ಗುರುವಾರ , ಫೆಬ್ರವರಿ 9, 2023
29 °C
ಬಿರ್ಸಾ ಮುಂಡ‌ರ 147ನೇ ವರ್ಷದ ಜಯಂತಿ ಆಚರಣೆ

ರಾಮನಗರ | ಬುಡಕಟ್ಟು ಜನರಲ್ಲಿ ಬದಲಾವಣೆ ಅಗತ್ಯ: ಶಾಂತರಾಮ್ ಸಿದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜನಪ್ರತಿನಿಧಿಗಳು, ಅಧಿಕಾರಿಗಳು ಆಸ್ಥೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಬುಡಕಟ್ಟು ಸಮುದಾಯದ ಜನರಲ್ಲಿ ಬದಲಾವಣೆ ತರಬಹುದು ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ಧಿ ಹೇಳಿದರು.

ನಗರದ ಆರ್‌ವಿಸಿಎಸ್‌ ಕಲ್ಯಾಣ ಮಂಟಪದಲ್ಲಿ ವನವಾಸಿ ಕಲ್ಯಾಣ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಇರುಳಿಗರ ಕ್ಷೇಮಾಭಿವೃದ್ಧಿ ಸಂಘಟನೆಯ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಬಿರ್ಸಾ ಮುಂಡ ಅವರ 147ನೇ ವರ್ಷದ
ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಸಮುದಾಯದವರು ಕೊಡುಗೆ ನೀಡಿದ್ದಾರೆ. ಮಹನೀಯರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದರೂ ಈ ತನಕ ಬುಡಕಟ್ಟು ಸಮುದಾಯದ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಪಠ್ಯ ಪುಸ್ತಕದಲ್ಲಿ ಅಳವಡಿಕೆ ಮಾಡುವ ಕೆಲಸ ಆಗಿಯೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಬುಡಕಟ್ಟು ಸಮುದಾಯದ ತಿಲಕ್ ಮಾಂಜಿ, ಭಗವನ್ ಬಿರ್ಸಾ ಮುಂಡರಂತಹ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಆದಾಗಿನಿಂದಲೂ ಬುಡಕಟ್ಟು ಸಮುದಾಯಕ್ಕೆ ಹೆಚ್ಚಿನ ಹಾನಿಯಾಗಿದೆ. ಸ್ವಂತ ನೆಲೆಯಿಲ್ಲದೆ ಕಾಡಂಚಿನಲ್ಲಿ ಟೆಂಟ್ ಹಾಕಿ ಜೀವನ ಸಾಗಿಸುತ್ತಿರುವ ಅನೇಕ ನಿದರ್ಶನಗಳು ಇವೆ ಎಂದು
ಹೇಳಿದರು.

ಬುಡಕಟ್ಟು ಜನಾಂಗಕ್ಕೆ ಕಾಡು ದೊಡ್ಡ ಆಸ್ತಿಯಾಗಿದೆ. ಇವರ ಆಚಾರ ವಿಚಾರ ಸಂಸ್ಕೃತಿ ವಿಚಾರದಲ್ಲಿ ಬುಡಕಟ್ಟು ಆಚರಣೆಯು ಶ್ರೀಮಂತವಾಗಿದೆ. ಇವುಗಳನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾತನಾಡಿ, ರಾಜ್ಯದಲ್ಲಿನ ಬುಡಕಟ್ಟು ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಜನಾಂಗಗಳ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ. ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.

ವಿವಿಧ ಬುಡಕಟ್ಟು ಸಮುದಾಯದ ಮುಖಂಡರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಿರ್ಸಾ ಮುಂಡಾ ಅವರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ವನವಾಸಿ ಕಲ್ಯಾಣದ ಜಿಲ್ಲಾ ಅಧ್ಯಕ್ಷ ಮಹದೇವಯ್ಯ, ಕಾರ್ಯದರ್ಶಿ ರಾಜು, ಖಜಾಂಚಿ ಸತೀಶ್, ಬಿಜೆಪಿ ಜಿಲ್ಲಾ ಅಧ್ಯಕ್ಷ ದೇವರಾಜು ಮತ್ತಿತರರು ಇದ್ದರು.

‘ಸಮುದಾಯಕ್ಕೆ ಶೇ 4 ಮೀಸಲಾತಿ ಸೌಲಭ್ಯ ಬೇಕು’

ಬುಡಕಟ್ಟು ಸಮುದಾಯದವರು ಗುರುಪೀಠವನ್ನು ಸ್ಥಾಪಿಸಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು ಎಂದು ವಾಣಿಜ್ಯ ಇಲಾಖೆ ನಿವೃತ್ತ ಅಧಿಕಾರಿ ಮುಕುಂದ ರಾವ್
ಪ್ರತಿಪಾದಿಸಿದರು.

ಈಗಾಗಲೇ ಹಲವು ಸಮುದಾಯದವರು ಗುರುಪೀಠ ಸ್ಥಾಪಿಸಿ ಹೋರಾಟ ಮಾಡಿ ಸರಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಈ ಮಾದರಿ ಅನುಸರಿಸಿದರೆ, ಹೋರಾಟಕ್ಕೆ ಹೆಚ್ಚಿನ ಬಲ ಬರುತ್ತದೆ ಎಂದು ಹೇಳಿದರು.

ಬುಡಕಟ್ಟು ಸಮುದಾಯಕ್ಕೆ ಶೇ 4ರಷ್ಟು ಮೀಸಲಾತಿ ನೀಡಬೇಕು. ಆ ಮೂಲಕ ಜನಾಂಗದ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಇರುಳಿಗರ ಭಾಷೆ ಕ್ಷೀಣಿಸುತ್ತಾ ಸಾಗುತ್ತಿದೆ. ಇರುಳಿಗ ಭಾಷೆಗೆ ಪ್ರತ್ಯೇಕ ಲಿಪಿ ನೀಡುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.