ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಪಣ ತೊಡಿ: ಶಾಸಕ ಇಕ್ಬಾಲ್ ಹುಸೇನ್

ಶಿಕ್ಷಕರ ದಿನಾಚರಣೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಕಿವಿಮಾತು; ನಿವೃತ್ತ ಶಿಕ್ಷಕರಿಗೆ ಸನ್ಮಾನ
Published : 12 ಸೆಪ್ಟೆಂಬರ್ 2024, 14:26 IST
Last Updated : 12 ಸೆಪ್ಟೆಂಬರ್ 2024, 14:26 IST
ಫಾಲೋ ಮಾಡಿ
Comments

ರಾಮನಗರ: ‘ನಮ್ಮ ಜಿಲ್ಲೆಯ ಎಸ್ಎಸ್ಎಲ್‌ಸಿ ಫಲಿತಾಂಶ ಕೆಲ ವರ್ಷಗಳ ಹಿಂದೆ ರಾಜ್ಯಮಟ್ಟದಲ್ಲಿ 2ನೇ ಸ್ಥಾನದಲ್ಲಿತ್ತು. ಇದೀಗ 26ನೇ ಸ್ಥಾನಕ್ಕೆ ಕುಸಿದಿದೆ. ಹಿಂದೆ ಇದ್ದ ಸೌಲಭ್ಯಗಳು ಮತ್ತು ಶಿಕ್ಷಕರೇ ಇದ್ದರೂ ಫಲಿತಾಂಶದಲ್ಲಿ ಗಣನೀಯ ಕುಸಿತವಾಗಿದೆ. ಯಾಕೆ ಹೀಗಾಯಿತು ಎಂಬುದನ್ನು ಶಿಕ್ಷಕರು ಆತ್ಮಾವಲೋಕನ‌ ಮಾಡಿಕೊಂಡು, ಫಲಿತಾಂಶ ಸುಧಾರಣೆಗೆ ಪಣ ತೊಡಬೇಕು’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಕಿವಿಮಾತು ಹೇಳಿದರು.

ನಗರದ ಕೃಷ್ಣಸ್ಮೃತಿ‌ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆಯು ಗುರುವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮುಂದಿನ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಜಿಲ್ಲೆಯು ಅಗ್ರ‌ 10 ಸ್ಥಾನದೊಳಗೆ ಇರುವಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕು’ ಎಂದರು.

‘ಶಿಕ್ಷಣ ಸುಧಾರಣೆಗಾಗಿ ಜಿಲ್ಲೆಯಲ್ಲಿ 20 ಮಾದರಿ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಡಿಸಿಎಂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾರ್ಪೊರೇಟ್ ಕಂಪನಿಗಳ‌‌ ಸಾಮಾಜಿಕ ಹೊಣೆಗಾರಿಕೆ ಅನುದಾನ ಬಳಸಿಕೊಂಡು, ಪ್ರತಿ ತಾಲ್ಲೂಕುಗಳ ಪಂಚಾಯಿತಿ ಮಟ್ಟದಲ್ಲಿ 5 ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆತರಲು ವಾಹನ ಸೌಲಭ್ಯ ಕೂಡ ಇರಲಿದೆ’ ಎಂದು ಹೇಳಿದರು.

‘ಪ್ರತಿಯೊಬ್ಬರ ಯಶಸ್ಸಿನ ಹಿಂದೆ‌ ಶಿಕ್ಷಕರಿರುತ್ತಾರೆ. ಅಂತಹ ಗುರು ಪರಂಪರೆಗೆ ಮೇಲ್ಪಂಕಿ‌ ಹಾಕಿದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್. ಅವರ ಆದರ್ಶಗಳನ್ನು ಶಿಕ್ಷಕರು ಅಳವಡಿಸಿಕೊಳ್ಳಬೇಕು. ವೈದ್ಯ ತಪ್ಪು ಮಾಡಿದರೆ‌ ಒಬ್ಬ ರೋಗಿ ಸಾಯುತ್ತಾನೆ. ಎಂಜಿನಿಯರ್ ತಪ್ಪು ಮಾಡಿದರೆ ಒಂದು‌ ಕಟ್ಟಡ ಬೀಳಬಹುದು. ಅದೇ ಒಬ್ಬ ಗುರು ತಪ್ಪು ಮಾಡಿದರೆ ಅದರ ಪರಿಣಾಮವನ್ನು ಸಮಾಜ ಎದುರಿಸಬೇಕಾಗುತ್ತದೆ. ಶಿಕ್ಷಕ ವೃತ್ತಿಗೆ ಅಷ್ಟೊಂದು ಮಹತ್ವ ಮತ್ತು ಪವಿತ್ರತೆ‌ ಇದೆ. ಶಿಕ್ಷಕರು ತರಗತಿಗಷ್ಟೇ ಅಲ್ಲದೆ ಸಮಾಜಕ್ಕೆ ಶಿಕ್ಷಕರು’ ಎಂದು ಬಣ್ಣಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ‌ರಾಜು ಮಾತನಾಡಿ, ‘ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು. ಶಿಕ್ಷಕರು ಅತ್ಯುತ್ತಮ ಪ್ರಜೆಗಳನ್ನು ರೂಪಿಸಿ ದೇಶಕ್ಕೆ ನೀಡುವ ಶಿಲ್ಪಿಗಳು’ ಎಂದು ಹೇಳಿದರು.

ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ಅವರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಯಟ್ ಉಪನ್ಯಾಸಕ ಕೆ.ಪಿ. ಬಾಬು ವಿಶೇಷ ಉಪನ್ಯಾಸ ನೀಡಿದರು. ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಸರ್ಕಾರಿ ನೌಕರರ ಸಂಘದ‌ ಜಿಲ್ಲಾಧ್ಯಕ್ಷ ಕೆ. ಸತೀಶ್, ಎಸ್.ಡಿ.ಎಂ.ಸಿ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಉಮೇಶ್ ಗಂಗವಾಡಿ, ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಜಿಲ್ಲಾಧ್ಯಕ್ಷ ಪಟೇಲ್ ರಾಜು, ನಗರಸಭೆ ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ಶಿಕ್ಷಕರ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಗುರು ಭವನವನ್ನು ಶಾಸಕರು ನಿರ್ಮಾಣ ಮಾಡಿಕೊಡಬೇಕು. ಮುಂದಿನ ಶಿಕ್ಷಕರ ದಿನಾಚರಣೆ ಅಲ್ಲೇ ನಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಗಾಣಕಲ್ ನಟರಾಜ್ ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ನೌಕರರ ಹಿತದೃಷ್ಟಿಯಿಂದ ಹೊಸ ಪಿಂಚಣಿ ಯೋಜನೆಯನ್ನುರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಯೋಜನೆ ಜಾರಿಗೆ ಸರ್ಕಾರದ ಮಟ್ಟದಲ್ಲಿ ಶಾಸಕರು ಒತ್ತಡ ಹೇರಬೇಕು‌. ಆರೋಗ್ಯ ಭಾಗ್ಯ ಸೌಲಭ್ಯವನ್ನು ನೌಕರರಿಗೂ ವಿಸ್ತರಿಸಬೇಕು
ಕೆ.‌ ಸತೀಶ್ ಅಧ್ಯಕ್ಷ ಜಿಲ್ಲಾ ಸರ್ಕಾರಿ ನೌಕರರ ಸಂಘ

ಹೊಸ ಗುರುಭವನದ ಭರವಸೆ

‘ಸದ್ಯ ಇರುವ ಗುರು ಭವನ ಹಳೆಯದಾಗಿದೆ. ಅಲ್ಲಿ ಸುಸಜ್ಜಿತ ಶೌಚಾಲಯ ಶಿಕ್ಷಕರು ತಂಗಲು ಸೂಕ್ತ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲ. ಹಾಗಾಗಿ ಹಳೆಯ ಕಟ್ಟಡವನ್ನು ಕೆಡವಿ ಹೊಸ ಗುರು ಭವನವನ್ನು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಅದಕ್ಕೆ ಶಾಸಕರ ಅನುದಾನ ಸೇರಿದಂತೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಅನುದಾನದ ವ್ಯವಸ್ಥೆ ಮಾಡಲಾಗುವುದು’ ಎಂದು ಶಾಸಕ‌ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT