ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ. 17ರಂದು ತಿರುಮಲೆ ಬ್ರಹ್ಮರಥೋತ್ಸವ

Last Updated 16 ಏಪ್ರಿಲ್ 2019, 14:08 IST
ಅಕ್ಷರ ಗಾತ್ರ

ಮಾಗಡಿ: ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಏ. 17ರಂದು ಬೆಳಿಗ್ಗೆ 11.30ರಿಂದ 12 ಗಂಟೆಯವರೆಗೆ ನಡೆಯಲಿದೆ. ರಥೋತ್ಸವದಲ್ಲಿ ಭಾಗವಹಿಸುವ ಭಕ್ತರು ಬೆಂಗಳೂರಿನ ಕಡೆಯಿಂದ ಬರುವ ವಾಹನಗಳನ್ನು ಐಡಿಎಸ್‌ಎಂಟಿ ಬಡಾವಣೆಯಲ್ಲಿಯೇ ನಿಲ್ಲಿಸಬೇಕು ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ರವಿಕುಮಾರ್‌ ತಿಳಿಸಿದ್ದಾರೆ.

ಗುಡೇಮಾರನಹಳ್ಳಿ ರಸ್ತೆಯಿಂದ ಬರುವ ಭಕ್ತರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸಬೇಕು. ರಥಬೀದಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಪಟ್ಟಣದ ಆಟೋ ಚಾಲಕರು ಎನ್‌ಇಎಸ್‌ ಸರ್ಕಲ್‌ನಲ್ಲಿಯೇ ಆಟೋಗಳನ್ನು ನಿಲ್ಲಿಸಬೇಕು. ರಥೋತ್ಸವದಲ್ಲಿ ಭಾಗವಹಿಸುವ ಭಕ್ತರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಅವರು ಹೇಳಿದರು.

ಸಬ್‌ ಇನ್‌ಸ್ಪೆಕ್ಟರ್‌ ಬಿ.ನಟರಾಜು ಮಾತನಾಡಿ ‘ರಥೋತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ತೊಂದರೆಯಾಗಬಾರದು. ಆಟೊ, ಕಾರು, ಟೆಂಪೊ ಇತರೆ ವಾಹನಗಳ ಮಾಲೀಕರು ರಸ್ತೆಯ ಮಧ್ಯೆ ವಾಹನ ನಿಲ್ಲಿಸಬೇಕು. ರಥಬೀದಿಗೆ ವಾಹನ ಕೊಂಡೊಯ್ಯಬಾರದು. ತಿರುಮಲೆ ನಿವಾಸಿಗಳು ಮತ್ತು ಭಕ್ತರು ಪೊಲೀಸರೊಂದಿಗೆ ಸಹಕರಿಸಬೇಕು. ರಥಬೀದಿಯಲ್ಲಿ ಇರುವ ಅರವಟಿಗೆಗಳ ಮುಂದೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಶಾಂತಿಯುತ ರಥೋತ್ಸವಕ್ಕೆ ಎಲ್ಲರೂ ಸಹಕರಿಸಬೇಕು’ ಎಂದರು.

ರಥೋತ್ಸವದ ಬಟ್ಟೆಗೆ ಪೂಜೆ: ರಥೋತ್ಸವಕ್ಕೆ ಹೊದಿಸುವ ಬಣ್ಣದ ಧಾಳು ಮತ್ತಿತರೆ ಬಟ್ಟೆಗಳಿಗೆ ಪೂಜೆ ಸಲ್ಲಿಸಿದ ಬೈಚಾಪುರದ ಗ್ರಾಮಸ್ಥರು, ರಥೋತ್ಸವ ಶಾಂತಿಯುತವಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಬಟ್ಟೆಗಳನ್ನು ಅಲಂಕೃತ ಎತ್ತಿನ ಬಂಡಿಗಳಲ್ಲಿಟ್ಟು ಪೂಜಿಸಿ ಮಂಗಳವಾದ್ಯದ ಸಹಿತ ಮೆರವಣಿಗೆಯಲ್ಲಿ ದೇವಾಲಯಕ್ಕೆ ತಂದರು. ಬೈಚಾಪುರದ ತೇರು ಮಂಟಪದ ಬಳಿ ಪೂಜೆ ಸಲ್ಲಿಸಿದ ನಂತರ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ದಾಸಯ್ಯ ವೆಂಕಟಸ್ವಾಮಯ್ಯ ಪೂಜೆ ಸಲ್ಲಿಸಿ ರಾಮಕಹಳೆ ಊದಿ ಭಕ್ತಿ ಸಮರ್ಪಿಸಿದರು.

ತೇರಿನ ಬಟ್ಟೆಯ ವ್ಯವಸ್ಥೆ ನೋಡಿಕೊಳ್ಳುವ ರಂಗಣ್ಣ, ಲಕ್ಷ್ಮಣ, ಸುಬ್ಬಣ್ಣ, ಮಹದೇವ್‌, ಸಿದ್ದಲಿಂಗಯ್ಯ, ರಂಗನಾಥ, ಮಂಜುನಾಥ, ಲಕ್ಷ್ಮಮ್ಮ, ಮಾಗಡಿ ರಂಗಯ್ಯ, ಕೆಇಬಿ ರಂಗಸ್ವಾಮಯ್ಯ, ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT