ಗುರುವಾರ , ಮೇ 19, 2022
24 °C

ಪತ್ನಿಯ ಕತ್ತು ಕೊಯ್ದ ಪತಿಯೂ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಬೆಂಗಳೂರಿನಲ್ಲೇ ಇರಬೇಕೆಂದು ಪತ್ನಿ ಹಾಗೂ ಹಳ್ಳಿಯಲ್ಲೇ ಇರಬೇಕೆಂದು ಪಟ್ಟುಬಿಡದ ಪತಿಯ ನಡುವೆ ಏರ್ಪಟ್ಟ ಜಗಳ ಇಬ್ಬರ ಸಾವಿನಲ್ಲಿ ಪರ್ಯಾವಸನಗೊಂಡಿರುವ ಘಟನೆ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಗುಡ್ಡೆವೀರನಹೊಸಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಪತ್ನಿ ತನ್ನನ್ನು ತುಂಬಾ ಕೀಳಾಗಿ ನೋಡುತ್ತಾಳೆ ಎಂದು ಕುಪಿತಗೊಂಡ ಗಂಡ ಆಕೆಯ ಗುತ್ತಿಗೆ ಕೊಯ್ದು ಕೊಲೆ ಮಾಡಿದ ಬಳಿಕ ತಾನೂ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಡ್ಡೆವೀರನಹೊಸಳ್ಳಿ ಗ್ರಾಮದ ದೇಶಿಗೌಡ (44) ಆತ್ಮಹತ್ಯೆ ಮಾಡಿಕೊಂಡವರು. ಅವರ ಪತ್ನಿ ಇಂದ್ರ (35) ಕೊಲೆಯಾಗಿದ್ದಾರೆ. ದಂಪತಿಗೆ 16 ವರ್ಷದ ಅಭಿಷೇಕ್‌ ಎಂಬ ಮಗನಿದ್ದಾನೆ. ಗುಡ್ಡೆವೀರನಹೊಸಳ್ಳಿಯ ದೇಶಿಗೌಡ ಪಕ್ಕದ ಬಾಗಿ ನಾಯ್ಕನಹಳ್ಳಿಯ ಇಂದ್ರ ಅವರನ್ನು 18 ವರ್ಷದ ಹಿಂದೆ ವಿವಾಹವಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದರು.

ಕೋವಿಡ್‌ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಗ್ರಾಮಕ್ಕೆ ವಾಪಸ್‌ ಬಂದು ಕೃಷಿ ಚಟುವಟಿಕೆ, ಕೋಳಿ ಅಂಗಡಿ ಮತ್ತು ಚಿಲ್ಲರೆ ಅಂಗಡಿ ವ್ಯಾಪಾರ ಮಾಡುತ್ತಿದ್ದರು. ಆದರೂ ಪತ್ನಿ ಇಂದ್ರ ತಾವು ಇಲ್ಲಿ ಇರುವುದು ಬೇಡ. ಬೆಂಗಳೂರಿಗೆ ಹೋಗೋಣವೆಂದು ಗಂಡನಿಗೆ ಒತ್ತಾಯಿಸುತ್ತಿದ್ದರು. ಇದಕ್ಕೆ ಒಪ್ಪದೆ ಹಳ್ಳಿಯಲ್ಲೇ ಇರಬೇಕೆಂದು ದೇಶಿಗೌಡ ಹಠ ಹಿಡಿದಿದ್ದರಿಂದ ಇಬ್ಬರ ನಡುವೆ ಜಗಳ ನಡೆದಿತ್ತು.

ಅಂಗಡಿ ವ್ಯಾಪಾರ ಮಾಡುತ್ತಿದ್ದ ಪತ್ನಿ ತನಗೆ ಯಾವುದೇ ಹಣ ನೀಡದೆ ತಾನೇ ಇಟ್ಟಿಕೊಳ್ಳುತ್ತಾಳೆ. ತನ್ನನ್ನು ತುಂಬಾ ನಿಕೃಷ್ಟವಾಗಿ ನೋಡುತ್ತಿದ್ದಳು. ಆದ್ದರಿಂದ ಆಕೆಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರ ಬರೆದಿಟ್ಟಿದ್ದಾರೆ. ಮನೆಯಲ್ಲಿ ಮಲಗಿದ್ದ ಮಗ ಅಭಿಷೇಕ್‌ ಎದ್ದು ನೋಡಿದಾಗ ತಾಯಿ ಕೊಲೆಯಾಗಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ, ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾನೆ. ಹುಡುಕಾಡಿದಾಗ ಜಮೀನಿನಲ್ಲಿ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃಷ್ಣ, ಕೋಡಿಹಳ್ಳಿ ಸಬ್‌ ಇನ್‌ಸ್ಪೆಕ್ಟರ್‌ ಅನಂತ್‌ರಾಮ್‌ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.