆಗಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಕ್ಷೇತ್ರವಾದ ಚನ್ನಪಟ್ಟಣದಲ್ಲಿ ಎರಡು ಪಕ್ಷಗಳ ಮುಖಂಡರ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದೆ. ಶನಿವಾರ ಕೂಡ ಇದೇ ವರಸೆ ಮುಂದುವರಿದಿದ್ದು, ಪರಿಸ್ಥಿತಿ ಇನ್ನಷ್ಟು ವಿಷಮವಾಗುತ್ತಿದೆ. ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ತಳಮಳವನ್ನೂ ಉಂಟುಮಾಡಿದೆ.

ಎಲ್ಲಿಂದ ಆರಂಭ

ಇದೇ 11ರಂದು ಬಿಜೆಪಿ ಅಭ್ಯರ್ಥಿ ಅಶ್ವಥ್‌ ನಾರಾಯಣ ಪರ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದ ಸಿ.ಪಿ. ಯೋಗೇಶ್ವರ್‌ ಹೊಂಗನೂರಿನಲ್ಲಿ ಪ್ರಚಾರದ ವೇಳೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೇಲೆ ಏಕವಚನದ ಪ್ರಯೋಗ ಮಾಡಿದ್ದರು. ಮಾತ್ರವಲ್ಲ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ವಿರುದ್ಧವೂ ಟೀಕೆ ಮಾಡಿದ್ದರು.

ಯೋಗೇಶ್ವರ್‌ರ ಈ ಮಾತುಗಳು ಜೆಡಿಎಸ್ ಪಾಳಯವನ್ನು ಸಾಕಷ್ಟು ಕೆರಳಿಸಿದ್ದವು. ಅಲ್ಲದೆ ಸಿಪಿವೈ ಡಿ.ಕೆ. ಶಿವಕುಮಾರ್ ಸಹೋದರರ ಮೇಲೆ ಅಕ್ರಮ ಗಣಿಗಾರಿಕೆ, ಹಣ ಲೂಟಿಯ ಆರೋಪ ಮಾಡಿ ಲೇವಡಿ ಮಾಡಿದ್ದರು.

ಕೆರಳಿದ ಡಿಕೆಶಿ

ಯೋಗೇಶ್ವರ್‌ರ ಈ ಮಾತುಗಳಿಂದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕೆರಳಿದ್ದು, ಶುಕ್ರವಾರ ರಾತ್ರಿ ಚನ್ನಪಟ್ಟಣದ ಅಂಬೇಡ್ಕರ್ ನಗರದಲ್ಲಿ ನಡೆದ ಪ್ರಚಾರದಲ್ಲಿ ಸಿಪಿವೈ ಗಂಡಸ್ತನದ ಪ್ರಶ್ನೆ ಮಾಡಿದ್ದರು. ತಾವೂ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಚಿವರು ‘ಅವನಿಗೆ ತಾಕತ್ತಿದ್ದರೆ ಸುರೇಶ್ ವಿರುದ್ಧ ಸ್‍ಪರ್ಧಿಸಬೇಕಿತ್ತು’ ಎಂದು ಸವಾಲನ್ನೂ ಹಾಕಿದ್ದರು.

ಮತ್ತೆ ವಾಗ್ದಾಳಿ

ಇತ್ತ ಡಿಕೆಶಿ ಹೇಳಿಕೆಗೆ ಯೋಗೇಶ್ವರ್ ಶನಿವಾರ ಚನ್ನಪಟ್ಟಣದಲ್ಲಿ ಪ್ರಚಾರದ ವೇಳೆ ಪ್ರತಿಕ್ರಿಯಿಸಿದ್ದು ‘ಎಂಟು ಬಾರಿ ಸ್ಪರ್ಧೆ ಮಾಡಿ ತೋರಿಸಿದ್ದೇನೆ. ಹೀಗಾಗಿ ಅವರೇನು ನನ್ನ ಗಂಡಸ್ತನ ಪ್ರಶ್ನಿಸುವುದು ಬೇಡ. ಅವರಿಗೆ ಗಂಡಸ್ತನ ಇದ್ದದ್ದೇ ಆದಲ್ಲಿ ತಾಲ್ಲೂಕಿನ ಕೆರೆಗಳನ್ನು ತುಂಬಿಸಲಿ’ ಎಂದು ಪ್ರತಿ ಸವಾಲು ಹಾಕಿದ್ದಾರೆ.

ಬಿಜೆಪಿ ಅಭ್ಯರ್ಥಿ ಅಶ್ವಥ್‌ ನಾರಾಯಣ ಕೂಡ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ‘ನಾನೇನು ಅವನ ಜೊತೆ ಮಾತನಾಡಿಲ್ಲ. ಶಿವಕುಮಾರ್ ಹತ್ತಿರ ನನ್ನ ಕಿತ್ತೋಗಿರೋ ಬಟ್ಟೆ ಕೂಡ ಹೋಗಲ್ಲ’ ಎಂದಿದ್ದಾರೆ. ಮಾತ್ರವಲ್ಲ, ಅಣ್ಣ–ತಮ್ಮಂದಿರ ಬಗ್ಗೆ ಸಾಕಷ್ಟು ಟೀಕೆಯನ್ನೂ ಮಾಡಿದ್ದಾರೆ.

ಹೀಗೆ ಪರಸ್ಪರ ವಾಗ್ದಾಳಿಗಳ ಮೂಲಕ ಚನ್ನಪಟ್ಟಣದ ರಾಜಕೀಯ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ.

ನೀರಾವರಿ ಯೋಜನೆಯೇ ಮೂಲ
ಕಳೆದ ಚುನಾವಣೆಯಲ್ಲಿ ಮಿತ್ರರಾಗಿದ್ದ ಡಿಕೆಶಿ–ಯೋಗೇಶ್ವರ್‌ ನಡುವೆ ಈ ಪರಿಯ ವೈರತ್ವಕ್ಕೆ ಕಾರಣ ಆಗುತ್ತಿರುವುದು ನೀರಾವರಿ ಯೋಜನೆ.

ಚನ್ನಪಟ್ಟಣ ತಾಲ್ಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆಯ ಲಾಭ ಪಡೆಯಲು ಕಳೆದ ವಿಧಾನಸಭೆ ಚುನಾವಣೆಯಿಂದಲೂ ಮೂರು ಪ್ರಕ್ಷಗಳೂ ಪ್ರಯತ್ನಿಸಿವೆ. ಈ ವಿಷಯದಲ್ಲಿ ಆಗಿಂದಲೂ ಪರಸ್ಪರ ವಾಗ್ದಾಳಿ ನಡೆಯುತ್ತಲೇ ಇದೆ ಆದರೆ ಏಕವಚನ, ವೈಯಕ್ತಿಕ ನಿಂದನೆಯ ಮಟ್ಟಕ್ಕೆ ತಲುಪುತ್ತಿರುವುದು ಇದೇ ಮೊದಲು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !