ಜನಪದ ಕಲೆ ಬಗ್ಗೆ ಮಕ್ಕಳ ಆಸಕ್ತಿ ಕಡಿಮೆ: ಪಟ ಕುಣಿತದ ಕಲಾವಿದ ಮೋಟಪ್ಪ ಬೇಸರ

ಗುರುವಾರ , ಏಪ್ರಿಲ್ 25, 2019
21 °C
ತಿಂಗಳ ಅತಿಥಿ ಕಾರ್ಯಕ್ರಮ

ಜನಪದ ಕಲೆ ಬಗ್ಗೆ ಮಕ್ಕಳ ಆಸಕ್ತಿ ಕಡಿಮೆ: ಪಟ ಕುಣಿತದ ಕಲಾವಿದ ಮೋಟಪ್ಪ ಬೇಸರ

Published:
Updated:
Prajavani

ರಾಮನಗರ: ‘ಗ್ರಾಮೀಣ ಪ್ರದೇಶದಲ್ಲಿ ಜನಪದ ಕಲೆಗಳನ್ನು ಕಲಿಯಲು ಮಕ್ಕಳು ಆಸಕ್ತಿ ತೋರುತ್ತಿಲ್ಲ’ ಎಂದು ಪಟ ಕುಣಿತದ ಕಲಾವಿದ ಮೋಟಪ್ಪ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಶನಿವಾರ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಜನಪದ ಕಲೆಗಳನ್ನು ಕಲಿಸಿ ಕೊಡುತ್ತೇವೆ ಬನ್ನಿ ಎಂದರೂ ಯಾರು ಬರುತ್ತಿಲ್ಲ. ಹಲವು ಮಕ್ಕಳು ಟಿವಿ. ಮೊಬೈಲ್‌ ಗಳನ್ನು ನೋಡಿಕೊಂಡು ಕಾಲಕಳೆಯುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಪಡಿಸಿದರು.

‘ನನಗೆ ಈಗ 80 ವರ್ಷ. ಮಧುಮೇಹ, ರಕ್ತದೊತ್ತಡದಂತಹ ಯಾವುದೇ ಕಾಯಿಲೆಗಳು ನನಗೆ ಇಲ್ಲ, ಈಗಲೂ ಪಟ ಕುಣಿತದ ಪ್ರದರ್ಶನ ನೀಡುತ್ತೇನೆ. ಜತೆಗೆ ಭಾಗವಂತಿಕೆಯಲ್ಲೂ ಹಾಡುತ್ತೇನೆ’ ಎಂದು ಅವರು ಹೇಳಿದರು.

‘ನಮ್ಮದು ಕಲೆಗಳ ಪ್ರದರ್ಶನದ ಕುಟುಂಬ. ತಾತ ಕೆಂಚೇಗೌಡ, ತಂದೆ ಕೆಂಪೇಗೌಡ ಅವರಿಂದ ಪಟ ಕುಣಿತವನ್ನು ಕಲಿತುಕೊಂಡೆ. 20ನೇ ವಯಸ್ಸಿನಿಂದ ಪ್ರದರ್ಶನ ನೀಡುತ್ತಿದ್ದೇನೆ. 1962ರಲ್ಲಿ ಜವಾಹರಲಾಲ್ ನೆಹರೂ ಅವರು ಪ್ರಧಾನಮಂತ್ರಿಯಾಗಿದ್ದಾಗ, 1976ರಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪಟ ಕುಣಿತದ ಪ್ರದರ್ಶನ ನೀಡಿದ್ದೇನೆ’ ಎಂದು ತಿಳಿಸಿದರು.

‘ಪ್ರದರ್ಶನದ ಅವಕಾಶಗಳು ಸಿಗದಿದ್ದಾಗ ವ್ಯವಸಾಯದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೃಷಿಯಿಂದ ಮನುಷ್ಯನಿಗೆ ಆದಾಯವಿದೆಯೇ ಹೊರೆತು ನಷ್ಟವಿಲ್ಲ. ಆದರೆ ಇಚ್ಛಾಶಕ್ತಿಯಿಂದ ವ್ಯವಸಾಯ ಮಾಡಬೇಕು. ನಾನು ಈಗಲೂ ಎರಡು ಸೀಮೆಹಸುಗಳನ್ನು ಸಾಕುವ ಮೂಲಕ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ತಿಳಿಸಿದರು.

‘ದೇಶದ ಹಲವು ರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದೇನೆ. ರಾಮಾಯಣ, ಕುರುಕ್ಷೇತ್ರ ಸೇರಿದಂತೆ ನೂರಾರು ಪೌರಾಣಿಕ ನಾಟಕ ಪ್ರದರ್ಶನಗಳಲ್ಲಿ ಅಭಿನಯಿಸಿದ್ದೇನೆ. ಜಾನಪದ ಲೋಕ ನಿರ್ಮಿಸಿದ ನಾಗೇಗೌಡರು ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದಾರೆ. ಮೈಸೂರು ದಸರಾ ಉತ್ಸವದಲ್ಲಿ ಪ್ರದರ್ಶನ ನೀಡಲು ನಾವು ವಾರಗಟ್ಟಲೆ ಅಲ್ಲಿರುತ್ತಿದ್ದೆವು. ಆಗ ನಾವು ಮನೆಯಿಂದಲೇ ಒಂದು ವಾರಕ್ಕಾಗುವಷ್ಟು ರಾಗಿ, ಅಕ್ಕಿ ರೊಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಹುಚ್ಚೆಳ್ಳಿನ ಪುಡಿಯ ಜತೆಗೆ ರೊಟ್ಟಿಯನ್ನು ತಿನ್ನುತ್ತಿದ್ದೆವು. ಆದರೆ ಈಗ ಹುಚ್ಚೆಳ್ಳು ಎಂಬುದೇ ರೈತರ ಹೊಲಗಳಲ್ಲಿ ಕಣ್ಮರೆಯಾಗಿದೆ’ ಎಂದರು.

‘ಪಟ ಕುಣಿತಕ್ಕೆ ಜವಳೆ ಕುಣಿತ ಎಂತಲೂ ಕರೆಯುತ್ತಾರೆ. ಜವಳೆ ಎಂದರೆ ಬಿದಿರಿನ ಕೋಲು. ನನಗೆ ಮೂರು ಜನ ಮಕ್ಕಳು. ಅದರಲ್ಲಿ ಒಬ್ಬ ಮಗ ಕಲಾವಿದನಾಗಿಯೇ ಮುಂದುವರಿಯುತ್ತಿದ್ದಾನೆ’ ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್. ಶಂಕರಪ್ಪ ಮಾತನಾಡಿ, ತಿಂಗಳ ಅತಿಥಿ ಕಾರ್ಯಕ್ರಮದಿಂದ ಸಾಹಿತ್ಯದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರು ತಮ್ಮ ಜೀವನದ ವಿವರಗಳ ಮಾಹಿತಿಯನ್ನು ನೀಡುವುದರಿಂದ ಇತರೆ ಕಲಾವಿದರಿಗೆ ಪ್ರೇರಣೆಯಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಭಾಗವಂತಿಕೆ ಮೇಳ ಕಡಿಮೆಯಾಗುತ್ತಿದೆ. ಇಂತಹ ಆಧುನೀಕರಣದ ಸಂದರ್ಭದಲ್ಲಿಯೂ ಭಾಗವಂತಿಕೆ ಮೇಳವನ್ನು ಉಳಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಯುವ ಸಮುದಾಯ ಜನಪದ ಕಲೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಕಲೆಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಲಾವಿದರಾದ ಚಿಕ್ಕನರಸಯ್ಯ, ರಾಮಚಂದ್ರಯ್ಯ, ಕಾಡಪ್ಪ, ನರಸಿಂಹಯ್ಯ, ರಮೇಶಯ್ಯ, ಕೆ. ಮೋಟಪ್ಪ, ರಮೇಶ್, ದೇವರಾಜು, ಮಂಜೇಗೌಡ, ಡಿ.ಸಿ. ಕುಮಾರ್, ನರಸಿಂಹಯ್ಯ, ನಾಗೇಶ್, ಗುತ್ತಲಯ್ಯ ದೇವರಾಜು, ಹೊಂಬಾಳಯ್ಯ, ಡಿ.ಪಿ. ನರಸಿಂಹಮೂರ್ತಿ, ಜಾನಪದ ಲೋಕದ ಆಡಳಿತಾಧಿಕಾರಿ ಕುರುವ ಬಸವರಾಜ್ ಇದ್ದರು.

* ಜನಪದವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಕಲೆ ಉಳಿದು ಬೆಳೆಯುತ್ತದೆ
-ಮೋಟಪ್ಪ, ಕಲಾವಿದ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !