ವಿದ್ಯಾರ್ಥಿ ಬೆಳವಣಿಗೆ: ಶಿಕ್ಷಕರ ಪಾತ್ರ ಅನನ್ಯ

ಚನ್ನಪಟ್ಟಣ: ‘ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಅನನ್ಯವಾದುದು’ ಎಂದು ಡಿವೈಎಸ್ಪಿ ಕೆ.ಎನ್. ರಮೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ನಾಗವಾರ ಒಕ್ಕಲಿಗರ ಸಾರ್ವಜನಿಕ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ ಸ್ನೇಹ ಬಳಗದ ವತಿಯಿಂದ ಪಟ್ಟಣದ ಸಾರ್ವಜನಿಕ ವಿದ್ಯಾರ್ಥಿ ನಿಲಯದ ದೇವಮ್ಮ-ಚಿಕ್ಕಣ್ಣ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ವಿದ್ಯಾರ್ಥಿ ತನ್ನ ಪ್ರತಿಭೆಯೊಂದರಿಂದಲೇ ಉನ್ನತಿ ಸಾಧಿಸಲು ಸಾಧ್ಯವಿಲ್ಲ. ಗಿಡವೊಂದು ಹೆಮ್ಮರವಾಗಿ ಬೆಳೆಯಲು ಭೂಮಿ, ನೀರು, ಗೊಬ್ಬರ, ಪೋಷಕಾಂಶ ಬೇಕು. ಅಂತೆಯೇ ವಿದ್ಯಾರ್ಥಿಯೊಬ್ಬ ಅಧಿಕಾರಿ, ವೈದ್ಯ, ವಿಜ್ಞಾನಿ, ಉದ್ಯಮಿ, ಪ್ರಗತಿಪರ ರೈತ ಹೀಗೆ ಭವಿಷ್ಯದಲ್ಲಿ ತನ್ನಿಚ್ಛೆಯಂತೆ ಬೆಳೆಯಲು ಪೋಷಕರ ತ್ಯಾಗ ಹಾಗೂ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಇದನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ವಿದ್ಯಾಸಂಸ್ಥೆ ಕಾರ್ಯದರ್ಶಿ ಸಿ. ಚನ್ನಪ್ಪ ಮಾತನಾಡಿ, ಹೆತ್ತವರು ಹಾಗೂ ಅಕ್ಷರ ಕಲಿಸಿದ ಗುರುಗಳ ಋಣ ತೀರಿಸುವುದು ಅಸಾಧ್ಯ. ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ತಮಗೆ ಶಿಕ್ಷಣ ಕಲಿಸಿದ ಶಿಕ್ಷಕರನ್ನು ಒಂದೆಡೆ ಕರೆದು ಸತ್ಕರಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಅಧ್ಯಕ್ಷತೆವಹಿಸಿದ್ದ ವಿದ್ಯಾಸಂಸ್ಥೆ ನಿರ್ದೇಶಕ ಸಿಂ.ಲಿಂ. ನಾಗರಾಜು ಮಾತನಾಡಿ, ಕೊರೊನಾ ಹಾಗೂ ಮತ್ತಿತರರ ಕಾರಣಗಳಿಂದಾಗಿ ಕಳೆದ ಎರಡು ವರ್ಷಗಳಿಂದ ಶಿಕ್ಷಣ ಇಲಾಖೆಯು ನಿಂತ ನೀರಾಗಿತ್ತು. ತಾಲ್ಲೂಕಿನ ಅಲ್ಲಲ್ಲಿ ನಡೆಯುತ್ತಿರುವ ಶಿಕ್ಷಕರ ದಿನಾಚರಣೆ ಹಾಗೂ ಗುರವಂದನಾ ಕಾರ್ಯಕ್ರಮಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೇರಪಣೆಯಾಗುತ್ತಿವೆ ಎಂದು ತಿಳಿಸಿದರು.
ಸ್ನೇಹ ಬಳಗದ ಸಂಚಾಲಕ ನಾ.ಶಿ. ರಾಜು ಪ್ರಾಸ್ತಾವಿಕ ಮಾತನಾಡಿದರು. ರಮ್ಯಾ ನಾ.ಶಿ. ರಾಜು ಹಾಗೂ ವೇಣುಗೋಪಾಲ್ ನಿರೂಪಿಸಿದರು.
ವಿದ್ಯಾಸಂಸ್ಥೆ ಖಜಾಂಚಿ ಎಸ್.ಟಿ. ನಾರಾಯಣಗೌಡ, ಸ್ನೇಹ ಬಳಗದ ಪದಾಧಿಕಾರಿಗಳಾದ ವೇಣುಗೋಪಾಲ್, ಕಾಂತರಾಜು, ಸುರೇಶ್, ಪತ್ರಕರ್ತ ಎಂ. ಶಿವಮಾದು, ಶಿಕ್ಷಣ ಸಂಯೋಜಕ ಚಕ್ಕೆರೆ ಯೋಗೇಶ್, ಬಿ.ಆರ್.ಪಿ ಕೆ.ಪಿ. ರಾಘವೇಂದ್ರ ಭಾಗವಹಿಸಿದ್ದರು. ನಿವೃತ್ತ ಶಿಕ್ಷಕರಾದ ಎಸ್. ಚನ್ನಮ್ಮ, ಮಂಚಯ್ಯ, ಚಿ.ಸಿ. ಪುಟ್ಟಸ್ವಾಮಿಗೌಡ, ಮುತ್ತರಾಯಪ್ಪ, ಎನ್. ಶಿವರಾಜು, ಬಿ. ಚಿಕ್ಕೇಗೌಡ, ಎನ್.ಎಸ್. ರಾಮಕೃಷ್ಣ, ಅಪ್ಪಾಜಿ, ಎಸ್. ಸತ್ಯಸಂಧಾಚಾರ್, ವಿ. ವಿಜಯನ್, ಟಿ. ನಾಮದೇವ್, ಎ. ಅಂಕಯ್ಯ, ವಿ. ತಿಮ್ಮರಾಜು, ಶಿವಲಿಂಗಯ್ಯ, ಸಿ.ಬಿ. ಕುಮಾರ್, ಡಿ. ರಂಗಸ್ವಾಮಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.