ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಮಾಡಲು ಕಾರ್ಖಾನೆ ಒಳಗೆ ಬಿಡುತ್ತಿಲ್ಲ: ಕಾರ್ಮಿಕರ ಆರೋಪ

ಟೊಯೊಟಾ ಕಂಪನಿ: 15ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
Last Updated 23 ನವೆಂಬರ್ 2020, 20:33 IST
ಅಕ್ಷರ ಗಾತ್ರ

ಬಿಡದಿ: ಟೊಯೊಟಾ ಕಿರ್ಲೋಸ್ಕರ್‍ ಮೋಟಾರ್ಸ್ ಕಂಪನಿಯ ಕಾರ್ಮಿಕರು ನಡೆಸುತ್ತಿರುವ ಮುಷ್ಕರ 15ನೇ ದಿನಕ್ಕೆ ಕಾಲಿಟ್ಟಿದೆ.

‘ಕಾರ್ಖಾನೆಯನ್ನು ಲಾಕ್‌ಔಟ್‌ ಮಾಡಬಾರದು. ನೌಕರರು ಪ್ರತಿಭಟನೆ ಹಿಂಪಡೆಯಬೇಕು ಎಂದು ಸರ್ಕಾರ ಆದೇಶ ನೀಡಿತ್ತು. ಆದರೆ, ಕಾರ್ಖಾನೆ ಆಡಳಿತ ಮಂಡಳಿಯು ಪ್ರತಿದಿನವೂ ಒಂದೊಂದು ನೆಪ ಹೇಳಿ ನಮ್ಮನ್ನು ಕೆಲಸ ಮಾಡಲು ಬಿಡುತ್ತಿಲ್ಲ. ಲಾಕ್ ಔಟ್ ಯತಾಸ್ಥಿತಿಯಲ್ಲಿದೆ' ಎಂದು ಟಿಕೆಎಂ ಕಾರ್ಮಿಕರ ಯೂನಿಯನ್‌ ಅಧ್ಯಕ್ಷ ಪ್ರಸನ್ನ ಸೋಮವಾರ ಪತ್ರಕರ್ತರಿಗೆ ತಿಳಿಸಿದರು.

‘ಆಡಳಿತ ಮಂಡಳಿ ಭಯದ ವಾತಾವರಣ ಸೃಷ್ಟಿಸುತ್ತಿದೆ.ಕೆಲಸದಿಂದ ಕೆಲವರನ್ನು ವಜಾಗೊಳಿಸುವುದಾಗಿ ಬೆದರಿಕೆ ಒಡ್ಡುತ್ತಿದೆ. ಕಾರ್ಖಾನೆ ಆವರಣದಲ್ಲಿ ಮೊಬೈಲ್ ಬಳಸದಂತೆ‌ ತಡೆಯೊಡ್ಡಲಾಗುತ್ತಿದೆ’ ಎಂದರು.

ಹೋರಾಟ ಬೆಂಬಲಿಸಿ ಪಾದಯಾತ್ರೆ
ಕಾರ್ಮಿಕರ ಹೋರಾಟ ಬೆಂಬಲಿಸಿ ಸೋಮವಾರ ಕಸ್ತೂರಿ ಕನ್ನಡ ಜನಪರ ವೇದಿಕೆಯ ನೇತೃತ್ವದಲ್ಲಿ ಬಿಡದಿಯ ಬೈರಮಂಗಲ ವೃತ್ತದಿಂದ ಟೊಯೊಟಾ ಕಾರ್ಖಾನೆಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವೇದಿಕೆಯ ರಾಜ್ಯ ಅಧ್ಯಕ್ಷ ರಮೇಶ್‌ ಗೌಡ, ‘3,600 ಕಾರ್ಮಿಕರ ಬೆಂಬಲವಾಗಿ ನಾವು ಪಾದಯಾತ್ರೆ ನಡೆಸಿದ್ದೇವೆ. ನಮ್ಮ ಸಂಘದಿಂದ ಮಂಗಳವಾರ ಎಲ್ಲಾ ಜಿಲ್ಲಾ ಕೇಂದ್ರದಲ್ಲಿಯೂ (ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಮತ್ತುಚಿಕ್ಕಬಳ್ಳಾಪುರ) ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ವಿಭಿನ್ನ ರೀತಿಯ ಪ್ರತಿಭಟನೆಯನ್ನು ನಡೆಸುತ್ತೇವೆ’ ಎಂದರು.

‘ಕಾರ್ಮಿಕರ ಸಮಸ್ಯೆಯನ್ನು ಟೊಯೊಟಾ ಆಡಳಿತ ಮಂಡಳಿ ಬಗೆಹರಿಸಬೇಕು. ಇಲ್ಲವಾದಲ್ಲಿ ಡಿಸೆಂಬರ್ 6 ರಂದು ಕಾರ್ಮಿಕರ ಕುಟುಂಬಸ್ಥರನ್ನು ಕರೆತಂದು ಬೃಹತ್ ಪ್ರತಿಭಟನೆಯನ್ನು ಮಾಡಲಾಗುವುದು’ ಎಂದು ಎಚ್ಚರಿಸಿದರು.

ವೇದಿಕೆಯ ಜಿಲ್ಲಾ ಅಧ್ಯಕ್ಷ ಯೋಗೇಶ್‌ ಗೌಡ ಮತ್ತು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

**
ನಮ್ಮನ್ನು ಕೆಲಸ ಮಾಡಲು ಕಾರ್ಖಾನೆಯ ಒಳಗೆ ಬಿಡುತ್ತಿಲ್ಲ. ಹಾಗಾಗಿ ನಾವು ಪ್ರತಿಭಟನೆ ಮುಂದುವರೆಸುತ್ತೇವೆ.
-ಪ್ರಸನ್ನ, ಅಧ್ಯಕ್ಷ, ಟಿಕೆಎಂ ಕಾರ್ಮಿಕರ ಯೂನಿಯನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT