ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರ ಮೈ ಸುಡುತ್ತಿದೆ ‘ಅಗ್ನಿಕೊಂಡ’

ಕಳೆದ ಮೂರು ವರ್ಷದಲ್ಲಿ 10ಕ್ಕೂ ಹೆಚ್ಚು ಅವಘಡ: ಇಬ್ಬರ ಸಾವು
Last Updated 25 ಫೆಬ್ರುವರಿ 2021, 4:18 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ವಿವಿಧೆಡೆ ಜಾತ್ರೆ, ಗ್ರಾಮದೇವತೆಗಳ ಹಬ್ಬ ನಡೆದಿದ್ದು, ಈ ಸಂದರ್ಭ ಅಗ್ನಿಕೊಂಡಗಳಲ್ಲಿ ಬಿದ್ದು ಗಾಯಗೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಈ ಸಂದರ್ಭಗಳಲ್ಲಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎನ್ನುವುದು ಜನರ ದೂರು.

ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ದೇವಾಲಯಗಳಿವೆ. ಇದಲ್ಲದೆ ಪ್ರತಿ ಹಳ್ಳಿಯಲ್ಲೂ ಪ್ರತಿ ವರ್ಷ ಗ್ರಾಮದೇವತೆಗಳ ಹಬ್ಬವನ್ನು ಆಚರಿಸುತ್ತಾ ಬರಲಾಗಿದೆ. ಈ ವೇಳೆ ಅಗ್ನಿಕೊಂಡ ಮಹೋತ್ಸವವೂ ನಡೆಯುತ್ತಾ ಬಂದಿದೆ. ಆದರೆ, ಈಚಿನ ವರ್ಷಗಳಲ್ಲಿ ಆಚರಣೆ ವೇಳೆ ಎಚ್ಚರಿಕೆ ತಪ್ಪುತ್ತಿರುವ ಪರಿಣಾಮ ಕೊಂಡ ಹಾಯುವ ಅರ್ಚಕರು, ಭಕ್ತರು ಕೊಂಡದಲ್ಲಿ ಗಾಯಗೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಾರದ ಅವಧಿಯಲ್ಲೇ ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿಯಲ್ಲಿ ಹಾಗೂ ಚನ್ನಪಟ್ಟಣ ತಾಲ್ಲೂಕಿನ ಸುಳ್ಳೇರಿಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.

ಕಾರಣವೇನು?: ಕೊಂಡಕ್ಕಾಗಿ ಹೆಚ್ಚು ಸೌದೆ ಬಳಕೆ ಮಾಡುತ್ತಿರುವುದು ಇಂತಹ ಪ್ರಕರಣಗಳ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಭಕ್ತರು ಕೊಂಡಕ್ಕೆ ಸೌದೆ ಅರ್ಪಿಸುವಾಗ ದೊಡ್ಡ ದೊಡ್ಡ ಮರದ ದಿಮ್ಮಿ, ಹಸಿ ಸೌದೆಯನ್ನೂ ಹಾಕುತ್ತಿದ್ದಾರೆ. ಇಂತಹವು ಬೆಂಕಿಯಲ್ಲಿ ಬೇಯದೇ, ಕೊಂಡದಲ್ಲೇ ಉಳಿಯುತ್ತಿವೆ. ಅವುಗಳನ್ನು ತೆರವುಗೊಳಿಸದೇ ಹೋದ ಸಂದರ್ಭಗಳಲ್ಲಿ ಕಾಲಿಗೆ ಸಿಕ್ಕು ಬೀಳುವ ಸಾಧ್ಯತೆ ಹೆಚ್ಚಾಗಿದೆ. ಕೊಂಡೋತ್ಸವ ನಡೆಸಲು ಧಾರ್ಮಿಕ ದತ್ತಿ ಇಲಾಖೆಯಲ್ಲಿ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿಲ್ಲ. ಈ ಸಂದರ್ಭ ಆಂಬುಲೆನ್ಸ್, ತುರ್ತು ವೈದ್ಯಕೀಯ ಸೇವೆ, ಪೊಲೀಸ್ ಭದ್ರತೆ ಸೇರಿದಂತೆ ಯಾವ ನಿಯಮಗಳನ್ನೂ ಅನುಸರಿಸುತ್ತಿಲ್ಲ.

ಹತ್ತು ಹಲವು ಪ್ರಕರಣ ದಾಖಲು: 2018ರಿಂದ ಈಚಿನವರೆಗೂ ಜಿಲ್ಲೆಯಲ್ಲಿ ಇಂತಹ 10ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. 2018ರ ಏಪ್ರಿಲ್‍ನಲ್ಲಿ ಉಯ್ಯಂಬಳ್ಳಿ ಮಾರಮ್ಮನ ಕೊಂಡೋತ್ಸವದ ವೇಳೆ ಅರ್ಚಕ ರವಿ ಕೊಂಡದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದರು. ಕನಕಪುರ ತಾಲ್ಲೂಕಿನ ಕೆರಳಾಳುಸಂದ್ರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮಾರಮ್ಮದೇವಿಯ ಅರ್ಚಕ ಕೊಂಡಕ್ಕೆ ಬಿದ್ದು ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದರು.

ಕೈಲಾಂಚ ಹೋಬಳಿಯ ವಡ್ಡರಹಳ್ಳಿ ಗ್ರಾಮದ ಬಸವೇಶ್ವರ ಅಗ್ನಿಕೊಂಡ ಹಾಯುವಾಗ ಅರ್ಚಕ ಪುಟ್ಟಯ್ಯ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ರೇವಣಸಿದ್ದೇಶ್ವರ ಬೆಟ್ಟದ ಬಸವೇಶ್ವರ ಅಗ್ನಿಕೊಂಡ ಸಂದರ್ಭದಲ್ಲಿ ಅರ್ಚಕ ವಿಜಯಕುಮಾರ್ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು, ಆರು ತಿಂಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡರು. ಇದೇ ವೇಳೆ ವಿಜಯಕುಮಾರ್ ಅವರನ್ನು ಮೇಲೆತ್ತಲು ಹೋದ ಮಂಜುನಾಥ್ ಮತ್ತು ರುದ್ರೇಶ್ ಅವರಿಗೂ ತೀವ್ರ ಗಾಯವಾಗಿತ್ತು. 5 ವರ್ಷಗಳ ಹಿಂದೆ ಇದೇ ಕೊಂಡೊತ್ಸವದ ವೇಳೆ ಅರ್ಚಕ ವಿನೋದ್ ಗಾಯಗೊಂಡಿದ್ದರು.

ಮಾಗಡಿಯ ಕುದೂರಿನಲ್ಲಿ ಈ ವರ್ಷ ನಡೆದ ಲಕ್ಷ್ಮೀದೇವಿ ಕೊಂಡೋತ್ಸವದಲ್ಲಿ ರಮೇಶ್ ಎಂಬ ಭಕ್ತ ಕೊಂಡ ಹಾಯುವಾಗ ಬಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.

ಚನ್ನಪಟ್ಟಣ ವಿರೂಪಾಕ್ಷಿಪುರದ ಮಾರಮ್ಮ ದೇವಿಯ ಅರ್ಚಕ ಹರೀಶ್ ಕೊಂಡ ಹಾಕುವ ಸಂದರ್ಭದಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದರು. ಸುಳ್ಳೇರಿ ಪಟ್ಲದಮ್ಮನ ಕೊಂಡದ ಸಂದರ್ಭದಲ್ಲಿ ಕೊಂಡ ಹಾಯುವ ವೇಳೆ ಗ್ರಾಮಸ್ಥ ರಾಜೇಶ ಎಂಬಾತ ಬಿದ್ದು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT