ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿಗೆ ವಹಿಸಲು ಸಭೆ ನಿರ್ಧಾರ

ಅಂಬೇಡ್ಕರ್ ಅಭಿವೃದ್ಧಿ ನಿಗಮದ ₹2ಕೋಟಿ ಅನುದಾನ ದುರಪಯೋಗ: ಆರೋಪ
Last Updated 30 ಸೆಪ್ಟೆಂಬರ್ 2020, 4:33 IST
ಅಕ್ಷರ ಗಾತ್ರ

ಮಾಗಡಿ: ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಮಂಜೂರಾಗಿದ್ದ ₹2ಕೋಟಿ ಅನುದಾನದಲ್ಲಿ ದಲಿತ ಕಾಲೊನಿಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸದೆ ದುರುಪಯೋಗವಾಗಿದೆ. ತನಿಖೆ ನಡೆಸುವಂತೆ ಎಸಿಬಿಗೆ ವಹಿಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಪ್ಪ ತಿಳಿಸಿದರು.

ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿ 16ನೇ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಎಸ್‌ಸಿಪಿ ಹಾಗೂ ಟಿಎಸ್‌ಪಿ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ ಜೆಸಿಬಿ ಬಳಸಿ ರಾತ್ರೋರಾತ್ರಿ ಕಳಪೆ ಕಾಮಗಾರಿ ಮಾಡಲಾಗಿದೆ. ನಕಲಿ ಬಿಲ್ ತಯಾರಿಸಿ ಅನುದಾನ ದುರುಪಯೋಗವಾಗಿದೆ. ಈ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ತಾಲ್ಲೂಕು ಪಂಚಾಯಿತಿ ನಿರ್ಣಯದ ಪತ್ರಕ್ಕೂ ಮನ್ನಣೆ ಸಿಗದೆ ನಿರಾಕರಿಸಲಾಗಿದೆ. ಎಸ್‌.ಬ್ಯಾಡರಹಳ್ಳಿ ಕಾಲೊನಿಯಲ್ಲಿ ಕಾಮಗಾರಿ ನಡೆಸದೆ ₹90ಲಕ್ಷ ಹಣ ದುರುಪಯೋಗವಾಗಿದೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ ಎಂದರು.

ಜಿಲ್ಲಾಮಟ್ಟದ ಕೆಲ ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಮಾತಿಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಆಹಾರ ಪಡಿತರ ವಿತರಕರು ನ್ಯಾಯಬೆಲೆ ಅಂಗಡಿಗಳ ಮುಂದೆ ಪದಾರ್ಥಗಳ ಬೆಲೆ ನಮೂದಿಸಿಲ್ಲ. ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ರಸಗೊಬ್ಬರ ಕೊರತೆ ಇದೆ. ಅಲ್ಲದೆ, ಕೊರೊನಾ ಸೋಂಕಿನಿಂದ ಬಡವರ ಬದುಕು ಹೈರಾಣಾಗಿದೆ ಎಂದರು.

ತಾಲ್ಲೂಕು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್ ಮಾತನಾಡಿ,ಕಾಮಗಾರಿ ನಡೆಸದೆ ಹಣ ದುರುಪಯೋಗವಾಗಿರುವ ಬಗ್ಗೆ ಎಸಿಬಿ ತನಿಖೆ ನಡೆಸದಿದ್ದರೆ ಸ್ಥಾನಕ್ಕೆ ರಾಜೀನಾಮೆ ನೀಡಿ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಇಒ ಟಿ.ಪ್ರದೀಪ್ ಮಾತನಾಡಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಒಂದು ವಾರದ ಅವಧಿ ನೀಡಲಾಗಿದೆ ಎಂದರು.

ಸದಸ್ಯ ಎಂ.ಎಸ್‌ ಸುರೇಶ್ ಮಾತನಾಡಿ, ಕೊರೊನಾ ಸೋಂಕಿತರ ಸಂಖ್ಯೆ ತಾಲ್ಲೂಕಿನಲ್ಲಿ ಜಾಸ್ತಿಯಗುತ್ತಿದೆ. ಸೋಂಕು ಹರಡದಂತೆ ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಆರ್.ಆರ್.ಆಸ್ಪತ್ರೆಗೆ ದಾಖಲಾಗಿದ್ದ 24 ಜನರು ಮೃತರಾಗಿದ್ದಾರೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಜಿ.ನರಸಿಂಹಮೂರ್ತಿ ಮಾತನಾಡಿ, ಆರ್.ಆರ್.ಆಸ್ಪತ್ರೆ ವೈದ್ಯರು ಸೋಂಕಿತರನ್ನು ಕೈದಿಗಳಂತೆ ನೋಡುತ್ತಿದ್ದಾರೆ ಎಂದು ದೂರಿದರು.

ತಾ.ಪಂ.ಸದಸ್ಯ ಹನುಮಂತರಾಯಪ್ಪ, ಎಂ.ಎಸ್.ಸುರೇಶ್ ಮಾತನಾಡಿ, ಕೊರೊನಾ ಸೋಂಕಿನ ನಡುವೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವುದು ಬೇಡ. ಚುನಾವಣೆ ಮುಂದೂಡುವಂತೆ ನಿರ್ಣಯ ಕೈಗೊಳ್ಳಬೇಕು ಎಂದರು.

ಸದಸ್ಯೆ ಸುಗುಣಕಾಮರಾಜ್ ಮಾತನಾಡಿ, ಸೋಲೂರು ಹೋಬಳಿಯ ಅಭಿವೃದ್ಧಿಗೆ ಒತ್ತು ನೀಡದೆ ಕಡೆಗಣಿಸಲಾಗಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಅಂಬಿಕಾ ನರಸಿಂಹಮೂರ್ತಿ, ಸದಸ್ಯರಾದ ಹನುಮೇಗೌಡ, ಕೆ.ಎಚ್.ಶಿವರಾಜ್, ವೆಂಕಟೇಶ್, ಗೀತಾಗಂಗರಂಗಯ್ಯ, ದಿವ್ಯಾರಾಣಿ ಚಂದ್ರಶೇಖರ್, ರತ್ನಮ್ಮ, ಸುಮಾರಮೇಶ್, ಶಿವಮ್ಮ ರಾಮಣ್ಣ ಮಾತನಾಡಿದರು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಣ್ಣ, ತಾಲ್ಲೂಕು ವೈದ್ಯಾಧಿಕಾರಿ ಡಾ.ಸತೀಶ್, ತಾಲ್ಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಆರ್.ರಂಗನಾಥ್, ವಲಯ ಅರಣ್ಯ ಅಧಿಕಾರಿ ಪುಷ್ಪಲತಾ, ಕೃಷಿ ಅಧಿಕಾರಿ ಮಹೇಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಗಂಗಾಧರ್, ತಾ.ಪಂ ಕಚೇರಿ ವ್ಯವಸ್ಥಾಪಕ ಸಚ್ಚಿದಾನಂದಮೂರ್ತಿ ಇತರೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT