ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಕೆ: 26ರಂದು ಕಡೆಯ ಕಸರತ್ತು

ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ಉಮೇದುವಾರಿಕೆಗೆ ಸಿದ್ಧತೆ
Last Updated 25 ಮಾರ್ಚ್ 2019, 14:31 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕಡೆಯ ದಿನವಾಗಿದೆ. ಕಾಂಗ್ರೆಸ್‌–ಬಿಜೆಪಿ ಅಭ್ಯರ್ಥಿಗಳಿಬ್ಬರೂ ಇಂದೇ ನಾಮಪತ್ರ ಸಲ್ಲಿಸಲಿದ್ದಾರೆ.

ಈವರೆಗೆ 8 ಮಂದಿ ಪಕ್ಷೇತರರು ಹಾಗೂ ವಿವಿಧ ಪಕ್ಷಗಳ ಬೆಂಬಲಿತರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆದರೆ ಎರಡು ರಾಷ್ಟ್ರೀಯ ಪಕ್ಷಗಳು ಕಡೆಯ ದಿನಕ್ಕೆ ಕುತೂಹಲವನ್ನು ಕಾಯ್ದಿಟ್ಟಿವೆ. ಇಂದು ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್‌ ಬೆಳಿಗ್ಗೆ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಪಕ್ಷದ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆಯಾಗುತ್ತಲೇ ಮಠಮಾನ್ಯಗಳತ್ತ ಮುಖ ಮಾಡಿದ್ದಾರೆ. ಮಂಗಳವಾರ ಬೆಳಿಗ್ಗೆ ಮನೆದೇವರು ಕೆಂಕೇರಮ್ಮ ಹಾಗೂ ಕಬ್ಬಾಳು ದೇಗುಲಗಳಿಗೆ ಭೇಟಿ ನೀಡಿದ ಬಳಿಕ ರಾಮನಗರಕ್ಕೆ ಬರಲಿದ್ದಾರೆ.

ಜೂನಿಯರ್‌ ಕಾಲೇಜು ಮೈದಾನದಿಂದ ಮೆರವಣಿಗೆ ಮೂಲಕ ಹೊರಟು 11 ಗಂಟೆ ವೇಳೆಗೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಈ ಸಂದರ್ಭ ಅವರಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್, ಶಾಸಕಿ ಅನಿತಾ ಸಾಥ್‌ ನೀಡಲಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನದಲ್ಲಿಯೇ ಬಹಿರಂಗ ಸಭೆ ನಡೆಯುವ ಸಾಧ್ಯತೆ ಇದೆ.

ಮಧ್ಯಾಹ್ನ 1.30ರಿಂದ 2.30ರವರೆಗೆ ಶುಭ ಸಮಯ ಇದ್ದು, ಈ ಸಂದರ್ಭ ಬಿಜೆಪಿ ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಪಕ್ಷೇತರರೂ ಕೂಡ ಕಡೆಯ ದಿನ ಹುಮ್ಮಸ್ಸು ತೋರಬಹುದು. ಹಾಗಾದಲ್ಲಿ ಚುನಾವಣಾಧಿಕಾರಿಗಳ ಕೊಠಡಿ ತುಂಬಲಿದೆ.

ಪ್ರಮುಖ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್‌ ಮಾಡಿಕೊಂಡಿದ್ದಾರೆ. ಅಭ್ಯರ್ಥಿಯ ಜೊತೆ ಇತರ ನಾಲ್ಕು ಮಂದಿಗೆ ಮಾತ್ರ ಒಳಹೋಗಲು ಅವಕಾಶ ಸಿಗಲಿದೆ. ಉಳಿದವರು ಜಿಲ್ಲಾ ಸಂಕೀರ್ಣದ ಗೇಟಿನ ಹೊರಗೆ ಕಾಯಬೇಕಾಗುತ್ತದೆ.

ಪ್ರಚಾರವೂ ಚುರುಕು
ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೊಂದಿಗೆ ಅಭ್ಯರ್ಥಿಗಳ ಪ್ರಚಾರ ಕಾರ್ಯವೂ ಇನ್ನಷ್ಟು ಚುರುಕುಗೊಳ್ಳಲಿದೆ. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಅಭ್ಯರ್ಥಿಗಳು ಮೂರು ಜಿಲ್ಲೆಗಳನ್ನು ಸುತ್ತಬೇಕಾಗುತ್ತದೆ. ಸಮಯಾವಕಾಶ ಕಡಿಮೆ ಇರುವ ಕಾರಣ ಬಹಿರಂಗ ಸಭೆಗಳಿಗೆ ಹೆಚ್ಚಿನ ಪ್ರಚಾರವು ಸೀಮಿತಗೊಳ್ಳಲಿದೆ. ಕಡೆಯ ಕೆಲವು ದಿನಗಳಲ್ಲಿ ಪ್ರಮುಖ ನಾಯಕರು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್ ಈಗಾಗಲೇ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆಗಳನ್ನು ಆಯೋಜಿಸುತ್ತಾ ಬೇಕಾದ ಸಿದ್ಧತೆ ಮಾಡಿಕೊಂಡಿದ್ದಾರೆ. ಸಿ.ಪಿ. ಯೋಗೇಶ್ವರ್‌ ನೇತೃತ್ವದಲ್ಲಿ ಬಿಜೆಪಿಯೂ ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ಆಯೋಜಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT