ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರದಿಂದ ಮತ್ತೆ ಪಾದಯಾತ್ರೆ

ಐದನೇ ದಿನ ಕಾಂಗ್ರೆಸ್ ನಡಿಗೆ ಮೊಟಕು: ಕಾರ್ಯಕರ್ತರಿಗೆ ಉತ್ಸಾಹ ತುಂಬಿದ ಡಿಕೆಶಿ ಮಾತು
Last Updated 14 ಜನವರಿ 2022, 7:40 IST
ಅಕ್ಷರ ಗಾತ್ರ

ರಾಮನಗರ: ‘ಮೇಕೆದಾಟು ಪಾದಯಾತ್ರೆಯು ನಾಲ್ಕು ದಿನ ಕಾಲ ಯಶಸ್ವಿಯಾಗಿ ನಡೆದಿದ್ದು, ಗುರುವಾರ ಅನಿವಾರ್ಯ ಕಾರಣಗಳಿಂದ ಇದಕ್ಕೆ ವಿರಾಮ ಹೇಳುತ್ತಿದ್ದೇವೆ. ಕೋವಿಡ್ ಅಲೆ ಮುಗಿದ ಬಳಿಕ ಇಲ್ಲಿಂದಲೇ ಪಾದಯಾತ್ರೆ ಮುಂದುವರಿಯುವುದು ಖಚಿತ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು.

ಗುರುವಾರ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ ಬಳಿಕ ಕಾಂಗ್ರೆಸ್ ಕಚೇರಿಯಿಂದ ಸಿದ್ದರಾಮಯ್ಯ ಜೊತೆಗೂಡಿ ಹೊರಬಂದ ಅವರು ನೆರೆದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಮೂರು ದಿನ ಮೌನಾಚರಣೆ ಎಂದು ಹೇಳಿದ್ದೆ. ಆದರೆ, ಈಗ ಮಾತನಾಡಲೇ ಬೇಕಾದ ಸಮಯ ಬಂದಿದೆ. ಈ ಯಾತ್ರೆ ಇಲ್ಲಿಗೆ ಮುಕ್ತಾಯ ಎನ್ನುವಂತಿಲ್ಲ. ಮತ್ತೆ ಇಲ್ಲಿಂದಲೇ ಯಾತ್ರೆ ಮುಂದುವರಿಯಲಿದೆ. ಇಷ್ಟು ದಿನ ಜನರು ತೋರಿದ ಪ್ರೀತಿಗೆ ನಾವು ಅಭಾರಿ ಆಗಿದ್ದೇವೆ’ ಎಂದರು.

ಎಲ್ಲರನ್ನು ಒಂದೇ ರೀತಿ ಕಾಣುವ ಗುಣ ಸರ್ಕಾರಕ್ಕಿದ್ದರೆ, ಪ್ರಚೋದನಾಕಾರಿ ಹೇಳಿಕೆ ನೀಡಿದ್ದವರ ಮೇಲೆ ಇಂದಾದರೂ ಕೇಸ್ ಹಾಕಿ, ತಮ್ಮ ಧೈರ್ಯ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಮಾದರಿಯಲ್ಲಿಯೇ ನೀವು ಹೋರಾಡಿದ್ದೀರಿ. ಪಾದಯಾತ್ರೆಯಲ್ಲಿ ಭಾಗವಹಿಸಿದ್ದವರು, ನೋಂದಣಿ ಮಾಡಿಕೊಂಡು‌ ಪ್ರಶಂಸನಾ ಪತ್ರ ಪಡೆಯಬೇಕು’ ಎಂದು ಕೋರಿದರು.

ಪಾದಯಾತ್ರಿಗರನ್ನು ಉದ್ದೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಪಾದಯಾತ್ರೆಗೆ ಬೆಂಬಲ ನೀಡಿದ ಜನರಿಗೆ ಕೋಟಿ ನಮನಗಳು. ಕಳೆದ ನಾಲ್ಕು ದಿನದಿಂದ ಅಪಾರ ಬೆಂಬಲ ನೀಡಿದ್ದೀರಿ. ಎರಡೂವರೆ ಕೋಟಿ ಜನರಿಗೆ ಅನುಕೂಲ ಆಗಲಿರುವ ಈ ಯೋಜನೆ ಕಾಂಗ್ರೆಸ್ ಕೂಸು‌. ಬಿಜೆಪಿ ಸರ್ಕಾರ ಎಂದೂ ಈ ಕುರಿತು ಅನೇಕ ಪ್ರಸ್ತಾವ ಮಾಡಲಿಲ್ಲ. ಕಾವೇರಿ ತೀರ್ಪು 2013ರಲ್ಲಿ ಪ್ರಕಟ ಆದ ನಂತರ ನಾರಿಮನ್ ಜೊತೆ ಮಾತನಾಡಿ ಮೇಕೆದಾಟು ಯೋಜನೆ ಸಿದ್ಧಪಡಿಸಿದ್ದು ನಾವೇ’ ಎಂದರು.

ಇಷ್ಟು ವರ್ಷವಾದರೂ ಬೆಂಗಳೂರಿನ ಶೇ 30 ಜನರಿಗೆ ಕುಡಿಯುವ ನೀರು ಕೊಡಲು ಆಗಲಿಲ್ಲ. ಅವರಿಗೆ ಮುಂದಿನ ಐವತ್ತು ವರ್ಷಕ್ಕಾಗಿ ಈ ಯೋಜನೆ ಸಿದ್ಧಪಡಿಸಿದೆವು. ಇದು ಕುಡಿಯುವ‌ ನೀರಿನ ಯೋಜನೆ ಆದ್ದರಿಂದ ಪ್ರಥಮ ಆದ್ಯತೆ ನೀಡಬೇಕಿತ್ತು. ಹೀಗಿದ್ದೂ ಎರಡೂವರೆ ವರ್ಷ ಏನನ್ನೂ ಮಾಡದೇ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ವಿಳಂಬ ದ್ರೋಹ ಮಾಡಿದೆ ಎಂದು ಟೀಕಿಸಿದರು.

ಎರಡು ತಿಂಗಳ ಹಿಂದೆಯೇ ಪಾದಯಾತ್ರೆ ಘೋಷಣೆ ಮಾಡಿದ್ದು, ನಾಲ್ಕು ದಿನ ಯಶಸ್ವಿ ಆಗಿ ನಡೆದಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ತುಮಕೂರು‌ ಮೊದಲಾದ ಜನರು ಉತ್ಸಾಹದಿಂದ ಬಂದಿದ್ದಾರೆ. ಇದು ಜನಪ್ರವಾಹದ ಕಾರ್ಯಕ್ರಮ ಎಂದರು.

ಇದಕ್ಕೂ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ, ಶಿವಕುಮಾರ್ ಜೊತೆಗೆ ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಆರ್‌. ಧ್ರುವನಾರಾಯಣ, ಮಾಜಿ ಸಚಿವರಾದ ರಮೇಶ್ ಕುಮಾರ್, ಚಲುವರಾಯಸ್ವಾಮಿ, ಯು.ಟಿ. ಖಾದರ್‌ ಮತ್ತಿತರರು ಭಾಗವಹಿಸಿದ್ದರು.

ಬೆಳಿಗ್ಗೆಯಿಂದ ಸಿದ್ಧತೆ; ಐದನೇ ದಿನದ ಪಾದಯಾತ್ರೆಗೆ ಕಾಂಗ್ರೆಸ್ ನಾಯಕರು ಕೆಲವು ದಿನಗಳಿಂದ ಸಿದ್ಧತೆ ನಡೆಸಿದ್ದರು. ಬುಧವಾರ ರಾತ್ರಿ ನಾಲ್ಕನೇ ದಿನದ ಪಾದಯಾತ್ರೆ ಮುಕ್ತಾಯದ ಬಳಿಕ ಡಿಕೆಶಿ ಹಾಗೂ ಸುರೇಶ್ ಕನಕಪುರಕ್ಕೆ ತೆರಳಿದರೆ ಉಳಿದ ನಾಯಕರು ಹೋಟೆಲ್‌, ರೆಸಾರ್ಟ್‌ಗಳಲ್ಲಿ ಉಳಿದರು. ಹೊರ ಊರುಗಳಿಂದ ಬಂದವರಿಗೆ ಕೆಂಗಲ್‌ ಬಳಿಯ ಕಲ್ಯಾಣ ಮಂಟಪವೊಂದರಲ್ಲಿ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿತ್ತು.

ಐದನೇ ದಿನವಾದ ಗುರುವಾರ ಬೆಳಿಗ್ಗೆಯಿಂದಲೇ ಸಿದ್ಧತೆಗಳು ನಡೆದಿದ್ದವು. ಕಾಂಗ್ರೆಸ್ ಕಚೇರಿ ಬಳಿ 3 ಸಾವಿರ ಜನರಿಗೆ ಪೊಂಗಲ್‌, ಉಪ್ಪಿಟ್ಟು, ಕೇಸರಿಬಾತ್‌ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಮಾಯಗಾನಹಳ್ಳಿ ಬಳಿ 10 ಸಾವಿರ ಮಂದಿಗೆ ಊಟ ಸಿದ್ಧವಿತ್ತು. ಆದರೆ ಪಾದಯಾತ್ರೆ ಅರ್ಧಕ್ಕೆ ನಿಂತ ಕಾರಣ ಕೆಲವರು ವಾಪಸ್ ಆದರೆ, ಇನ್ನೂ ಕೆಲವು ಮಂದಿ ಊಟ ಮಾಡಿ, ಅಲ್ಲಿಯೇ ನಾಯಕರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿ ತಮ್ಮೂರುಗಳತ್ತ ಹೆಜ್ಜೆ ಹಾಕಿದರು.

ಪಾದಯಾತ್ರೆ ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ರಾಮನಗರ ಎಂಜಿ. ರಸ್ತೆಯ ಮೂಲಕ ಹಾದು ಹೋಗಿ ತರಕಾರಿ ಮಾರುಕಟ್ಟೆ ಬಳಿ ಮೈಸೂರು ರಸ್ತೆಯ ಸೇರುವಂತೆ ಮಾಡಲಾಗಿತ್ತು. ಇನ್ನು ಕೆಂಗಲ್ ಬಳಿಯ ಮಾರ್ಗ ಬೆಂಗಳೂರಿನ ಮಾರ್ಗವನ್ನು ಬದಲಾವಣೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT