ಭಾನುವಾರ, ಸೆಪ್ಟೆಂಬರ್ 20, 2020
22 °C
ದೇಹಬಾಧೆ ತೀರಿಸಿಕೊಳ್ಳಲು ಸಾರ್ವಜನಿಕರ ಪರದಾಟ l ಮಲಿನವಾಗುತ್ತಿರುವ ಖಾಲಿ ಪ್ರದೇಶ

ಮಾಗಡಿಯಲ್ಲಿ ಬಯಲು ಬಹಿರ್ದೆಸೆ ಇನ್ನೂ ಜೀವಂತ

ದೊಡ್ಡಬಾಣಗೆರೆ ಮಾರಣ್ಣ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ವಿಜಯನಗರ ಸಾಮ್ರಾಜ್ಯದ ದಕ್ಷಿಣದ ಮಹಾಗಡಿಯಾಗಿದ್ದ, ಅರೆಮಲೆನಾಡು ಮಾಗಡಿಯಲ್ಲಿ ಬಯಲು ಬಹಿರ್ದೆಸೆ ಇನ್ನೂ ಜೀವಂತವಾಗಿದೆ. ಪಟ್ಟಣದ 5 ಕಿ.ಮಿ.ಸುತ್ತಳತೆಯಲ್ಲಿದೆ. ಮಧ್ಯದಲ್ಲಿ ತೋಟತುಡಿಕೆ,ಗದ್ದೆ, ಕೆರೆ ಕಟ್ಟೆ ಕಲ್ಯಾಣಿಗಳಿಂದ ಕೂಡಿದೆ. 32 ವಾರ್ಡ್‌ಗಳಿವೆ. ಸ್ವಚ್ಛತೆ ಇಲ್ಲಿ ಮರೀಚಿಕೆಯಾಗಿದೆ. ಪಟ್ಟಣದ ಬಹುತೇಕ ಕಡೆಗಳಲ್ಲಿ ತೆರೆದ ಚರಂಡಿಗಳಿಗೆ ಶೌಚಾಲಯದ ಕಲುಷಿತ ನೀರು ಹರಿಯಬಿಟ್ಟಿರುವುದರಿಂದ ನಡೆದಾಡುವಾಗಿ ದುರ್ಗಂಧ ಮೂಗಿಗೆ ರಾಚುತ್ತಿದೆ.

ಪಟ್ಟಣದ ಕೆಲವು ಕಡೆಗಳಲ್ಲಿ ಹಿಂದೆ ಮೂರು ಕಲ್ಲುಗಳನ್ನು ನಿಲ್ಲಿಸಿ ಅಲ್ಲಿ ಮೂತ್ರ ವಿಸರ್ಜನೆಗೆ ಅನುವು ಮಾಡಿಕೊಟ್ಟಿದ್ದರು. ಹಳೆ ಬಸ್ ನಿಲ್ದಾಣದ ಬಳಿ 15 ವರ್ಷಗಳ ಹಿಂದೆ ಮಾಡಬಾಳ್ ರಾಜಣ್ಣ ಮೊದಲ ಬಾರಿಗೆ ಒಂದು ಸುಲಭ್ ಶೌಚಾಲಯ ಕಟ್ಟಿಸಿ, ಪ್ರಯಾಣಿಕರು, ಖಾಸಗಿ ಬಸ್ ಚಾಲಕ ಮತ್ತು ನಿರ್ವಾಹಕರು, ಹಮಾಲಿಗಳು, ಕೂಲಿಕಾರ್ಮಿಕರಿಗೆ, ಸಾರ್ವಜನಿಕರಿಗೆ ದೇಹಬಾಧೆ ತೀರಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದರು.

ಪಟ್ಟಣದ ಕೆಲವು ಮನೆಗಳಲ್ಲಿ ಶೌಚಾಲಯಗಳಿವೆ. ಇನ್ನುಳಿದಂತೆ ಬಹುತೇಕ ಜನರು ಬೆಟ್ಟ, ಗುಡ್ಡ, ಕೆರೆಯಂಗಳ, ಹಳ್ಳ, ಕೊಳ್ಳ, ಕಲ್ಯಾಣಿಗಳನ್ನೇ ಬಯಲು ಶೌಚಾಲಯ ಮಾಡಿಕೊಂಡಿದ್ದಾರೆ. ಕೆಲವು ಕಡೆಗಳಲ್ಲಿ ರಾತ್ರಿಯಾಗುವುದನ್ನು ಕಾದು ರಸ್ತೆ ಬದಿ ಮಲಮೂತ್ರ ವಿಸರ್ಜಿಸುವ ವ್ಯವಸ್ಥೆ ಇದ್ದು ನಾಗರಿಕ ಸಮಾಜವನ್ನು ಅಣಕಿಸುವಂತಿದೆ.

ಪಟ್ಟಣದಲ್ಲಿ ಡೆಂಗಿ, ಟೈಫಾಯಿಡ್‌ ಇತರ ಜ್ವರಪೀಡಿತರ ಸಂಖ್ಯೆ ದಿನೆ ದಿನೇ ಜಾಸ್ತಿಯಾಗುತ್ತಿದೆ. ಸದಾ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗುತ್ತಿದೆ. ಕೆಮ್ಮು, ಅಸ್ತಮ ಕಾಯಿಲೆಗಳ ರೋಗಿಗಳ ಸಂಖೆ ಕಡಿಮೆ ಇಲ್ಲ.

2011ರ ಜನಗಣತಿ ಪ್ರಕಾರ ಪಟ್ಟಣದಲ್ಲಿ 27 ಸಾವಿರ ಜನಸಂಖ್ಯೆ ಇದೆ ಎಂಬುದು ಪುರಸಭೆ ಅಧಿಕಾರಿಗಳು ನೀಡುವ ಮಾಹಿತಿ. ಆದರೆ 40 ಸಾವಿರ ಜನಸಂಖ್ಯೆ ಇದೆ. ನಿತ್ಯ ನಗರದಿಂದ ಮತ್ತು ಸುತ್ತಲಿನ ತಾಲ್ಲೂಕುಗಳಿಂದ ಸರ್ಕಾರಿ ಉದ್ಯೋಗ, ವ್ಯವಹಾರಕ್ಕೆ ಬಂದು ಹೋಗುವವರ ಸಂಖ್ಯೆ ಕಡಿಮೆ ಎಂದರೂ 1,500 ರಷ್ಟಿದೆ. ತರಕಾರಿ ಕೊಳ್ಳಲು ನಿತ್ಯ ನಗರದಿಂದ ನೂರಾರು ಟೆಂಪೋಗಳಲ್ಲಿ ಬರುವವರ ಸಂಖ್ಯೆ ಕಡಿಮೆ ಇಲ್ಲ. ಸಾರ್ವಜನಿಕ ಶೌಚಾಲಯ ಇಲ್ಲದೆ ಕೋಟೆ ಬಯಲಲ್ಲಿಯೇ ನಿತ್ಯಕರ್ಮ ಮುಗಿಸುವುದು ವಾಡಿಕೆಯಾಗಿದೆ.

ಮಹಿಳಾ ನೌಕರರು ಮತ್ತು ಶಾಲಾ ಕಾಲೇಜಿನ ಬಾಲಕಿಯರು ಮನೆಯಲ್ಲಿಯೇ ನಿತ್ಯಕರ್ಮ ಮುಗಿಸಿಕೊಂಡು ಬಂದರೆ, ಸಂಜೆ ಮತ್ತು ಮನೆಗೆ ತೆರಳಿದ ಮೇಲೆ ಮಲಮೂತ್ರ ವಿಸರ್ಜಿಸಬೇಕಾದ ಸ್ಥಿತಿಯಿದೆ. ಕೆಲವು ಕಡೆ ಶೌಚಾಲಯ ವಿದ್ದರೂ ನೀರಿನ ಕೊರತೆಯಿಂದ ಬಯಲಿಗೆ ಹೋಗಿ ನಿತ್ಯಕರ್ಮ ಮುಗಿಸಿಕೊಂಡು ಬರುವುದು ವಾಡಿಕೆಯಾಗಿದೆ. ಪಟ್ಟಣದ ಕೊಟ್ಟಣಗೇರಿ ಬೀದಿ, ಹಳೆಮಸೀದಿ, ಹೊಸಮಸೀದಿ ಮೊಹಲ್ಲಾಗಳಲ್ಲಿ ಇಂದಿಗೂ ಶೌಚಾಲಯದ ಕಲುಷಿತವನ್ನು ತೆರೆದ ಚರಂಡಿಗೆ ಹರಿಯ ಬಿಡಲಾಗಿದೆ. ವಾತಾವರಣ ಕಲುಷಿತವಾಗಿದೆ. ಜನದಟ್ಟಣೆ ಇರುವ ರಾಮರಾಜ ಅರಸ್ ರಸ್ತೆ, ರಾಮಮಂದಿರದಿಂದ ಕಲ್ಯಾಬಾಗಿಲು ಸರ್ಕಲ್ ವರೆಗೆ ವರನಟ ಡಾ.ರಾಜ್‌ಕುಮಾರ್‌ ರಸ್ತೆ 3 ಕಿ.ಮೀ.ಉದ್ದ ಇದೆ. ಪಟ್ಟಣದ ಮುಖ್ಯ ರಸ್ತೆ ಇದಾಗಿದ್ದು ವರ್ತಕ ಸಮುದಾಯವಿದೆ. ಚಿನ್ನಾಭರಣದ ಅಂಗಡಿಗಳಿವೆ. ದಿನಸಿ, ಜವಳಿ, ಕಂಚುಮುಟ್ಟು, ಇತರ ವ್ಯಾಪಾರ ವಹಿವಾಟು ನಡೆಯುತ್ತಿದೆ. 3 ಕಿ.ಮೀ. ವ್ಯಾಪ್ತಿಯಲ್ಲಿ ಒಂದೇ ಒಂದು ಮೂತ್ರಾಲಯ ಅಥವಾ ಶೌಚಾಲಯವಿಲ್ಲದೆ ಜನರು, ಚರಂಡಿ
ಪಕ್ಕದ ಗೋಡೆಗಳನ್ನೇ ಅವಲಂಬಿಸಿ ಬಹಿರ್ದೆಸೆಗೆ ಬಳಸುವುದು ಇನ್ನೂ ನಡೆದಿದೆ.

ಕೆರೆಬೀದಿ, ಅರಳೆಪೇಟೆ, ತಿರುಮಲೆ ರಸ್ತೆ, ಹೊಸಪೇಟೆ ರಸ್ತೆ, ಕಂದಕ ರಸ್ತೆ, ಬಿ.ಕೆ.ರಸ್ತೆ, ಹೊಂಬಾಳಮ್ಮನಪೇಟೆ, ಗವಿಗಂಗಾಧರೇಶ್ವರ ಗುಡಿ ರಸ್ತೆ, ತಟವಾಳ್ ರಸ್ತೆ, ಬೈಚಾಪುರದ ರಸ್ತೆಗಳಲ್ಲಿ ಇಂದಿಗೂ ಬಯಲಿನಲ್ಲಿಯೇ ನೈಸರ್ಗಿಕ ಕ್ರಿಯೆ ನಡೆಸಿ ದೇಹಬಾಧೆ ತೀರಿಸಿಕೊಳ್ಳುತ್ತಿದ್ದಾರೆ. ಪುರಾಣ ಪ್ರಸಿದ್ಧ ತಿರುವೆಂಗಳನಾಥ ರಂಗನಾಥ ಸ್ವಾಮಿ ಗುಡಿ ಬಳಿ ಜನ ಶುಲ್ಕಕೊಟ್ಟು ಶೌಚಾಲಯ ಬಳಸುತ್ತಾರೆ. ಪುರಸಭೆ, ತಹಶೀಲ್ದಾರ್ ಕಚೇರಿ, ಸರ್ಕಾರಿ ಆಸ್ಪತ್ರೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಬಿಡಿಸಿಸಿ ಬ್ಯಾಂಕ್., ಮಂಗಳೂರು ಆಸ್ಪತ್ರೆ, ಬಿಎಸ್ಎನ್ಎಲ್ ಕಚೇರಿಗಳ ಸಮೀಪ ಇರುವ ಡ್ಯೂಮ್ ಲೈಟ್ ಸರ್ಕಲ್ ಬಳಿ ಇಲ್ಲಿಯವರೆಗೆ ಸಾರ್ವಜನಿಕ ಶೌಚಾಲಯ ಇರಲಿಲ್ಲ. ಇತ್ತೀಚೆಗೆ ಹಣ ಪಾವತಿಸಿ ಬಳಸುವ ಶೌಚಾಲಯ ಕಟ್ಟಿಸಿದ್ದಾರೆ. ಆದರೆ ಸದಾ ಬೀಗ ಹಾಕಿರುತ್ತದೆ. ಬೀದಿ ಬದಿ ತರಕಾರಿ ವ್ಯಾಪಾರ ಮಾಡುವ ಸಾವಿರಾರು ಮಹಿಳೆಯರು ಸರ್ಕಾರಿ ಉರ್ದು ಬಾಲಕಿಯರ ಪ್ರೌಢಶಾಲೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ಹಿಂದೆ ಮಲಮೂತ್ರ ವಿಸರ್ಜಿಸುತ್ತಿರುವುದರಿಂದ ಇಡೀ ವಾತಾವರಣ ದುರ್ಗಂಧ ಬೀರುತ್ತಿದೆ. ಗಾಣಿಗರ ಬೀದಿ, ಸುಣಕಲ್ಲು ಬೀದಿ, ದಾಸರಬೀದಿ, ನೇಕಾರರ ಬೀದಿ, ಕುಂಬಾರರಗಲ್ಲಿಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಬಯಲನ್ನೇ ನಂಬಿರುವ ಕಡುಬಡವರಿದ್ದಾರೆ.

ಸುಬ್ಬಶಾಸ್ತ್ರಿ ಗಲ್ಲಿ, ಅಗ್ರಹಾರಬೀದಿ, ಕಾಳಿಕಾಂಬ ರಸ್ತೆಗಳಲ್ಲಿ ಮಾತ್ರ ಬಹುತೇಕ ಮನೆಗಳಲ್ಲಿ ವರ್ತಕರು, ವಿದ್ವಾಂಸರು, ಪುರೋಹಿತರು, ಕರಣೀಕರು ಸ್ವಂತ ಶೌಚಾಲಯಗಳನ್ನು ಹೊಂದಿದ್ದಾರೆ. ಪುರಸಭೆ ವತಿಯಿಂದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಕಲ್ಯಾಬಾಗಿಲು ಬಿ.ಕೆ.ರಸ್ತೆ, ರಾಜೀವಗಾಂಧಿ ಕಾಲೊನಿಯಲ್ಲಿ ಸುಲಭ್ ಶೌಚಾಲಯ ನಿರ್ಮಿಸಿದ್ದಾರೆ. ಅಲ್ಲಿ ಸ್ವಚ್ಛತೆ ಇಲ್ಲ. ನೀರಿನ ಕೊರತೆ ಎದರಿಸುತ್ತಿವೆ. ರಾಜೀವಗಾಂಧಿ ನಗರದಲ್ಲಿ ಶೌಚಾಲಯದ ಬಾಗಿಲು ತೆರೆಯವುದು ಇಲ್ಲ. ಅಲ್ಲಿನ ನಿವಾಸಿಗಳು ಸೋಮೇಶ್ವರ ಸ್ವಾಮಿ ದೇವರ ಗುಡ್ಡವನ್ನೇ ಬಳಸಿಕೊಂಡಿದ್ದಾರೆ.

ಜನಸಂದಣಿ ಇರುವ ಹೊಸಪೇಟೆ, ಎನ್ಇಎಸ್, ಗಾಂಧಿ ಸರ್ಕಲ್, ತಿರುಮಲೆ ಮಹಾದ್ವಾರ, ಲೋಕೋಪಯೋಗಿ ಕಚೇರಿ ಮುಂದಿನ ಸರ್ಕಲ್‌ಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ, ಬಯಲಿನಲ್ಲಿಯೇ ಮಲಮೂತ್ರ
ವಿಸರ್ಜಿಸುತ್ತಿರುವುದರಿಂದ ದಾರಿ ಹೋಕರು ಮೂಗು ಮುಚ್ಚಿಕೊಂಡು ನಡೆಯಬೇಕಿದೆ. ಗದ್ದೆಬಯಲು, ಜ್ಯೋತಿನಗರ, ವಿದ್ಯಾನಗರ, ಹೊಸಹಳ್ಳಿ ರಸ್ತೆ ಬಡಾವಣೆಗಳಲ್ಲಿನ ಮನೆಗಳಲ್ಲಿ ಶೌಚಾಲಯಗಳಿವೆ. ತರಕಾರಿ ಮಾರುಕಟ್ಟೆಯಲ್ಲಿ ಶೌಚಾಲಯವಿದೆ.

ಹೊಂಬಾಳಮ್ಮನಪೇಟೆ ಕೆರೆ ಸರ್ವರೋಗಗಳನ್ನು ಹರಡುವ ತಾಣವಾಗಿದೆ. ಹಳೆಮಸೀದಿ ಮನೆಗಳಿಂದ ಹರಿದು ಬರುವ ಶೌಚಾಲಯದ ಕಲುಷಿತ ಗೌರಮ್ಮನಕೆರೆಗೆ ಹರಿಯುತ್ತಿರುವುದರಿಂದ ಪವಿತ್ರ ಕೆರೆಯೊಂದು
ದುರ್ಗಂಧ ಬೀರುವ ತಾಣವಾಗಿದೆ. ತಹಶೀಲ್ದಾರ್ ಕಚೇರಿ, ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಎದುರು ಶಾಸಕ ಎ.ಮಂಜುನಾಥ ಅವರ ನಿಧಿಯಿಂದ ಎರಡು ಇ ಶೌಚಾಲಯ ಕಟ್ಟಿಸಲಾಗಿದೆ. ಅವುಗಳನ್ನು ಬಳಸುವವರ ಸಂಖ್ಯೆ ತೀರಾ ಕಡಿಮೆ ಇದೆ. ಸರ್ಕಾರಿ ಪ್ರಥಮದರ್ಜೆ ಮತ್ತು ಸರ್ಕಾರಿ ಕಿರಿಯ ಕಾಲೇಜುಗಳಲ್ಲಿ ವಿದ್ಯಾರ್ಥಿ
ನಿಯರಿಗೆ ಶೌಚಾಲಯಗಳಿಲ್ಲ. ಮೂಲ ಸೌಲಭ್ಯ ಇಲ್ಲದೆ ಸಾವಿರಾರು ವರ್ಷ ಇತಿಹಾಸ ಹೊಂದಿರುವ ಪಟ್ಟಣದ ನವನಾಗರಿಕತೆಯ ಸೋಂಕಿಲ್ಲದೆ ಜನವಸತಿಗೆ ಅಷ್ಟೇನೂ ಅನುಕೂಲಗಳಿಲ್ಲದೆ ಹಿಂದುಳಿದಿದೆ ಎಂಬುದು ಬಹುಜನರ ಅಭಿಮತವಾಗಿದೆ.

ಅಮಾನವೀಯತೆ ಸಲ್ಲದು

ಮಾಗಡಿ ಪುರಸಭೆಯಲ್ಲಿ ಅಧಿಕಾರ ನಡೆಸಿದವರು ಮೂಲಭೂತ ಸವಲತ್ತುಗಳನ್ನು ಒದಗಿಸಿಕೊಡುವತ್ತ ಗಮನಿಸದೆ, ಆಯಕಟ್ಟಿನ ನಿವೇಶನಗಳನ್ನು ಸ್ವಂತಕ್ಕೆ ಖಾತೆ ಮಾಡಿಕೊಂಡಿದ್ದಾರೆ. ಪೌರಕಾರ್ಮಿಕರಿಗೆ ಕನಿಷ್ಠ ಕೈಗವುಸು ನೀಡದೆ ಇಂದಿಗೂ ಶೌಚಾಲಯದ ಗುಂಡಿಗೆ ಇಳಿಸುತ್ತಿರುವ ಅಮಾನವೀಯತೆ ಇದೆ.

ಗಂಗಾಧರ್ ಪ್ರಗತಿಪರ ಹೋರಾಟಗಾರ

ಬಯಲು ಅವಲಂಬನೆ ನಿಲ್ಲಲಿ

ಪಟ್ಟಣದ ರೇಷ್ಮೆ ಹುರಿಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಅಪ್ರಾಪ್ತ ಬಾಲಕಿಯರಿಗೆ, ಶೌಚಾಲಯಗಳಿಲ್ಲದೆ, ಬಯಲನ್ನೆ ಅವಲಂಬಿಸಿದ್ದಾರೆ. ಬಯಲು ಬಹಿರ್ದೆಸೆಗೆ ಹೋದಾಗ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆಗಳಿವೆ. 

ವನಜ, ರಾಜ್ಯ ಪ್ರತಿನಿಧಿ ಕರ್ನಾಟಕ ಪ್ರಾಂತ ರೈತ ಸಂಘ

ವ್ಯಾಪಾರಿಗಳಿಗೆ ಅನುಕೂಲವಾಗಲಿ

ತರಕಾರಿ ಮಾರುಕಟ್ಟೆಯಲ್ಲಿ ಸಂಗ್ರಹವಾಗುವ ಕಸ ಸಮಯಕ್ಕೆ ಸರಿಯಾಗಿ ತೆಗೆಯುತ್ತಿಲ್ಲ. ಮೂತ್ರಾಲಯವಿಲ್ಲ. ಪುರಸಭೆ ಹೂವು ಹಣ್ಣು ತರಕಾರಿ ಮಾರುವವರಿಗೆ ಅನುಕೂಲ ಮಾಡಿಕೊಡಬೇಕು.
ಗಿರೀಶ್, ಬಾಳೆಹಣ್ಣು ವ್ಯಾಪಾರಿ

ಸ್ವಚ್ಛ ಮಾಗಡಿ ಸಂಕಲ್ಪ

ಮಾಗಡಿ ಪಟ್ಟಣದಲ್ಲಿ 7 ಕಡೆ ಸುಲಭ್ ಶೌಚಾಲಯಗಳಿವೆ. ಬಯಲು ಬಹಿರ್ದೆಸೆಗೆಹೋಗುವುದನ್ನು ತಡೆಗಟ್ಟಲು ಕ್ರಮಕೈಗೊಂಡಿದ್ದೇವೆ. ಸಾರ್ವಜನಿಕರ ಸಹಕಾರದಿಂದ ಪ್ಲಾಸ್ಟಿಕ್ ಮುಕ್ತ, ಸ್ವಚ್ಛಮಾಗಡಿ ಸಂಕಲ್ಪವಿದೆ.
– ನಟರಾಜ ಎಚ್.ಎನ್. ಮುಖ್ಯ ಅಧಿಕಾರಿ ಪುರಸಭೆ.

ತ್ಯಾಜ್ಯ ವಿಲೇವಾರಿಗೆ ಕ್ರಮ

ಪಟ್ಟಣದಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿದ್ದೇವೆ. ಬಯಲು ಬಹಿರ್ದೆಸೆಗೆ ಹೋಗುವವರಿಗೆ ದಂಡ
ವಿಧಿಸಲಾಗುವುದು. ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ
ಕೈಗೊಳ್ಳಲಾಗಿದೆ.

ದಿಲೀಪ್ ಜಿ.ನದಾಫ್‌, ಹಿರಿಯ ಆರೋಗ್ಯ ಅಧಿಕಾರಿ ಪುರಸಭೆ

ಪರಿಸರ ಪ್ರಜ್ಞೆ ಬೇಕು

ನಾಗರಿಕರು ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ. ಮನೆಯ ಮುಂದಕ್ಕೆ ಬರುವ ಕಸದಗಾಡಿಯಲ್ಲಿಯೇ ಕಸವನ್ನು ಹಾಕಬೇಕು. ಹಣಕೊಟ್ಟು ಶೌಚಾಲಯ ಬಳಸುವುದನ್ನು ರೂಡಿಸಿಕೊಳ್ಳಬೇಕು.
– ಸುಷ್ಮಾ.ಬಿ.ಎಂ. ಪರಿಸರ ಎಂಜಿನಿಯರ್‌, ಪುರಸಭೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು