ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಿತ್ರೆ, ಪುರಾಣದ ಪಾತ್ರಗಳ ವ್ಯತ್ಯಾಸ ತಿಳಿಸಿ

ಮಾಗಡಿಯ ಅಂಬೇಡ್ಕರ್‌ ಭವನದಲ್ಲಿ ನಾಟಕೋತ್ಸವ–2019 ಉದ್ಘಾಟನೆ
Last Updated 20 ನವೆಂಬರ್ 2019, 17:15 IST
ಅಕ್ಷರ ಗಾತ್ರ

ಮಾಗಡಿ: ಚಾರಿತ್ರಿಕ ಮಹತ್ವದ ಘಟನೆಗಳು ಮತ್ತು ಪುರಾಣಗಳಲ್ಲಿನ ಪಾತ್ರಗಳ ನಡುವಿನ ವ್ಯತ್ಯಾಸಗಳನ್ನು ವಿದ್ಯಾರ್ಥಿಗಳಿಗೆ ನಾಟಕ ಅಭಿನಯದ ಮೂಲಕ ತಿಳಿಸಿಕೊಡುವ ಅಗತ್ಯವಿದೆ ಎಂದು ರಾಷ್ಟ್ರೀಯ ನಾಟಕಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ ತಿಳಿಸಿದರು.

ಅಂಬೇಡ್ಕರ್‌ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಆರಂಭವಾದ ನಾಟಕೋತ್ಸವ–2019 ಉದ್ಘಾಟಿಸಿ ಅವರು ಮಾತನಾಡಿದರು.

ಸೃಜನಶೀಲತೆಯ ಬಹುತ್ವದ ಭಾರತದ ಪರಿಕಲ್ಪನೆಯನ್ನು ಮರೆಮಾಚಿ, ಸುಳ್ಳನ್ನು ಸತ್ಯ ಮಾಡುವತ್ತ ಸರ್ಕಾರಗಳು ದಾಪುಗಾಲು ಹಾಕುತ್ತಿವೆ. ಇಂದಿನ ಶಿಕ್ಷಣ ವ್ಯವಸ್ಥೆ ಗಲಿಬಿಲಿ ಉಂಟುಮಾಡುತ್ತಿದೆ. ಪುರಾಣಗಳು ಚೆರಿತ್ರೆಗಳಾಗುತ್ತಿವೆ. ಶಿಕ್ಷಕರು ಮಕ್ಕಳಿಗೆ ಚರಿತ್ರೆಯ ಪಾತ್ರಗಳಲ್ಲಿನ ಸತ್ಯ, ನ್ಯಾಯಪರಿಪಾಲನೆ ಸರಿಯಾಗಿ ಅರ್ಥ ಮಾಡಿಸಬೇಕಿದೆ ಎಂದರು.

ಶಿಕ್ಷಣ ವ್ಯವಸ್ಥೆ ದಿಕ್ಕಾಪಾಲಾಗುತ್ತಿದೆ. ಉಳ್ಳವರಿಗೆ ಮಾತ್ರ ಶಿಕ್ಷಣ ಎಂಬಂತೆ ಬಿಂಬಿಸಲಾಗಿದೆ. ಸಂವಿಧಾನದತ್ತ ಆಶಯಗಳಾದ ಶಿಕ್ಷಣ, ಆರೋಗ್ಯ, ಉದ್ಯೋಗ ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಜಾರಿಗೆ ತರಬೇಕು ಎಂದು ತಿಳಿಸಿದರು.

ಮಕ್ಕಳಿಗೆ ರಾಗಿರೊಟ್ಟಿ, ಹುಚ್ಚೆಳ್ಳು ಚಟ್ನಿಯ ಜತೆಗೆ ಬೆಣ್ಣೆ ತಿನ್ನಿಸುವುದು ಪೂರ್ವಜರ ಮೂಲ ಕಲ್ಪನೆಯಾಗಿತ್ತು. ಬಾಳು, ಬಾಳಗೊಡು ಎಂಬುದು ನಮ್ಮ ಅಜ್ಜಿ ನಮಗೆ ಕಲಿಸಿಕೊಟ್ಟಿದ್ದ ಸರ್ವೋದಯದ ಸಾಮುದಾಯಿಕ ರಂಗತಾಲೀಮು ಮರೆಯಲಾದೀತೆ. ಟಿಪ್ಪುಸುಲ್ತಾನ್‌ ಅಪ್ಪಟ ದೇಶಪ್ರೇಮಿ. ಬ್ರಿಟಿಷರ ಕಡುವಿರೋಧಿ ಎಂಬುದನ್ನು ಜನಪದರ ಹೃದಯದಿಂದ ಅಳಿಸಲಾದೀತೆ ಎಂದು ಪ್ರಶ್ನಿಸಿದರು.

ವ್ಯಾಸರು ಬರೆದ ಮಹಾಭಾರತವನ್ನು ಮಾದರಿ ಇಟ್ಟುಕೊಂಡು, ಗ್ರಾಮೀಣ ಜನಪದರು ತಮಗೆ ಅನುಕೂಲವಾಗುವಂತೆ ಸನ್ನಿವೇಶಗಳನ್ನು ರಚಿಸಿಕೊಂಡು, ಎಲ್ಲರೂ ಒಂದಾಗಿ ದುಡಿದು, ಕೂಡಿ ಉಂಡು, ಸುಖವಾಗಿದ್ದರು ಎಂಬುದನ್ನು ಮಕ್ಕಳಿಗೆ ನಾಟಕಗಳ ಮೂಲಕ ಮನವರಿಕೆ ಮಾಡಿಕೊಡಬೇಕು ಎಂದರು.

ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ಮಾತನಾಡಿ, ಅನರ್ಹ ಶಾಸಕರನ್ನು ಶಿಕ್ಷಿಸುವ ಬದಲು, ಸುಪ್ರಿಂ ಕೋರ್ಟ್‌ ಜನರತ್ತ ತಳ್ಳಿದೆ. ಅನ್ಯಾಯದ ರಾಜಕಾರಣ, ಸ್ವಹಿತಾಸಕ್ತಿಯಿಂದ ನಾಡು ನುಡಿ ನೆಲಜಲದಕ್ಕೆ ಆಪತ್ತು ಬರಲಿದೆ. ರಾಜ್ಯ ರಾಜಕಾರಣ ಅನೈತಿಕತೆ ಮತ್ತು ಭ್ರಷ್ಟಾಚಾರ ತಾರಕಕ್ಕೇರಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶಾಸಕರ ಆದಾಯ ಒಂದೇ ವರ್ಷದಲ್ಲಿ ಶೇ 40 ರಷ್ಟು ಹೆಚ್ಚಳವಾಗುತ್ತಿದೆ. ಸಾಲಸೋಲ ಮಾಡಿ ಭೂಮಿಗೆ ಬೆಳೆ ಇಟ್ಟ ರೈತರಿಗೆ ವ್ಯವಸಾಯಕ್ಕೆ ಮಾಡಿದ ಖರ್ಚು ಮತ್ತೆ ಕೈಸೇರುತ್ತಿಲ್ಲ. ಇದೆಂತಹ ಅರ್ಥ ವ್ಯವಸ್ಥೆ ಎಂದರು.

1965ರಲ್ಲಿ ರಾಜೇಶ್‌ ಅಭಿನಯದ ಚಲನಚಿತ್ರ ನಮ್ಮೂರಿನಲ್ಲಿ ಚಿತ್ರೀಕರಣವಾಗುತ್ತಿತ್ತು. ಹೋಗದಿರಿ ಸೋದರರೆ, ಹುಟ್ಟಿದ ಊರನ್ನು ಬಿಟ್ಟು ಎಂಬ ಹಾಡು ನಮ್ಮೆಲ್ಲರ ಹೃದಯದಲ್ಲಿ ಹುಟ್ಟೂರಿನ ಬಗ್ಗೆ ಅಭಿಮಾನ ಬೆಳೆಯುವಂತೆ ಮಾಡಿತು. ಬೆಂಗಳೂರಿಗೆ ಮುಂದೊಂದು ದಿನ ದೆಹಲಿಗೆ ಬಂದಿರುವ ಆಪತ್ತು ಬರಲಿದೆ. ಭವಿಷ್ಯದ ರೂವಾರಿಗಳಾದ ವಿದ್ಯಾರ್ಥಿಗಳಿಗೆ ಕೃಷಿ ಮೂಲಕ ಬದುಕು ಕಟ್ಟಿಕೊಳ್ಳುವಂತೆ ನಾಟಕಗಳ ಮೂಲಕ ತಿಳಿಹೇಳಬೇಕಿದೆ ಎಂದರು.

ಕ್ಷೇತ್ರಶಿಕ್ಷಣಾಧಿಕಾರಿ ಸಿದ್ದೇಶ್ವರ.ಎಸ್‌, ಸಂಸ್ಕೃತ ವಿದ್ವಾಂಸ ಡಾ.ಸಿ.ನಂಜುಂಡಯ್ಯ ಮಾತನಾಡಿದರು.

ಹಿರಿಯ ಕವಿ ಡಿ.ರಾಮಚಂದ್ರಯ್ಯ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಕಲ್ಪನಾ ಶಿವಣ್ಣ, ಡಿವಿಜಿ ವಿಚಾರ ವೇದಿಕೆ ಅಧ್ಯಕ್ಷ ಸಿ.ಬಿ.ಅಶೋಕ್‌, ರಂಗಕರ್ಮಿ ಚಿಕ್ಕವೀರಯ್ಯ, ಬಿ.ಆರ್‌.ಪಿ ಗಳಾದ ಮಂಜಪ್ಪ, ಮುನಿಯಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್‌.ಲೋಕೇಶ್‌, ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಡಾ.ಡಿ.ಸಿ. ರಾಮಚಂದ್ರಯ್ಯ, ಶಿಕ್ಷಕ ಡಿ.ಜಿ.ಗಂಗಾಧರ್‌, ನರಸಿಂಹಮೂರ್ತಿ ವೇದಿಕೆಯಲ್ಲಿದ್ದರು. ಕೆಂಪೇಗೌಡ ನಾಟಕದ ನೃತ್ಯ ರೂಪಕ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT