ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘23’ ಮಾಹಿತಿ: ಪೇಚಿಗೆ ಸಿಲುಕಿದ ಶಿಕ್ಷಕರು!

ಸಂಸದರ ಸೂಚನೆ ಮೇರೆಗೆ ಕಾರ್ಯೋನ್ಮುಖವಾದ ಶಿಕ್ಷಣ ಇಲಾಖೆ: ಖಾಸಗಿ ಮಾಹಿತಿಯೂ ಸಂಗ್ರಹ
Last Updated 20 ಆಗಸ್ಟ್ 2019, 11:57 IST
ಅಕ್ಷರ ಗಾತ್ರ

ರಾಮನಗರ: ಮಕ್ಕಳಿಗೆ ಪಾಠ ಮಾಡುವುದಲ್ಲದೆ ಬಿಸಿಯೂಟ, ವಿವಿಧ ಆಂದೋಲನಗಳ ಹೊರೆ ಹೊತ್ತಿರುವ ಶಿಕ್ಷಕರಿಗೆ ಇದೀಗ ಹೊಸ ಹೊರೆಯೊಂದು ಬಿದ್ದಿದೆ. ಶಾಲೆಯಲ್ಲಿನ ಪ್ರತಿ ಮಗುವಿನ ಪೂರ್ವಾಪರ ಮಾಹಿತಿ ಎಲ್ಲವನ್ನೂ ಕಲೆಹಾಕುವಷ್ಟರಲ್ಲಿ ಅವರು ಹೈರಾಣಾಗುತ್ತಿದ್ದಾರೆ.

ಇಷ್ಟಕ್ಕೂ ಇದು ಸರ್ಕಾರಿ ಆದೇಶದ ಮೇಲೆ ಮಾಡುತ್ತಿರುವ ಕೆಲಸ ಅಲ್ಲ. ಬದಲಾಗಿ ಸಂಸದರ ಅಣತಿಯ ಮೇರೆಗೆ ನಡೆದಿರುವ ಕಾರ್ಯ. ಇದೆಲ್ಲ ಏತಕ್ಕೆ ಎಂಬುದು ಶಿಕ್ಷಕರಿಗೆ ಇರಲಿ, ಸ್ವತಃ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೂ ಗೊತ್ತಿಲ್ಲ. ಸಂಸದರ ಸೂಚನೆ ಮೇರೆಗೆ ಈ ಕಾರ್ಯ ಮಾಡುತ್ತಿದ್ದೇವೆ ಎನ್ನುತ್ತಾರೆ ಅಧಿಕಾರಿಗಳು.

ಏನಿದು ಮಾಹಿತಿ: ಸಂಸದ ಡಿ.ಕೆ. ಸುರೇಶ್‌ ಈಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮೌಖಿಕ ಆದೇಶವೊಂದನ್ನು ನೀಡಿದ್ದು, ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕುಟುಂಬ ಸದಸ್ಯರ ಪ್ರತಿಯೊಂದು ಮಾಹಿತಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಒಟ್ಟು 23 ಅಂಶಗಳ ಈ ಅರ್ಜಿಯನ್ನು ಶಿಕ್ಷಕರು ವಿದ್ಯಾರ್ಥಿಗಳ ಪರವಾಗಿ ತುಂಬಬೇಕಿದೆ. ವಿದ್ಯಾರ್ಥಿಯ ಹೆಸರು, ವಿಳಾಸದ ಜೊತೆಗೆ ಅವರ ತಂದೆ ತಾಯಿ, ಅಣ್ಣ–ತಮ್ಮ, ಅಕ್ಕ–ತಂಗಿ, ಅವರೆಲ್ಲರ ಉದ್ಯೋಗ, ವಿದ್ಯಾರ್ಹತೆ, ದೂರವಾಣಿ ಸಂಖ್ಯೆ, ಜಾತಿ ಮೊದಲಾದ ಅಂಶಗಳ ಮಾಹಿತಿಯನ್ನು ಈಗ ನೀಡಬೇಕಿದೆ.

ಜಿಲ್ಲೆಯಲ್ಲಿ 1300ಕ್ಕೂ ಹೆಚ್ಚು ಶಾಲೆಗಳು ಇದ್ದು, ಇದರಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚಿನ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲ ಮಕ್ಕಳು, ಅರ ಪೋಷಕರ ಮಾಹಿತಿ ಹಾಗೂ ದೂರವಾಣಿ ಸಂಖ್ಯೆಗಳು ಈಗಾಗಲೇ ಶಿಕ್ಷಣ ಇಲಾಖೆ ಬಳಿ ಇದೆ. ಜೊತೆಗೆ ‘ಸ್ಟೂಡೆಂಟ್ ಅಚೀವ್‌ಮೆಂಟ್ ಟ್ರ್ಯಾಕಿಂಗ್ ಸಿಸ್ಟಂ’ ಮೂಲಕ ಪ್ರತಿ ವಿದ್ಯಾರ್ಥಿಯ ಮಾಹಿತಿಯನ್ನು ವೆಬ್‌ ಪೋರ್ಟಲ್‌ನಲ್ಲಿ ಸೇರಿಸಲಾಗಿದೆ. ಹೀಗಿರುವಾಗ ಉಳಿದ ಮಾಹಿತಿ ಏಕೆ ಎಂಬುದು ಪೋಷಕರ ಪ್ರಶ್ನೆಯಾಗಿದೆ.

ಶಿಕ್ಷಣ ಸಂಸ್ಥೆಗಳ ವಿರೋಧ: ಸಂಸದರ ಈ ಹೊಸ ಆದೇಶಕ್ಕೆ ಸರ್ಕಾರಿ ಶಾಲೆಗಳ ಶಿಕ್ಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ವಿರೋಧ ವ್ಯಕ್ತಪಡಿಸುತ್ತಾರೆ.

‘ಏತಕ್ಕಾಗಿ ಈ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ನಮಗೆ ಮಾಹಿತಿ ನೀಡಿಲ್ಲ. ಶಿಕ್ಷಕರು–ಪೋಷಕರಿಗೆ ನೀಡಲಾಗಿರುವ ಅರ್ಜಿಯಲ್ಲಿ ಇಲಾಖೆಯದ್ದಾಗಲಿ, ಸಂಸದರ ಹೆಸರಿನದ್ದಾಗಲಿ ಮಾಹಿತಿ ಇಲ್ಲ. ಇಷ್ಟು ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿ ಮಾಡುವುದಾದರೂ ಏನು?’ ಎಂದು ಶಿಕ್ಷಕರು ಪ್ರಶ್ನಿಸುತ್ತಾರೆ.

‘ಹೀಗೆ ಪ್ರತಿಯೊಬ್ಬರ ಮಾಹಿತಿ, ಮೊಬೈಲ್‌ ಸಂಖ್ಯೆಗಳನ್ನು ಕಲೆಹಾಕುವುದು ಖಾಸಗಿತನದ ಉಲ್ಲಂಘನೆ. ಒಂದು ವೇಳೆ ಈ ಎಲ್ಲ ಮಾಹಿತಿಗಳು ಖಾಸಗಿ ಏಜೆನ್ಸಿಗಳಿಗೆ ಸಿಕ್ಕಲ್ಲಿ ಅದರಿಂದ ದುರ್ಬಳಕೆ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಮೊದಲು ಏತಕ್ಕೆ ಈ ಮಾಹಿತಿ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಂಸದ ಡಿ.ಕೆ. ಸುರೇಶ್‌ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

***
ಇಲಾಖೆ ಈ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ. ಸಂಸದರು ಕಳೆದ ಎರಡು ತಿಂಗಳ ಹಿಂದೆಯೇ ಈ ಮಾಹಿತಿ ಕೇಳಿದ್ದು, ಅವರ ಸೂಚನೆ ಮೇರೆಗೆ ಸಂಗ್ರಹಿಸಲಾಗುತ್ತಿದೆ.
ಎಂ.ಎಚ್‌. ಗಂಗಮಾರೇಗೌಡ

***
ಮಗುವಿನ ಪೋಷಕರ ಮಾಹಿತಿಯನ್ನು ನಾವು ನೀಡಬಹುದು. ಆದರೆ ಇಡೀ ಕುಟುಂಬದ ಮಾಹಿತಿ ನೀಡುವುದು ಕಷ್ಟ. ಬೇಕಿದ್ದರೆ ಸರ್ಕಾರಿ ಸಿಬ್ಬಂದಿ ಮೂಲಕ ಮಾಹಿತಿ ಸಂಗ್ರಹಿಸಲಿ.

ಪಟೇಲ್‌ ರಾಜು, ಅಧ್ಯಕ್ಷ, ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT