ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಗಳರದೊಡ್ಡಿ: ಗುಡಿಸಲಲ್ಲೇ ಜನರ ವಾಸ

ಮೂಲಸೌಕರ್ಯಗಳಿಂದ ವಂಚಿತವಾದ ಗ್ರಾಮ: ಜನಪ್ರತಿನಿಧಿಗಳ ನಿರ್ಲಕ್ಷ್ಯ ಆರೋಪ
Last Updated 5 ಜೂನ್ 2019, 15:41 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಕೂಟಗಲ್ ಹೋಬಳಿಯ ತಿಗರಳದೊಡ್ಡಿ ಗ್ರಾಮದ ಜನರು ಇನ್ನೂ ಗುಡಿಸಲಿನಲ್ಲಿಯೇ ವಾಸವಿದ್ದು, ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಪ್ರಸ್ತುತ ಮಾಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಈ ಗ್ರಾಮವು 2008ರ ಕ್ಷೇತ್ರ ಪುನರ್‌ ವಿಂಗಡನೆಗೆ ಮುನ್ನ ರಾಮನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಇತ್ತು. 1994ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್‌.ಡಿ. ದೇವೇಗೌಡರು ಈ ಗುಡಿಸಲುಗಳನ್ನು ಕಂಡು ಒಂದು ವರ್ಷದೊಳಗೆ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರಂತೆ. ಆ ಮಾತಿಗೆ 25 ವರ್ಷ ಕಳೆದಿದೆ. ಅವರ ಪುತ್ರ ಎಚ್‌.ಡಿ. ಕುಮಾರಸ್ವಾಮಿ ಸಹ ಎರಡು ಬಾರಿ ಮುಖ್ಯಮಂತ್ರಿಯಾದರೂ ಜನರ ಬೇಡಿಕೆ ಮಾತ್ರ ಈಡೇರಿಲ್ಲ.

ಈ ಗ್ರಾಮದಲ್ಲಿ 35–-40 ಕುಟುಂಬಗಳು ವಾಸವಿದ್ದು, 200ಕ್ಕೂ ಹೆಚ್ಚು ಜನರಿದ್ದಾರೆ. ಬಹುತೇಕ ಕುಟುಂಬಗಳಿಗೆ ಶೌಚಾಲಯವಿಲ್ಲ. ಆದರೆ ಈ ಗ್ರಾಮವನ್ನು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಲಾಗಿದೆ!

ಮಹಿಳೆಯರು, ಪುರುಷರಾದಿಯಾಗಿ ಎಲ್ಲರಿಗೂ ಬಯಲೇ ಶೌಚಾಲಯವಾಗಿದೆ. ಪಕ್ಕದ ಜಮೀನುಗಳಿಗೆ ಹೋದರೆ, ಜಮೀನು ಮಾಲೀಕರಿಂದ ಬೈಗುಳ ಕೇಳಬೇಕು. ಮಹಿಳೆಯರಂತೂ ಕತ್ತಲಾಗುವುದನ್ನೇ ಕಾದು, ಕಾಡು ಪ್ರಾಣಿಗಳ ದಾಳಿಯ ಭೀತಿಯಲ್ಲಿಯೇ ಶೌಚಕ್ಕೆ ಹೋಗಬೇಕು. ಅಂತಹ ದುಸ್ಥಿತಿ ಈ ಗ್ರಾಮದಲ್ಲಿದೆ.

ಗುಡಿಸಲಿನಲ್ಲಿ ಸ್ನಾನ ಮಾಡಿದ ಸ್ನಾನ ಮಾಡಿದ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೂ ಇಲ್ಲ. ಬೀದಿ ದೀಪ ಕೆಟ್ಟು ನಿಂತು ಎರಡು ತಿಂಗಳಾಗಿದೆ ಎಂದು ಜನರು ದೂರುತ್ತಾರೆ.

ಅಧಿಕಾರಿಗಳು ಹೇಳುವುದೇನು?: ‘ ತಿಗಳರದೊಡ್ಡಿ ಗ್ರಾಮದ ಎಲ್ಲರನ್ನೂ ಮನೆ ಕಟ್ಟಿಕೊಳ್ಳಲು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಜನರೇ ಮುಂದೆ ಬರುತ್ತಿಲ್ಲ‘ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ದೂರುತ್ತಾರೆ.

ಕಾಡು ಪ್ರಾಣಿಗಳ ಭಯ: ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ತಿಗಳರ ದೊಡ್ಡಿ ಇದ್ದು, ಚಿರತೆ ಮತ್ತು ಕರಡಿ ಕಾಟ ಹೆಚ್ಚಿದೆ. ರಸ್ತೆ ಸರಿ ಇಲ್ಲದ ಕಾರಣ ಕತ್ತಲೆಯಾದ ನಂತರ ಗ್ರಾಮಕ್ಕೆ ನಡೆದು ಬರುವುದು ಕಷ್ಟ. ರಾತ್ರಿ ವೇಳೆಯಲ್ಲಿ ಚಿರತೆಗಳು ಮನೆಯಲ್ಲಿ ಸಾಕಿರುವ ನಾಯಿ, ಮೇಕೆ, ಕುರಿಗಳನ್ನು ಹೊತ್ತೊಯ್ಯುವುದು ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT