ಶನಿವಾರ, ಸೆಪ್ಟೆಂಬರ್ 18, 2021
24 °C
ಚಿಕ್ಕವಿಠಲೇನಹಳ್ಳಿಯಲ್ಲಿ ದುರ್ಘಟನೆ: ರೈತನ ಬಂಧನ

ವಿದ್ಯುತ್ ಪ್ರವಹಿಸಿ ಗಂಡಾನೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನ ಚಿಕ್ಕವಿಠಲೇನಹಳ್ಳಿ ಬಳಿ ಶುಕ್ರವಾರ ಮುಂಜಾನೆ ತೋಟವೊಂದರಲ್ಲಿ ವಿದ್ಯುತ್ ತಗುಲಿ ಸಲಗವೊಂದು ಮೃತಪಟ್ಟಿದೆ.

ಗ್ರಾಮದ ರೈತರೊಬ್ಬರು ಕಾಡುಪ್ರಾಣಿಗಳ ಹಾವಳಿಯಿಂದ ಬೇಸತ್ತು ತೋಟಕ್ಕೆ ತಂತಿಬೇಲಿ ಹಾಕಿಸಿ ವಿದ್ಯುತ್ ಹಾಯಿಸಿದ್ದರು. ರಾತ್ರಿ ವೇಳೆ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಬಂದು ತೋಟಕ್ಕೆ ನುಗ್ಗಲು ಬಂದ ಕಾಡಾನೆಗಳ ಗುಂಪಿನಲ್ಲಿದ್ದ 40 ವರ್ಷದ ಸಲಗ ಬೇಲಿ ದಾಟಲು ಪ್ರಯತ್ನಿಸಿದಾಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದೆ.

ವಿದ್ಯುತ್ ಸ್ಪರ್ಶಿಸಿ ಸಲಗ ಘೀಳಿಟ್ಟಾಗ ಜೊತೆಯಲ್ಲಿದ್ದ ಆನೆಗಳು ಓಡಿಹೋಗಿವೆ ಎಂದು ತಿಳಿದುಬಂದಿದೆ.

ಗ್ರಾಮದ ರೈತ ಶಿವರಾಜು ಜಮೀನಿನಲ್ಲಿ ಮತ್ತೊಬ್ಬ ರೈತ ಗುರುಶಾಂತಯ್ಯ ಗುತ್ತಿಗೆ ಆಧಾರದ ಮೇಲೆ ಟೊಮೆಟೊ ಬೆಳೆದಿದ್ದು, ಕಾಡುಪ್ರಾಣಿಗಳು ಆಗಾಗ ದಾಳಿ ನಡೆಸುತ್ತಿದ್ದ ಕಾರಣ ಜಮೀನಿಗೆ ತಂತಿಬೇಲಿ ನಿರ್ಮಿಸಿ ಪಕ್ಕದಲ್ಲಿದ್ದ ವಿದ್ಯುತ್ ಕಂಬದಿಂದ ಬೇಲಿಗೆ ವಿದ್ಯುತ್ ಹಾಯಿಸಿದ್ದರು. ಇದು ಗಂಡಾನೆಯ ಪ್ರಾಣ ತೆಗೆದುಕೊಂಡಿದೆ.

ವಿಷಯ ತಿಳಿದು ಶುಕ್ರವಾರ ಬೆಳಿಗ್ಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಲಗದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಸ್ಥಳದಲ್ಲೇ ಸಂಸ್ಕಾರ ನಡೆಸಲಾಯಿತು. ಕಳೆದ ತಿಂಗಳು ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಆನೆಯೊಂದು ಅನಾರೋಗ್ಯದಿಂದ ಮೃತಪಟ್ಟಿತ್ತು.

ಅಕ್ರಮವಾಗಿ ವಿದ್ಯುತ್ ಹಾಯಿಸಿ ಗಂಡಾನೆಯ ಪ್ರಾಣ ತೆಗೆದ ಆರೋಪದ ಮೇಲೆ ರೈತ ಗುರುಶಾಂತಯ್ಯ ಅವರ ಮೇಲೆ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಅವರನ್ನು ಬಂಧಿಸಲಾಗಿದೆ.

ವಿಚಾರಣೆ ನಂತರ ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು
ತಿಳಿಸಿದ್ದಾರೆ.

ಸ್ಥಳದಲ್ಲಿ ಎಸಿಎಫ್ ದೇವರಾಜು, ಉಪ ವಲಯ ಅರಣ್ಯಾಧಿಕಾರಿ ದಿನೇಶ್, ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಶಿವಕುಮಾರ್ ಮತ್ತು ಸಿಬ್ಬಂದಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.