ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಸ್ತು ಕ್ರಮ ಖಚಿತ: ಟಿಕೆಎಂ

ನೌಕರರು ಒಪ್ಪಿ ಬಂದರಷ್ಟೇ ಲಾಕ್‌ಔಟ್‌ ತೆರವು: ಆಡಳಿತ ಮಂಡಳಿ ಸ್ಪಷ್ಟನೆ
Last Updated 25 ನವೆಂಬರ್ 2020, 11:48 IST
ಅಕ್ಷರ ಗಾತ್ರ

ರಾಮನಗರ: 'ಕಂಪನಿಯ ಶಿಸ್ತು ಉಲ್ಲಂಘನೆ ಮಾಡಿರುವ ನೌಕರರ ವಿರುದ್ಧ ಕ್ರಮ ಖಚಿತ. ಅದನ್ನು ಒಪ್ಪಿ ಮಾತುಕತೆಗೆ ಬರುವುದಾದರೆ ಸ್ವಾಗತ'ಎಂದು ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ಕಂಪನಿಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಈ ಕುರಿತು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಸಹ ಉಪಾಧ್ಯಕ್ಷ ಜಿ. ಶಂಕರ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು. "ಕಂಪನಿಯ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ, ಕಾರ್ಖಾನೆಯೊಳಗೆ ಅಶಿಸ್ತಿನಿಂದ ವರ್ತಿಸಿದ್ದ ನೌಕರನೊಬ್ಬನ ವಿರುದ್ಧ ಕ್ರಮ ಕೈಗೊಂಡಿದ್ದೇ ಇಷ್ಟಕ್ಕೆಲ್ಲ ಕಾರಣವಾಗಿದೆ. ಕೆಲವೇ ಕೆಲವು ಮುಖಂಡರ ಹಿತಾಸಕ್ತಿ, ಬೆದರಿಕೆ ತಂತ್ರಗಳಿಂದಾಗಿ ಉಳಿದ ಕಾರ್ಮಿಕರಿಗೂ ತೊಂದರೆ ಆಗಿದೆ. 40 ಕಾರ್ಮಿಕರ ಅಮಾನತು ಆದೇಶವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ' ಎಂದು ಅವರು ಸ್ಪಷ್ಟಪಡಿಸಿದರು.

'ಸರ್ಕಾರದ ಆದೇಶದಂತೆ ಇದೇ 19ರಂದು ಲಾಕ್‌ಔಟ್‌ ಹಿಂಪಡೆದು ಕಾರ್ಖಾನೆ ತೆರೆಯಲಾಗಿತ್ತು. ಅಂದು ಮುಂಜಾನೆ ಎಲ್ಲ ಕಾರ್ಮಿಕರ ಮನೆ ಬಾಗಿಲಿಗೆ ಬಸ್‌ಗಳು ತೆರೆಳಿದ್ದವು. ಆದರೆ ಬಹುತೇಕ ಬಸ್‌ಗಳು ಖಾಲಿಯಾಗಿಯೇ ಬಂದವು. ಕೇವಲ 200 ಕಾರ್ಮಿಕರಷ್ಟೇ ಕೆಲಸಕ್ಕೆ ಬಂದರು. ಹೀಗಾಗಿ ಅನಿವಾರ್ಯವಾಗಿ ಮತ್ತೊಮ್ಮೆ ಲಾಕ್‌ಔಟ್‌ ಹೇರಬೇಕಾಯಿತು. ಆದಾಗ್ಯೂ ಕಾರ್ಮಿಕರು "ಶಾಂತಿ ಕಾಪಾಡುತ್ತೇವೆ' ಎಂಬ ಸಹಿಪತ್ರಕ್ಕೆ ಒಪ್ಪಿಗೆ ಹಾಕಿ ಕೆಲಸಕ್ಕೆ ಬರಬಹುದಾಗಿದೆ. ಆದರೆ ಯೂನಿಯನ್‌ನ ಕೆಲ ಮುಖಂಡರು ಇದಕ್ಕೆ ಅವಕಾಶ ನೀಡುತ್ತಿಲ್ಲ. ಬದಲಾಗಿ ಉಳಿದ ಕಾರ್ಮಿಕರನ್ನು ಬೆದರಿಸುವ ತಂತ್ರ ಅನುಸರಿಸಲಾಗುತ್ತಿದೆ' ಎಂದು ದೂರಿದರು.

'ಕಂಪನಿಯು ಕಾರ್ಮಿಕರನ್ನು ಯಾವ ರೀತಿಯಲ್ಲೂ ಶೋಷಣೆ ಮಾಡಿಲ್ಲ. ಕೆಲಸದ ಅವಧಿಯಲ್ಲಿ ಪ್ರತಿ ಎರಡು ಗಂಟೆಗೆ ಒಮ್ಮೆ ತಲಾ 10 ನಿಮಿಷ ವಿಶ್ರಾಂತಿ ನೀಡಲಾಗುತ್ತಿದೆ. ಅತ್ಯುತ್ತಮ ವೇತನ ಸೌಲಭ್ಯ ಇದೆ. ಕಾರ್ಖಾನೆಯು ವರ್ಷಕ್ಕೆ 3.1 ಲಕ್ಷ ಕಾರ್ಉತ್ಪಾದನಾ ಸಾಮರ್ಥ್ಯ ಹೊಂದಿದ್ದರೂ ಪ್ರಸ್ತುತ ಒಂದು ಲಕ್ಷ ಕಾರ್‌ಗಳಷ್ಟೇ ಹೊರಬರುತ್ತಿವೆ. ಹೀಗಾಗಿ ನೌಕರರನ್ನು ಅತಿಯಾಗಿ ದುಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ' ಎಂದರು.

'ಉದ್ಯೋಗಿಗಳ ಅನುಕೂಲಕ್ಕಾಗಿ ಸ್ವಯಂನಿವೃತ್ತಿ ಯೋಜನೆ ಜಾರಿಗೆ ತಂದಿದ್ದೇವೆ. ಆಸಕ್ತರು ಒಪ್ಪಿ ನಿವೃತ್ತಿ ಪಡೆಯುತ್ತಿದ್ದಾರೆ. ನಮಗೆ ಇನ್ನಷ್ಟು ಕುಶಲಕರ್ಮಿಗಳ ಅಗತ್ಯ ಇದೆ. ಹೀಗಾಗಿ ಇರುವ ನೌಕರರನ್ನು ತೆಗೆಯುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದರು.

ಕಂಪನಿಯ ಉತ್ಪಾದನಾ ವಿಭಾಗದ ಉಪಾಧ್ಯಕ್ಷ ವಿನಯಕುಮಾರ್‍, ಉದ್ಯೋಗಿ ಸಂಪರ್ಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ ಗೋಟೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT