ಶುಕ್ರವಾರ, ಸೆಪ್ಟೆಂಬರ್ 24, 2021
24 °C
ತಿಂಗಳ ಅತಿಥಿ ಕಾರ್ಯಕ್ರಮ

ಯಕ್ಷಗಾನ ಪ್ರದರ್ಶನಕ್ಕೆ ಈಗಲೂ ಬೇಡಿಕೆ ಹೆಚ್ಚು: ಕಲಾವಿದ ಐರೋಡಿ ಗೋವಿಂದಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಯಕ್ಷಗಾನ ಪ್ರದರ್ಶನಕ್ಕೆ ಹಿಂದಿಗಿಂತಲೂ ಈಗ ಬೇಡಿಕೆ ಹೆಚ್ಚಾಗಿದೆ ಎಂದು ಉಡುಪಿ ಜಿಲ್ಲೆಯ ಐರೋಡಿ ಗ್ರಾಮದ74 ವರ್ಷದ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಹೇಳಿದರು.

ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಶನಿವಾರ ಸಂಜೆ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಕ್ಷಗಾನ ಕಳೆಕುಂದುತ್ತಿದೆ, ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ, ಯುವ ಸಮುದಾಯವನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬುದೆಲ್ಲಾ ಸಿನಿಕತನದ ಮಾತುಗಳಾಗಿವೆ. ಇಂದಿನ ಜಾಗತೀಕರಣದ ಯುಗದಲ್ಲಿಯೂ ಯಕ್ಷಗಾನ ಕರ್ನಾಟಕ ರಾಜ್ಯವನ್ನು ಮೀರಿ ವಿದೇಶಗಳಲ್ಲಿಯೂ ಪ್ರದರ್ಶನಗೊಳ್ಳುತ್ತಿದೆ. ಹೆಣ್ಣು ಮಕ್ಕಳು ಕೂಡ ಪ್ರದರ್ಶನ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ನಮ್ಮ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಯಕ್ಷಗಾನದ ಪಾತ್ರ ಮಹತ್ವದ್ದಾಗಿದೆ. ಕಲೆಯಿಂದ ವ್ಯಕ್ತಿತ್ವ ವಿಕಸನವಾಗಿ, ವ್ಯಕ್ತಿಯನ್ನು ಜನಪ್ರಿಯಗೊಳಿಸುತ್ತದೆ. ಯಕ್ಷಗಾನ ಕಲೆ ತಲೆಮಾರುಗಳನ್ನು ದಾಟಿ ಸಾಗುತ್ತಿದೆ. ಯಕ್ಷಗಾನ ಕಲಿಯುವುದರಿಂದ ಭಾಷಾ ಶುದ್ಧತೆ ಉಂಟಾಗುತ್ತದೆ. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡುತ್ತದೆ ಎಂದು ಅವರು ಹೇಳಿದರು.

‘ಯಕ್ಷಗಾನವನ್ನು ನಮ್ಮ ತಂದೆಯವರಿಂದ ಕಲಿತುಕೊಂಡೆ. ಹದಿನೈದನೇ ವಯಸ್ಸಿನಲ್ಲಿ ರಂಗಸ್ಥಳ ಪ್ರವೇಶ ಮಾಡಿ, ಕೋಡಂಗಿ, ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ, ಪುಂಡು ವೇಷ, ಪುರುಷ ವೇಷ ಹೀಗೆ ಹಂತಹಂತವಾಗಿ ಮೇಲೇರಿ ಎರಡನೆಯ ವೇಷಧಾರಿಯಾಗಿ ರೂಪುಗೊಂಡೆ’ ಎಂದು ತಿಳಿಸಿದರು.

‘ಗೋಳಗುಂಡಿ, ಸಾಲಿಗ್ರಾಮ, ಪೆರ್ದೂರು, ಇರಾಶ್ರೀಸೋಮನಾಥೇಶ್ವರ, ಕಣಿಪುರ, ಮೂಲ್ಕಿ, ಅಮೃತೇಶ್ವರಿ ಸೇರಿದಂತೆ ತೆಂಕು ಮತ್ತು ಬಡಗು ತಿಟ್ಟಿನ ಮೇಳಗಳಲ್ಲಿ ಐದು ದಶಕಗಳ ಯಕ್ಷಗಾನ ಕಲೆಗಾಗಿ ಸೇವೆ ಸಲ್ಲಿಸಿದ್ದೇನೆ. ವೇಷಗಾರಿಕೆಯ ಹೊರತಾಗಿ ಭಾಗವತಿಕೆ ಹಾಗೂ ಚಂಡೆಮದ್ದಲೆ ನುಡಿಸುತ್ತೇನೆ. ಪೌರಾಣಿಕ ಪ್ರಸಂಗಗಳಲ್ಲಿ ಭೀಷ್ಮ, ಕರ್ಣ, ಅರ್ಜುನ, ಮಾರ್ತಾಂಡ ತೇಜ, ಜಾಂಭವ, ಹಿರಣ್ಯಕಶ್ಯಪು, ಸುಂದರ ರಾವಣ, ಭೀಮ, ವಿಭೀಷಣ, ಯಯಾತಿ, ಭದ್ರಸೇನ ಮತ್ತಿತರ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ’ ಎಂದರು.

ಮೊದಲು ಒಂದು ಪ್ರದರ್ಶನಕ್ಕೆ ನನಗೆ ಒಂದು ರೂಪಾಯಿ ನೀಡುತ್ತಿದ್ದರು. ಈಗ ಮೂರು ಸಾವಿರಕ್ಕೂ ಹೆಚ್ಚಿನ ಹಣ ನೀಡುತ್ತಾರೆ. ಆದರೆ ಆಗಿನ ಕಲಾತ್ಮಕತೆ ಈಗ ಉಳಿದಿಲ್ಲ. ಈಗ ಎಲ್ಲರೂ ಹಣದ ಹಿಂದೆ ಬಿದ್ದಿರುವುದರಿಂದ ಕಲೆಗಳ ಪ್ರದರ್ಶನವೆಂಬುದು ಯಾಂತ್ರಿಕವಾಗಿದೆ. ಈಗಿನ ಕಲಾವಿದರಲ್ಲಿ ಸೌಜನ್ಯತೆ ಇಲ್ಲ, ಹಿರಿಯ ಕಲಾವಿದರ ಬಗ್ಗೆ ಗೌರವವಿಲ್ಲ. ಪ್ರೇಕ್ಷಕರಿಗೆ ನ್ಯಾಯ ಒದಗಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಿಟ್ಜರ್‌ಲ್ಯಾಂಡ್‌, ಪ್ಯಾರೀಸ್, ಹಾಂಗ್ ಕಾಂಗ್ ಸೇರಿದಂತೆ ವಿದೇಶಗಳ ವಿವಿಧೆಡೆ ಪ್ರದರ್ಶನ ನೀಡಿದ್ದೇನೆ. ಕಲಿಯುತ್ತೇನೆ ಎಂದು ಬಂದವರಿಗೆ ಯಕ್ಷಗಾನವನ್ನು ಕಲಿಸಿಕೊಟ್ಟಿದ್ದೇನೆ. ನಾನು ಅನುಕರಣೆಯ ಕಲಾವಿದನಲ್ಲ, ಕರ್ಣಾರ್ಜುನ ಕಾಳಗದ 'ಕರ್ಣ'ನ ವೇಷದಲ್ಲಿ ಜನರು ಹೆಚ್ಚು ಇಷ್ಟಪಡುತ್ತಾರೆ ಎಂದು ತಿಳಿಸಿದರು.

ಕಲಾವಿದ ಕೃಷ್ಣಮೂರ್ತಿ ತುಂಗ ಮಾತನಾಡಿ ನಾನು ಐದನೆಯ ತರಗತಿಯಲ್ಲಿ ಓದುತ್ತಿದ್ದಾಗಲೇ ಯಕ್ಷಗಾನ ಪ್ರದರ್ಶನದಲ್ಲಿ ತೊಡಗಿಸಿಕೊಂಡೆ. ವಿದೇಶಗಳಲ್ಲಿಯೂ ಪ್ರದರ್ಶನ ನೀಡಿದ್ದೇನೆ. 17 ವರ್ಷಗಳ ಹಿಂದೆ ಯಕ್ಷ ಕಲಾ ಅಕಾಡೆಮಿ ಸ್ಥಾಪಿಸಿ ಯಕ್ಷಗಾನ ಕಲಿಸವುದು ಹಾಗೂ ಪ್ರದರ್ಶನ ನೀಡುವುದನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಅರ್ಹ ಹಾಗೂ ನೈಜ ಕಲಾವಿದರಿಗೆ ಸರ್ಕಾರದ ಸೌಲಭ್ಯಗಳು, ಅನುದಾನ ದೊರೆಯುತ್ತಿಲ್ಲ. ರಾಜಕಾರಣಿಗಳ ಬೆಂಬಲವಿರುವ ಕಲಾವಿದರಿಗೆ ಮಾತ್ರ ಸಿಗುತ್ತಿವೆ. ರೈತರು ಬೆಳೆದ ಬೆಲೆಗಳಿಗೂ ಸೂಕ್ತ ಬೆಲೆ ದೊರೆಯುತ್ತಿಲ್ಲ. ರೈತರ ಪರಿಸ್ಥಿತಿಯೆ ನೈಜ ಕಲಾವಿದರಿಗೂ ಉಂಟಾಗಿದೆ. ಇನ್ನು ಮುಂದಾದರೂ ಸರ್ಕಾರ ಅರ್ಹ ಕಲಾವಿದರಿಗೆ ಸೌಲಭ್ಯಗಳನ್ನು ತಲುಪಿಸಬೇಕು ಎಂದು ತಿಳಿಸಿದರು.

ರೇಷ್ಮೆ ಇಲಾಖೆಯ ಉಪನಿರ್ದೇಶಕ ಜಿ.ಎಂ. ಮಹೇಂದ್ರಕುಮಾರ್, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ, ಕಲಾವಿದರಾದ ಚಿತ್ಕಲಾ ಕೆ. ತುಂಗ, ರೋಹಿತ್ ಗೌಡ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ, ಜಾನಪದ ಲೋಕದ ಆಡಳಿತಾಧಿಕಾರಿ ಡಾ. ಕುರುವ ಬಸವರಾಜ್, ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು