ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆ: ಮುಂದುವರಿದ ಬಿಕ್ಕಟ್ಟು

ಲಾಕ್‌ಔಟ್‌ ಘೋಷಣೆ
Last Updated 11 ನವೆಂಬರ್ 2020, 13:35 IST
ಅಕ್ಷರ ಗಾತ್ರ

ಬಿಡದಿ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಇರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ ಕಾರ್ಖಾನೆಯಲ್ಲಿನ ಬಿಕ್ಕಟ್ಟು ಮುಂದುವರಿದಿದ್ದು, ಬುಧವಾರವೂ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಕಾರ್ಖಾನೆಯ ಮುಂಭಾಗ ನೂರಾರು ಕಾರ್ಮಿಕರು ಜಮಾಯಿಸಿದ್ದು, ಕಂಪನಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆಯ ಆಡಳಿತ ಮಂಡಳಿಯು ಸಣ್ಣ ಘಟನೆಯನ್ನೇ ನೆಪವಾಗಿಸಿಕೊಂಡು ಏಕಾಏಕಿ ಲಾಕ್‌ಔಟ್‌ ಘೋಷಣೆ ಮಾಡುವ ಮೂಲಕ ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದರು.

ಕಾರ್ಮಿಕರ ದಿಢೀರ್‌ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರ್ಖಾನೆ ಆಡಳಿತ ಮಂಡಳಿಯು ಮಂಗಳವಾರ ಲಾಕೌಟ್‌ ಘೋಷಣೆ ಮಾಡಿತ್ತು. ಮತ್ತೊಂದೆಡೆ ಕಾರ್ಮಿಕರ ಸಂಘ ಸಹ ತನ್ನ ಬಿಗಿಪಟ್ಟು ಮುಂದುವರಿಸಿದ್ದು, ಸಿಬ್ಬಂದಿಯೊಬ್ಬರ ಅಮಾನತು ಆದೇಶ ಹಿಂಪಡೆಯಬೇಕು. ಲಾಕ್‌ಔಟ್‌ ತೆರವುಗೊಳಿಸುವುದೂ ಸೇರಿದಂತೆ ತಮ್ಮ ಬೇಡಿಕೆಗಳೂ ಈಡೇರುವವರೆಗೂ ಮುಷ್ಕರ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದೆ. ಸಂಧಾನ ಮಾತುಕತೆ ಫಲಪ್ರಧವಾಗಿಲ್ಲ. ಸಮಸ್ಯೆ ಬಗೆಹರಿಯುವವರೆಗೂ ಲಾಕ್‌ಔಟ್‌ ಮುಂದುವರಿಯಲಿದೆ ಎಂದು ಟಿಕೆಎಂನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಬಿಡದಿಯಲ್ಲಿನ ಟಿಕೆಎಂ ಘಟಕವು ಭಾರತದಲ್ಲಿ ಟೊಯೊಟಾದ ದೊಡ್ಡ ಕಾರ್ಖಾನೆಗಳಲ್ಲಿ ಒಂದಾಗಿದೆ. ಇಲ್ಲಿ ವಾರ್ಷಿಕ 3.1 ಲಕ್ಷ ಯುನಿಟ್‌ನಷ್ಟು ವಾಹನ ಮತ್ತದರ ಬಿಡಿ ಭಾಗಗಳ ಉತ್ಪಾದನೆ ಕಾರ್ಯ ನಡೆಯುತ್ತಿದೆ. ಸದ್ಯ ನಡೆದಿರುವ ಮುಷ್ಕರದಿಂದ ಕಾರ್ಖಾನೆಯಲ್ಲಿನ 3600ಕ್ಕೂ ಕಾಯಂ ನೌಕರರ ಜೊತೆಗೆ ಗುತ್ತಿಗೆ ಆಧಾರದ ಸಿಬ್ಬಂದಿ ಮತ್ತು ಈ ಉದ್ಯಮವನ್ನೇ ಅವಲಂಬಿಸುವ ಇತರೆ ಕಾರ್ಮಿಕರೂ ಸೇರಿದಂತೆ 20 ಸಾವಿರದಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

---

ಕಾರ್ಖಾನೆಯ ಲಾಕೌಟ್‌ ಘೋಷಣೆಯು ಕಾರ್ಮಿಕ ವಿರೋಧಿಯಾಗಿದೆ. ಈ ನಿರ್ಧಾರ ಕೈಬಿಡುವವರೆಗೂ ಪ್ರತಿಭಟನೆ ಮುಂದುವರಿಯಲಿದೆ.
- ಪ್ರಸನ್ನ ಚಕ್ಕರೆ,ಅಧ್ಯಕ್ಷ, ಟಿಕೆಎಂ ಕಾರ್ಮಿಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT