ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಹಸಿರು ವಲಯದಲ್ಲೀಗ ‘ಕೆಂಪು’ ಭೀತಿ

ಕಾರಾಗೃಹ ಸೀಲ್‌ಡೌನ್‌: ಸುತ್ತಮುತ್ತಲಿನ ಪ್ರದೇಶಗಳಲ್ಲೂ ಓಡಾಟಕ್ಕೆ ನಿರ್ಬಂಧ
Last Updated 24 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಯಾವುದೇ ಕೋವಿಡ್‌-19 ಪ್ರಕರಣಗಳು ವರದಿಯಾಗದೇ ಹಸಿರು ವಲಯವಾಗಿ ಬೀಗುತ್ತಿದ್ದ ರಾಮನಗರವೀಗ ’ಕೆಂಪು ವಲಯ’ಕ್ಕೆ ಜಾರಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

ಇಲ್ಲಿನ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದ ಬೆಂಗಳೂರಿನ ಪಾದರಾಯನಪುರ ದಾಂದಲೆ ಪ್ರಕರಣದ 121 ಆರೋಪಿಗಳ ಪೈಕಿ ಐವರಲ್ಲಿ ಕೋವಿ‌ಡ್‌-19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಇಲ್ಲಿದ್ದ ಎಲ್ಲ ಆರೋಪಿಗಳು ಮತ್ತೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ. ಇದೀಗ ಜಿಲ್ಲಾಧಿಕಾರಿಗಳು ಜೈಲು ಹಾಗೂ ಸುತ್ತಲಿನ 100 ಮೀಟರ್‌ ಪ್ರದೇಶವನ್ನು ಕಂಟೈನ್‌ಮೆಂಟ್‌ ಝೋನ್‌ ಎಂದು ಘೋಷಿಸಿದ್ದಾರೆ. ಇಲ್ಲಿನ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಲಿವೆ. ಜತೆಗೆ ಸುತ್ತಲಿನ ಒಂದು ಕಿ.ಮೀ. ಪ್ರದೇಶವನ್ನು ಸಿವಿಯರ್‌ ಝೋನ್‌ ಎಂದು ಗುರುತಿಸಲಾಗಿದ್ದು, ಐದು ಕಿ.ಮೀ. ವ್ಯಾಪ್ತಿಯೊಳಗಿನ ಪ್ರದೇಶ ಕೊರೊನಾ ಬಫರ್ ಝೋನ್‌ ಘೋಷಣೆಯಾಗಿದೆ.

ಜಿಲ್ಲೆಯಲ್ಲಿ ಒಂದೂ ಪಾಸಿಟಿವ್‌ ಪ್ರಕರಣಗಳು ವರದಿಯಾಗದ ಹಿನ್ನೆಲೆಯಲ್ಲಿ ಗುರುವಾರವಷ್ಟೇ ಲಾಕ್‌ಡೌನ್‌ ಸಡಿಲಿಕೆ ಆಗಿದ್ದು, ಹಲವು ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿದ್ದವು. ವಾಹನಗಳ ಓಡಾಟವೂ ಹೆಚ್ಚಿತ್ತು. ಜನಜೀವನ ಒಂದು ಹಂತಕ್ಕೆ ಸಾಮಾನ್ಯ ಸ್ಥಿತಿಗೆ ತಲುಪುತ್ತಿದೆ ಎಂಬ ಆಶಾಭಾವನೆ ನಡುವೆಯೇ ಗಲಭೆಕೋರರ ಪಾಸಿಟಿವ್‌ ಪ್ರಕರಣಗಳಿಂದಾಗಿ ಇಲ್ಲಿನ ಚಿತ್ರಣವೇ ಬದಲಾಗಿದೆ. ಜನರು ಮನೆ ಬಿಟ್ಟು ಹೊರಗೆ ಬರಲು ಹೆದರುವಂತೆ ಆಗಿದೆ.

ಜೈಲಿನ ಆವರಣದ ಒಳಗೇ ಅಲ್ಲಿನ ಸಿಬ್ಬಂದಿ ವಸತಿ ಗೃಹಗಳೂ ಇವೆ. ಇದೀಗ ಜಿಲ್ಲಾಡಳಿತದ ಕ್ರಮದಿಂದ ಈ ಕುಟುಂಬಗಳು ಅತಂತ್ರವಾಗುವ ಸಾಧ್ಯತೆ ಇದೆ. ಒಂದು ವೇಳೆ ಜೈಲಿನ ಎಲ್ಲ ಸಿಬ್ಬಂದಿ ಹೋಮ್‌ ಕ್ವಾರಂಟೈನ್‌ಗೆ ಜಿಲ್ಲಾಡಳಿತ ಮುಂದಾದಲ್ಲಿ ಈ ಕುಟುಂಬಗಳು ಗೃಹ ಬಂಧನದಲ್ಲಿ ಇರುವುದು ಅನಿವಾರ್ಯ ಆಗಲಿದೆ. ಜತೆಗೆ ಜೈಲು ಸುತ್ತಲಿನ ಹಲವು ಪ್ರದೇಶಗಳಲ್ಲೂ ಜನರ ಓಡಾಟಕ್ಕೆ ನಿರ್ಬಂಧ ಹೇರಲು ಚಿಂತನೆ ನಡೆದಿದೆ.

ಪೊಲೀಸರು, ಅಧಿಕಾರಿಗಳಿಗೂ ಕ್ವಾರಂಟೈನ್‌?: ಪಾದರಾಯನಪುರ ಆರೋಪಿಗಳ ಸ್ಥಳಾಂತರ ಪ್ರಕ್ರಿಯೆಯಲ್ಲಿ ಸುಮಾರು 90ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಕೆಎಸ್‌ಆರ್‌ಟಿಸಿಯ ಹತ್ತಕ್ಕೂ ಹೆಚ್ಚು ಬಸ್‌ ಚಾಲಕರು ಪಾಲ್ಗೊಂಡಿದ್ದರು. ಜತೆಗೆ ಏಳು ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಜೈಲಿಗೆ ತೆರಳಿ ಆರೋಪಿಗಳ ತಪಾಸಣೆ ನಡೆಸಿದ್ದರು. ನಗರಸಭೆಯ ಕೆಲವು ಸಿಬ್ಬಂದಿ ಜೈಲಿಗೆ ತೆರಳಿ ಮಾಸ್ಕ್‌, ಸ್ಯಾನಿಟೈಸರ್ವಿತರಿಸಿದ್ದರು. ಸೋಂಕು ಧೃಡಪಟ್ಟ ಕಾರಣ ಈ ಎಲ್ಲ ಸಿಬ್ಬಂದಿಯನ್ನು ತಪಾಸಣೆ ನಡೆಸಿ ಅಗತ್ಯಬಿದ್ದಲ್ಲಿ ಕ್ವಾರಂಟೈನ್‌ಗೆ ಒಳಪಡಿಸುವ ಸಾಧ್ಯತೆ ಇದೆ.

ಇವರು ಮಾತ್ರವಲ್ಲದೇ ಇವರ ಸಂಪರ್ಕಕ್ಕೆ ಬಂದಿರುವ ಕುಟುಂಬದ ಸದಸ್ಯರಿಗೂ ಇದೀಗ ಕ್ವಾರಂಟೈನ್‌ ಭೀತಿ ಎದುರಾಗಿದೆ. ಜತೆಗೆ ಜೈಲಿಗೆ ಭೇಟಿ ನೀಡಿದ್ದ ಹಿರಿಯ ಅಧಿಕಾರಿಗಳಿಗೂ ತಪಾಸಣೆ ಅನಿವಾರ್ಯ ಆಗಲಿದೆ. ಇವರು ರಾಮನಗರದ ಇತರ ಸಾರ್ವಜನಿಕರ ಸಂಪರ್ಕ ಹೊಂದಿರುವ ಸಾಧ್ಯತೆಯೂ ಇದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಜೈಲು ಸುತ್ತಮುತ್ತ ಇರುವ ವಡೇರಹಳ್ಳಿ ಮೊದಲಾದ ಪ್ರದೇಶಗಳ ಜನರಲ್ಲಿ ಆತಂಕ ಹೆಚ್ಚಿದೆ. ಕೆಲವರು ಶುಕ್ರವಾರ ಮುಂಜಾನೆ ಜೈಲಿನ ಮೇಲೆ ಕಲ್ಲು ತೂರಾಟ ನಡೆಸಿದರು ಎಂದೂ ಹೇಳಲಾಗುತ್ತಿದೆ.

ಕೈಗಾರಿಕೆಗಳಿಗೂ ಆಘಾತ: ಕೋವಿಡ್‌-19 ಪ್ರಕರಣಗಳು ಇಲ್ಲದ ಜಿಲ್ಲೆಗಳಲ್ಲಿ ಜಿಲ್ಲಾ ಕೇಂದ್ರದ ಹೊರಗೆ, ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳ ಆರಂಭಕ್ಕೆ ರಾಜ್ಯ ಸರ್ಕಾರ ಗುರುವಾರ ಹಸಿರು ನಿಶಾನೆ ತೋರಿತ್ತು. ಬಿಡದಿ ಕೈಗಾರಿಕಾ ಪ್ರದೇಶ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶವು ಇನ್ನೂ ಗ್ರಾ.ಪಂ. ವ್ಯಾಪ್ತಿಯಲ್ಲಿಯೇ ಇದ್ದು, ಇಲ್ಲಿ ಆದ್ಯತಾ ವಲಯದಲ್ಲಿ ಬರುವ ಕಾರ್ಖಾನೆಗಳ ಆರಂಭಕ್ಕೆ ಸಿದ್ಧತೆ ನಡೆದಿತ್ತು. ಆದರೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶುಕ್ರವಾರ ಪರಿಷ್ಕೃತ ಆದೇಶ ಹೊರಡಿಸಿದ್ದು, ರಾಮನಗರ ಜಿಲ್ಲೆಯನ್ನು ಈ ಪಟ್ಟಿಯಿಂದ ಹೊರಗೆ ಇಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿನ ಕೈಗಾರಿಕೆಗಳು ಬಾಗಿಲು ಮುಚ್ಚುವುದು ಅನಿವಾರ್ಯ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT