ಭಾನುವಾರ, ಸೆಪ್ಟೆಂಬರ್ 26, 2021
21 °C
ಎಸ್ಸೆಸ್ಸೆಲ್ಸಿ ಮೌಲ್ಯಮಾಪನ

ರಾಮನಗರ: ಖಾಸಗಿ ಶಾಲೆ ಶಿಕ್ಷಕರಿಗೆ ಪ್ಯಾಕೇಜ್‌ ನೀಡಿ: ಸಾಂಕೇತಿಕ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಎಸ್ಸೆಸ್ಸೆಲ್ಸಿ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುವ ಖಾಸಗಿ ಶಾಲೆ ಶಿಕ್ಷಕರಿಗೂ ರಾಜ್ಯ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಫೋರಂ ಕರ್ನಾಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಆಗ್ರಹಿಸಿದರು.

ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಕೇಂದ್ರವಿರುವ ಶಾಂತಿ ನಿಕೇತನ ಶಾಲೆಯ ಮುಂಭಾಗ ಸೋಮವಾರ ಶಿಕ್ಷಕರ ಧರಣಿ ಉದ್ದೇಶಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ಖಾಸಗಿ ಶಾಲೆಗಳ ಶಿಕ್ಷಕರು ಮೌಲ್ಯಮಾಪನಕ್ಕೆ ಹಾಜರಾಗುತ್ತಿದ್ದಾರೆ. ಸರ್ಕಾರ ಈ ಶಿಕ್ಷಕರ ನೆರವಿಗೆ ಬರಬೇಕು ಎಂದು ಒತ್ತಾಯಿಸಿ ಇಂದು ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರ ತಕ್ಷಣ ಖಾಸಗಿ ಶಾಲಾ ಶಿಕ್ಷಕರಿಗೂ ಆರೋಗ್ಯ ವಿಮೆ, ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದರು.

ಲಾಕ್‌ಡೌನ್‌ ಕಾರಣಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಿಕ್ಷಕರಿಗೆ ವೇತನ ವಿತರಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಇಂದು ಅನೇಕ ವೃತ್ತಿ ಸಮುದಾಯಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿವೆ. ಆದರೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಖಾಸಗಿ ಶಾಲಾ ಶಿಕ್ಷಕರನ್ನು ಕಡೆಗಣಿಸಿದೆ ಅಸಮಾಧಾನ ವ್ಯಕ್ತಪಡಿಸಿದರು.

ಖಾಸಗಿ ಶಾಲೆಗಳಲ್ಲಿ ಬೋಧನಾ ಶುಲ್ಕ ಸಂಗ್ರಹವಾಗುತ್ತಿಲ್ಲ, ಇನ್ನೊಂದೆಡೆ ಬಾಕಿ ಇರುವ ಆರ್.ಟಿ.ಇ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಅನೇಕ ಶಾಲೆಗಳು ಆರ್ಥಿಕ ಸಂಕಷ್ಠಕ್ಕೆ ಗುರಿಯಾಗಿವೆ ಎಂದು ಹೇಳಿದರು.

ಫೋರಂನ ಕಾರ್ಯದರ್ಶಿ ಸೂ.ಡಿ.ಸುರೇಶ್ ಮಾತನಾಡಿ ವೇತನವಿಲ್ಲದೆ ಅನೇಕ ಖಾಸಗಿ ಶಾಲೆಗಳ ಶಿಕ್ಷಕರು ಇಂದು ತರಕಾರಿ, ಸೊಪ್ಪು, ಇಡ್ಲಿ ಮಾರಾಟ ಮಾಡುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರ ₹ 1,300 ಕೋಟಿ ಆರ್‌ಟಿಇ ಶುಲ್ಕ ಬಾಕಿ ಇರಿಸಿಕೊಂಡಿದೆ. ಈ ಪೈಕಿ ₹ 280 ಕೋಟಿ ಮಾತ್ರ ಬಿಡುಗಡೆ ಮಾಡಿದೆ ಎಂದು ಹೇಳಿದರು.

ಬಹುತೇಕ ಎಲ್ಲಾ ಶಾಲೆಗಳಲ್ಲೂ ಕಳೆದ ಶೈಕ್ಷಣಿಕ ಸಾಲಿನ ಬೋಧನಾ ಶುಲ್ಕ ಪೋಷಕರಿಂದ ಬಾಕಿ ಉಳಿದಿದೆ. ಆದರೆ ಸರ್ಕಾರ ಮಾತ್ರ, ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ನೀಡಿದ ಮನವಿಯನ್ನು ಡಿಡಿಪಿಐ ಸೋಮಶೇಖರಯ್ಯ ಸ್ವೀಕರಿಸಿದರು. ಪ್ರತಿಭಟನೆಯ ನಂತರ ಶಿಕ್ಷಕರು ಮೌಲ್ಯ ಮಾಪನಕ್ಕೆ ತೆರಳಿದರು. ಶಿಕ್ಷಕರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಕರುನಾಡ ಸೇನೆ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಕಾರ್ಯಕಾರಿಣಿ ಸದಸ್ಯರಾದ ಲಕ್ಷ್ಮೀ ಕುಮಾರ್, ಶ್ರೀಧರ್, ಸಂಘಟನೆಯ ನಾಲ್ಕೂ ತಾಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾ ಖಾಸಗಿ ಶಾಲಾ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಚೌಡಯ್ಯ ಹಾಗೂ ಪದಾಧಿಕಾರಿಗಳು ಬೆಂಬಲ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು